ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಡೊಡ್ಮನೆ ಸೊಸೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಭದ್ರಾವತಿ ತಾಲೂಕಿನ ಕಾರೇಹಳ್ಳಿ ಹುಚ್ಚಿನದಾಸಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರೋಡ್ ಶೋ ಮೂಲಕ ಶಿವಮೊಗ್ಗ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಆವರಿಗೆ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ನಂತರ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು.
ಗೀತಾ ಶಿವರಾಜ್ ಕುಮಾರ್ ಮಾತನಾಡಿ, ನಾನು ಮೊದಲಿಗೆ ನಮ್ಮ ತಂದೆ ಬಂಗಾರಪ್ಪ, ತಾಯಿ ಶಕುಂತಲಾಗೆ ವಂದಿಸುತ್ತೇನೆ, ನಾನು ಎರಡು ವರ್ಷ ಇದ್ದಾಗ ಮೊದಲು ಅವರು ಶಾಸಕರಾಗಿದ್ದರು. ನನ್ನನ್ನು ನಿಮ್ಮಂತೆಯೇ ನಮ್ಮ ತಂದೆ ಬೆಳೆಸಿದ್ದಾರೆ. ನಾನು ನಿಮ್ಮ ಮನೆ ಮಗಳಿದ್ದ ಹಾಗೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಮುಂದೆ ಇನ್ನು ಒಳ್ಳೆಯ ಕೆಲಸ ಆಗಬೇಕಿದೆ, ನೀವು ನನಗೆ ಮತ ಕೊಟ್ಟು ಕಳುಹಿಸಿದರೆ, ಶಿವಮೊಗ್ಗದ ಸಂಸದಳಾಗುತ್ತೇನೆ.
ಇದನ್ನೂ ಓದಿ | Lok Sabha Election 2024 : ಮಗನಿಗೆ ಕೊಡಲ್ಲ ಅಂದ್ರೆ ನಂಗೇ ಕೊಡಿ; ಚಿಕ್ಕಬಳ್ಳಾಪುರ ಟಿಕೆಟ್‌ಗೆ ವಿಶ್ವನಾಥ್ ಶತಪ್ರಯತ್ನ
ಶಿವಮೊಗ್ಗ ಜಿಲ್ಲೆ ಧ್ವನಿಯಾಗಿ ಕೆಲಸ ಮಾಡಲು ಒಂದು ಅವಕಾಶ ಕೊಡಿ. ನಾನು ನಮ್ಮ ತಂದೆ, ತಮ್ಮನಿಗೆ ಕೆಟ್ಟ ಹೆಸರು ಬರದ ಹಾಗೆ ನಡೆದುಳ್ಳುತ್ತೇನೆ. ಟಿಕೆಟ್ ಕೊಟ್ಟಿರುವುದು ಪಕ್ಷ, ಪಕ್ಷಕ್ಕೆ ಕೆಟ್ಟ ಹೆಸರು ತರುವುದಿಲ್ಲ. ನಮ್ಮ ತಂದೆ ಮಾಡಿದ ಕೆಲಸಗಳು, ಅವರ ಯೋಜನೆಗಳು ಇವತ್ತು ಸಹ ಪ್ರಸ್ತುತ. ಸರ್ಕಾರದ ಗ್ಯಾರಂಟಿಗಳನ್ನು ಜನರ ಮನೆ ಮನೆಗೆ ತಿಳಿಸಬೇಕು. ಹಿಂದಿನ ಸರ್ಕಾರ ಹೇಳಿದಂತೆ ನಡೆದಿಲ್ಲ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನನ್ನನ್ನು ಗೆಲ್ಲಿಸಿದರೆ ಜಿಲ್ಲೆಯ ಮೊದಲ ಸಂಸದೆ ಆಗುತ್ತೇನೆ ಎಂದು ಹೇಳಿದರು.
ಸಚಿವ ಮಧುಬಂಗಾರಪ್ಪ ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ನಿಲ್ಲಲು ಸಹಕಾರ ನೀಡಿದ ನಮ್ಮ ಬಾವ ಶಿವರಾಜ್ ಕುಮಾರ್ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ. ನಾವು ತಂದೆ ಬಂಗಾರಪ್ಪರನ್ನು ಕಳೆದುಕೊಂಡಿರಬಹುದು, ಆದರೆ, ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಲಕ್ಷಾಂತರ ಬಂಗಾರಪ್ಪ ಇದ್ದಾರೆ. ಮಧುಬಂಗಾರಪ್ಪ ಗೀತಾಶಿವರಾಜ್ ಕುಮಾರ್ ಅವರ ಮೀಡಿಯೇಟರ್ ಅಲ್ಲ. ಗೀತಕ್ಕ ನಿಮ್ಮ ಧ್ವನಿಯಾಗಿ ನೇರವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ರಾಘವೇಂದ್ರ ಅವರು ಮೋದಿ ಹೆಸರಿನಲ್ಲಿ ಗೆದ್ದಿದ್ದಾರೆ. ನೀವು ಈಗ ಸಿಎಂ ಮಕ್ಕಳು. ನಾವು 1998ರಲ್ಲೇ ನಾವು ಸಿಎಂ ಮಕ್ಕಳು. ನಮ್ಮ ತಂದೆ ಮಹಾನ್ ವ್ಯಕ್ತಿ. ನಮ್ಮ ತಂದೆ ಅವರು ಹೇಳಿದ್ದರು, ನಾವು ಒಂದು ಸಲ ಸೋತು ರಾಜಕೀಯ ಮಾಡಬೇಕು ಅಂತ. ಶಿವಮೊಗ್ಗದ ಧ್ವನಿಯಾಗಿ ಪಾರ್ಲಿಮೆಂಟ್‌ನಲ್ಲಿ ಗೀತಕ್ಕ ನಿಲ್ಲುತ್ತಾರೆ. ಶರಾವತಿ ಸಂತ್ರಸ್ತರ ಪರ ಪ್ರಧಾನಿ ಮೋದಿ ಮಾತಾನಾಡಬೇಕಿತ್ತು, ಆದರೆ ಪ್ರಯೋಜನವಾಗಿಲ್ಲ. ನಿಮ್ಮ ಆಶೀರ್ವಾದದಿಂದ ನೀವು ಗೀತಕ್ಕಳನ್ನು ಗೆಲ್ಲಿಸಿದರೆ ಅವರು ಐದು ವರ್ಷ ಇಲ್ಲೇ ಇರುತ್ತಾರೆ, ಜನರ ಪರವಾಗಿ ಗೀತಾಕ್ಕ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | Gift Politics: ಕಾಂಗ್ರೆಸ್‌ನಿಂದ ಮತದಾರರಿಗೆ ಕುಕ್ಕರ್ ಆಮಿಷ; ನನಗ್ಯಾಕೆ ಕೊಡಲಿಲ್ಲ ಎಂದ ವೃದ್ಧೆ ಮೇಲೆ ಹಲ್ಲೆ
ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಸೇರಿದಂತೆ ಜಿಲ್ಲೆಯ ನಾಯಕರು ಸೇರಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.