ರಾಯಚೂರು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳು ಅಧಿಕಾರದಾಸೆಗೆ ಬಿದ್ದು ಮನ ಬಂದಂತೆ ಹೇಳಿಕೆ ನೀಡುತ್ತಿವೆ. ಈ ಮೂಲಕ ಉಭಯ ಪಕ್ಷಗಳ ನಾಯಕರು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ೫೧ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕಾಳಜಿಯಿಲ್ಲ. ಕೇವಲ ಸಣ್ಣ ವಿಚಾರಗಳಿಗೆ ಹೆಚ್ಚು ಮಹತ್ವ ಕೊಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ಸಮಾಜದಲ್ಲಿ ಶಾಂತಿ ಬಯಸುತ್ತದೆ. ಯುವಕರು ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೇ ಸಮಾಜ ಕಟ್ಟುವ ಕೆಲಸ ಮಾಡಲಿ ಎಂದು ಹಾರೈಸಿದರು.
ಚುನಾವಣೆ ನಂತರ ಬಿಎಸ್‌ವೈ ಮನೆಗೆ
ಬಿಜೆಪಿಯ ಕೇಂದ್ರದ ಸಂಸದೀಯ ಮಂಡಳಿಗೆ ಮಾಜಿ ಸಿಎಂ ಯಡಿಯೂರಪ್ಪ ನೇಮಕದಿಂದ ಆನೆ ಬಲ ಬಂದಿದೆ ಎಂಬ ಬಿಜೆಪಿ ರಾಜ್ಯ ನಾಯಕರ ಹೇಳಿಕೆಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದ ಸದ್ಯಕ್ಕೆ ಬಿಎಸ್ ವೈ ನೇಮಕ ಆಗಿದೆ. ಚುನಾವಣೆ ನಂತರ ಅವರನ್ನು ಕೇಂದ್ರ ಬಿಜೆಪಿ ನಾಯಕರು ಮತ್ತೆ ಮನೆಗೆ ವಾಪಸ್ ಕಳಿಸಲಿದ್ದಾರೆ ಎಂದರು.
ಕೆಸಿಆರ್ ಹೇಳಿಕೆಗೆ ಅಸಮಾಧಾನ
ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರು ನಮ್ಮ ಆತ್ಮೀಯರು. ಹಾಗೆಂದ ಮಾತ್ರಕ್ಕೆ ರಾಯಚೂರು ಮಾತ್ರವಲ್ಲ, ರಾಜ್ಯದ ಯಾವುದೇ ಭಾಗವನ್ನು ಬಿಟ್ಟು ಕೊಡುವ ಮಾತಿಲ್ಲ. ಆಂಧ್ರದ ವಲಸಿಗರನ್ನು ನಮ್ಮವರಂತೆಯೇ ಕಂಡು ಕೃಷಿ ಕ್ಷೇತ್ರದಲ್ಲಿ ಅವಕಾಶ ಮಾಡಿ ಕೊಟ್ಟಿದ್ದೇವೆ. ರಾಜ್ಯದ ಸೌಹಾರ್ದತೆಗೆ ಧಕ್ಕೆ ಮಾಡುವ ಕೆಲಸವನ್ನು ಕೆ.ಸಿ.ಆರ್. ಮಾಡಬಾರದು ಎಂದರು. ರಾಜ್ಯದ ಸಿಎಂ ಧಕ್ಕೆ ತರುವ ಕಾರ್ಯ ಮಾಡಬಾರದು ಎಂದರು ಕುಮಾರಸ್ವಾಮಿ.
ಗಾಂಧಿ ಹಂತಕರ ವೈಭವೀಕರಣ ತಪ್ಪು
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ತ್ಯಾಗ ಬಲಿದಾನ ಮಾಡಿದ ಬಗ್ಗೆ ಓದಿ ತಿಳಿದಿದ್ದೇವೆ. ನಾವ್ಯಾರು ಆಗ ಇನ್ನೂ ಹುಟ್ಟಿರಲಿಲ್ಲ. ಅನೇಕರು ನಡೆಸಿದ ಸಂಶೋಧನೆಯಿಂದ ಮಾಹಿತಿ ಅರಿತಿದ್ದೇವೆ. ಆದರೆ ಅರಿವಿಲ್ಲದ ರಾಜಕೀಯ ಪಕ್ಷಗಳ ನಾಯಕರು ಮನ ಬಂದಂತೆ ಮಾತನಾಡುತ್ತಿದ್ದಾರೆ. ಗಾಂಧೀಜಿ ಹತ್ಯೆ ಮಾಡಿದವರನ್ನೂ ಹೋರಾಟಗಾರರಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ವಿಷಾದದ ಸಂಗತಿ ಎಂದು ಮಾಜಿ ಸಿಎಂ.
ಇದನ್ನೂ ಓದಿ| ಜಾಹೀರಾತು ವಿವಾದ | ನೆಹರು ದೇಶವನ್ನು ಮುನ್ನಡೆಸಿದ್ದಾರೆ ಎಂದ ಕುಮಾರಸ್ವಾಮಿ