Site icon Vistara News

ಸೋಮನಾಥ ದೇಗುಲ ಉದ್ಘಾಟನೆಗೆ ಹೋಗದಂತೆ ರಾಷ್ಟ್ರಪತಿಗೆ ಕಾಂಗ್ರೆಸ್‌ ನಿರ್ಬಂಧ ಹಾಕಿತ್ತು: ಪ್ರಲ್ಹಾದ್‌ ಜೋಶಿ

Pralhad Joshi

ರಾಯಚೂರು: ಇತಿಹಾಸವನ್ನು ನೋಡಿದರೆ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ತಿಳಿಯುತ್ತದೆ. ಸೋಮನಾಥ ದೇವಸ್ಥಾನ ಉದ್ಘಾಟನೆ ವೇಳೆ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಹೋಗಬಾರದು ಎಂದು ಕಾಂಗ್ರೆಸ್ ನಿರ್ಬಂಧ ಹಾಕಿತ್ತು. ಸೋಮನಾಥ ದೇವಸ್ಥಾನಕ್ಕೆ ರಾಷ್ಟ್ರಪತಿ ಹೇಗೆ ಹೋಗುತ್ತಾರೆ ಎಂದು ಆವತ್ತೇ ಪ್ರಶ್ನೆ ಎತ್ತಿತ್ತು. ಇದು ಕಾಂಗ್ರೆಸ್ ಮನಸ್ಥಿತಿ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು.

ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಮ ಕಾಲ್ಪನಿಕ ವ್ಯಕ್ತಿ ಎಂದು ಹೇಳಿ ಕರಸೇವಕರ ಮೇಲೆ ಕೇಸ್ ಹಾಕಿದ್ದು, ಗೋಲಿ ಬಾರ್ ಮಾಡಿದ್ದು ಕಾಂಗ್ರೆಸ್. ರಾಮಸೇತು ಕಾಲ್ಪನಿಕ ಎನ್ನುವ ಮೂಲಕ ಕಾಂಗ್ರೆಸ್‌ ಹಿಂದು ವಿರೋಧಿ ನೀತಿ ಅನುಸರಿಸಿದೆ. ಇದು ಮುಸ್ಲಿಂ ತುಷ್ಟೀಕರಣದ ಒಂದು ಭಾಗವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಈ ರೀತಿ ಚಿಲ್ಲರೇ ತುಷ್ಟೀಕರಣ ಮಾಡುತ್ತಲೇ ಬಂದಿದ್ದಾರೆ. ಈ ರೀತಿ ಇಷ್ಟು ವರ್ಷ ಗೆದ್ದಿದ್ರಲ್ಲ, ನೀವು ಬಾಂಬ್ ಹಾಕಿ ಗೆದ್ದಿದ್ರಾ? ಈ ರೀತಿ ಕಾಂಗ್ರೆಸ್‌ನ ಕಪೋಲ ಕಲ್ಪಿತ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ. ಕಾಂಗ್ರೆಸ್ ಪಾರ್ಟಿ ಇಲ್ಲಿವರೆಗೆ ಡಿವೈಡ್ ಆ್ಯಂಡ್ ರೂಲ್ ಮಾಡಿದೆ. ಇಂದಿರಾ ಗಾಂಧಿ ಹತ್ಯೆ ಆದಾಗ ಸಿಖ್ಖರನ್ನು ಕೊಂದು ಹಾಕಿದ್ದು, ರಾಮ ಮಂದಿರ ಹೋರಾಟದ ಸಂದರ್ಭದಲ್ಲಿ ಹಿಂದುಗಳಿಗೆ ಗೋಲಿಬಾರ್ ಮಾಡಿಸಿದ್ದು ನೀವೇ… ನೀವು ಮುಸ್ಲಿಂ ತುಷ್ಟೀಕರಣ ರಾಜಕಾರಣ ಮಾಡುತ್ತಲೇ ಬಂದಿದ್ದೀರಿ. ರಾಮಜನ್ಮಭೂಮಿ ತೀರ್ಪು ಕೊಡಬಾರದು ಎಂದು ಕಪಿಲ್ ಸಿಬಲ್ ನಿಮ್ಮ ಪಾರ್ಟಿಯಿಂದ ಹೋಗಿದ್ದರಾ ಇಲ್ಲವೇ ಎಂದ ಅವರು, ಈ ರೀತಿ ಕಾಂಗ್ರೆಸ್ ಚಿಲ್ಲರೆ ಆರೋಪ ಮಾಡುತ್ತಲೇ ಇರುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Ram Mandir: ಮಂದಿರ ಆಹ್ವಾನ ತಿರಸ್ಕಾರ; ಚುನಾವಣೆಯಲ್ಲಿ ಸೋಲೆಂದ ಎಂದ ಕಾಂಗ್ರೆಸ್‌ ನಾಯಕ!

