ಬಳ್ಳಾರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್‌ರೆಡ್ಡಿ ಹಾಗೂ ಪಕ್ಷದ ಮುಖಂಡರು ಕ್ಷೇತ್ರದ ವಾರ್ಡ್ ನಂ. 5 ಹಾಗೂ 6ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ನಗರದ ವಾರ್ಡ್ ನಂ.5ರಲ್ಲಿ ಬರುವ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಚಾರ ಕಾರ್ಯ ಆರಂಭಿಸಿ, ಕಾಕರ್ಲತೋಟ ಪ್ರದೇಶ, ಮುಂಡ್ರಿಗಿ, ವೆಂಕಟಮ್ಮ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ತದನಂತರ ವಾರ್ಡ್ ನಂ. 6ರಲ್ಲಿ ಪ್ರಚಾರ ನಡೆಸಿದರು.
ಈ ವೇಳೆ ಸ್ಥಳೀಯರನ್ನುದ್ದೇಶಿಸಿ ಮಾತನಾಡಿದ ಅಭ್ಯರ್ಥಿ ನಾರಾ ಭರತ್‌ರೆಡ್ಡಿ, ಕಳೆದ 15 ವರ್ಷಗಳ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರು ಗಣಿಗಾರಿಕೆಯನ್ನು ನ್ಯಾಯಬದ್ಧವಾಗಿ ಮಾಡಿದ್ದರೆ, ಉದ್ಯಮ ಉಳಿದು ಬೆಳೆದು ಇವತ್ತಿಗೆ 50 ಸಾವಿರ ಜನರಿಗೆ ಉದ್ಯೋಗ ಸಿಗುತ್ತಿತ್ತು. ಗಣಿಗಾರಿಕೆಯನ್ನು ಮನಸೋ ಇಚ್ಛೆ ಅಕ್ರಮವಾಗಿ ನಡೆಸಿದ ಕಾರಣ ಅದಿರು ರಫ್ತು ನಿಂತು ಹೋಯಿತು. ಗಣಿಗಾರಿಕೆಗೆ ಪೂರಕವಾಗಿ ಬೆಳೆಯಬೇಕಿದ್ದ ಸ್ಟೀಲ್ ಉದ್ಯಮವು ಕೂಡ ಬೆಳೆಯಲಿಲ್ಲ. ಅದಿರು ರಫ್ತು ಸ್ಥಗಿತ ಆಯಿತು. ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದರು ಎಂದು ಆರೋಪಿಸಿದರು.
ಇದನ್ನೂ ಓದಿ: SSLC Result 2023 : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ನಾಲ್ವರು ವಿದ್ಯಾರ್ಥಿಗಳು ಔಟ್ ಆಫ್ ಔಟ್
ಜೀನ್ಸ್ ರಾಜಧಾನಿಯಾಗಿ ಬಳ್ಳಾರಿ
ಇಂದು ಜನರಿಗೆ ನ್ಯಾಯ ನೀಡುವ ಪಕ್ಷ ಅಂತಿದ್ದರೆ ಅದು ಕಾಂಗ್ರೆಸ್ ಮಾತ್ರ. ಬಳ್ಳಾರಿಯನ್ನು ಜೀನ್ಸ್ ರಾಜಧಾನಿ ಮಾಡುವುದಾಗಿ ನಮ್ಮ ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ವಿಚಾರಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಈಗಾಗಲೇ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಭರವಸೆಗಳನ್ನು ಜಾರಿಗೆ ತರಲಿದೆ ಎಂದರು.
ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್. ಮಹಮ್ಮದ್ ರಫೀಕ್ ಮಾತನಾಡಿ, ಸೂರ್ಯ-ಚಂದ್ರರು ಹುಟ್ಟುವುದು ಎಷ್ಟು ಸತ್ಯವೋ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು, ಭರತ್ ರೆಡ್ಡಿ ಗೆಲ್ಲುವುದು ಅಷ್ಟೇ ಸತ್ಯ ಎಂದು ಹೇಳಿದರು.
ಇದನ್ನೂ ಓದಿ: SSLC Result 2023 Live : SSLCಯಲ್ಲಿ 83% ಮಂದಿ ಪಾಸ್, ಚಿತ್ರದುರ್ಗ ಈ ಬಾರಿ ಪ್ರಥಮ
ಈ ಸಂಧರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ವಸಂತ್ ರಾವ್ ಪೂರ್ಕೆ, ಆಂಧ್ರಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಶೇಕ್ ಮಸ್ತಾನ್ ವಲಿ, ತಮಿಳುನಾಡು ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಶೇಕ್ ಅಸ್ಲಾಂ ಭಾಷಾ, ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಮಹಾನಗರ ಪಾಲಿಕೆಯ ಮೇಯರ್ ಡಿ.ತ್ರಿವೇಣಿ, 5ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯ ರಾಜಶೇಖರ್, ವಾರ್ಡ್ ನಂ.6 ರ ಪಾಲಿಕೆಯ ಸದಸ್ಯೆ ಪದ್ಮರೋಜಾ, ಮುಖಂಡರಾದ ಕೆ.ತಾಯಪ್ಪ, ಅಲಿವೇಲು ಸುರೇಶ್, ಮುಂಡ್ಲೂರು ವಿಜಯಕುಮಾರ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.