Site icon Vistara News

Veerashaiva Lingayat: ಡಿ.ಕೆ. ಶಿವಕುಮಾರ್‌ ʼಅಣೆಕಟ್ಟೆʼ ಹೇಳಿಕೆ: ಸಿಎಂ ಬೊಮ್ಮಾಯಿ, ಸಿ.ಸಿ. ಪಾಟೀಲ್ ಆಕ್ರೋಶ

congress cannot devide veerashaiva lingayat community says basavaraj bommai and cc patil

#image_title

ಬೆಂಗಳೂರು: ಬಿಜೆಪಿಯ ಅಣೆಕಟ್ಟೆ ಒಡೆದಿದ್ದು, ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಕಡೆಗೆ ಆಗಮಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಿ.ಸಿ. ಪಾಟೀಲ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಡಿ.ಕೆ. ಶಿವಕುಮಾರ್‌ ಅವರೇ, ಲಿಂಗಾಯತ ಡ್ಯಾಮಿನ ಬಗ್ಗೆ ಮಾತನಾಡಿದ್ದೀರಿ. ಇದು ಎಷ್ಟು ಗಟ್ಟಿ ಇದೆ ಎಂದು ಅರಿವು ನಿಮಗಿಲ್ಲ. ನೀವು ಅದನ್ನು ಒಡೆಯುವ ಭ್ರಮೆಯಲ್ಲಿದ್ದೀರಿ. 2018ರಲ್ಲಿ ನಿಮ್ಮ ಸರ್ಕಾರ ಇದ್ದು ಇದನ್ನು ಒಡೆಯಲು ಸಾಧ್ಯವಾಗಿಲ್ಲ. ಈಗೇನು ಮಾಡಲು ಸಾಧ್ಯ? ಮೊದಲು ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ, ನಿಮ್ಮ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮೇ 13ಕ್ಕೆ ಯಾರ್ ಯಾರ ಡ್ಯಾಮ್‌ನಲ್ಲಿ ಎಷ್ಟು ನೀರಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಹೇಳಿಕೆಯಿಂದ ಲಿಂಗಾಯತ ಧರ್ಮವನ್ನು ಒಡೆಯುವ ಮತ್ತೊಂದು ಹುನ್ನಾರ ಬಯಲಾಗಿದೆ ಎಂದಿದ್ದಾರೆ.

ಈ ಕುರಿತು ಸಚಿವ ಸಿ.ಸಿ. ಪಾಟೀಲ್‌ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಡಿಕೆಶಿಯವರೇ, ನಮ್ಮ ನಾಡಿನಲ್ಲಿ ಲಿಂಗಾಯತರ ಡ್ಯಾಮನ್ನು ಒಡೆಯುವ ನಿಮ್ಮ ಹಗಲು ಕನಸು ಯಾವತ್ತೂ ನನಸಾಗುವುದಿಲ್ಲ. ಹಿಂದೆ ನಿಮ್ಮ ಸಿದ್ದರಾಮಯ್ಯನವರ ಸರ್ಕಾರವಿದ್ದಾಗಲೂ ಲಿಂಗಾಯತ ಸಮಾಜವನ್ನು ಒಡೆದು ಆಳುವ ಕುತಂತ್ರಕ್ಕೆ ಕೈ ಹಾಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಣೆಕಟ್ಟೆಯೇ ಒಡೆದು ಹೋಗಿ ಒಣಗಿತ್ತು ಎಂಬುದನ್ನು ಜನ ಇನ್ನೂ ಮರೆತಿಲ್ಲ. ಕಾಂಗ್ರೆಸ್ಸಿನಿಂದ ಮುಂದೆ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳುವ ತಾಕತ್ತು ನಿಮಗಿದೆಯೇ ? ಹಿಂದೆ ಹಿರಿಯ ಮುತ್ಸದ್ದಿ ಶ್ರೀ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೇಗೆ ಹೀನಾಯವಾಗಿ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ನೀವು ಏನೇ ಮಾಡಿದರೂ ಲಿಂಗಾಯತರ ಅಣೆಕಟ್ಟೆ ಸದಾ ಬಿಜೆಪಿ ಪರ ಸಮೃದ್ಧ ಅಲೆಗಳಿಂದ ತುಂಬಿರುತ್ತದೆ. ಈ ಅಣೆಕಟ್ಟೆಗೆ ಕೈ ಹಾಕುವ ನಿಮ್ಮ ವ್ಯರ್ಥ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ನೀವು ಮರೆಯಬೇಡಿ ಎಂದಿದ್ದಾರೆ.

ಇದನ್ನೂ ಓದಿ: Karnataka Congress: ಬಿಜೆಪಿ ಅಣೆಕಟ್ಟೆ ಒಡೆದಿದೆ; ವೀರಶೈವ ಲಿಂಗಾಯತರು ಕಾಂಗ್ರೆಸ್‌ ಸೇರುವುದನ್ನು ತಡೆಯಲಾಗದು: ಡಿಕೆಶಿ

Exit mobile version