ಲೋಕಸಭಾ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಟಿಕೆಟ್ ತೀರ್ಮಾನ ಆಗುವುದು ಇಲ್ಲೆ. ಆ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಿನ್ನೆ ಮೊನ್ನೆಯ ಸಭೆಯಲ್ಲಿ ಟಿಕೆಟ್ ಬಗ್ಗೆ ಚರ್ಚೆ ಆಗಿಲ್ಲ. ಅಧ್ಯಕ್ಷರು ಇಂಡಿಪೆಂಡೆಂಟ್ ಆಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದರಲ್ಲಿ ಯಾರ ಪರ ಬಂದಿದೆ, ಯಾರ ಪರ ಬಂದಿಲ್ಲ ಅಂತ ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಾಪೋಹದ ಸುದ್ದಿ ಎಂದು ಹೇಳಿದರು.

ಜಾಹೀರಾತು ಕೊಟ್ಟ ತಕ್ಷಣ ಗ್ಯಾರಂಟಿಗಳು ಜನರಿಗೆ ತಲುಪಿದೆ ಅಂತಲ್ಲ: ಬಿ.ವೈ. ವಿಜಯೇಂದ್ರ

BY Vijayendra

ರಾಯಚೂರು: ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾಗಿ ಅಲೆಯಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಆತಂಕದಲ್ಲಿದ್ದಾರೆ. ರಾಮಮಂದಿರ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನಡವಳಿಕೆಯನ್ನು ಮತದಾರರು ಗಮನಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ ತಕ್ಷಣ ಗ್ಯಾರಂಟಿಗಳು ಜನರಿಗೆ ತಲುಪಿದೆ ಅಂತಲ್ಲ. ಮುಂದೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಅನುಷ್ಠಾನಕ್ಕೆ ತಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದೆಡೆ ಮೂವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಅಂತ ಅವರ ಪಕ್ಷದ ನಾಯಕರೇ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ಈ ಸರ್ಕಾರ ಬಂದಮೇಲೆ ಒಂದು ಅಭಿವೃದ್ಧಿ ಕೆಲಸವೂ ಆಗಿಲ್ಲ ಎಂದು ಜನರು ಶಾಪ ಹಾಕುತ್ತಿದ್ದಾರೆ. ಆದರೆ, ಬರಗಾಲದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲದಲ್ಲಿ ತ್ರಿಪೇಸ್ ವಿದ್ಯುತ್ ಕೊಡಲು ಸರ್ಕಾರಕ್ಕೆ ಆಗಿಲ್ಲ. ಇದು ಜನ ವಿರೋಧಿ, ಬಡವರ ವಿರೋಧಿ, ರೈತ ವಿರೋಧಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | BJP Karnataka: ಮಂಡ್ಯ ಟಿಕೆಟ್ ಬಗ್ಗೆ ಶೀಘ್ರ ತೀರ್ಮಾನ; ಸುಮಲತಾ ಜತೆ ಮಾತನಾಡುವೆನೆಂದ ವಿಜಯೇಂದ್ರ

ಅಲ್ಪಸಂಖ್ಯಾತರು ಬೇಸರ ಆಗುತ್ತಾರೆ ಎಂಬ ಭಯ ಅವರಿಗಿದೆ. ಮುಖ್ಯಮಂತ್ರಿ ನಡೆ ನೋಡಿದರೆ ಅಲ್ಪಸಂಖ್ಯಾತರ ಮತವನ್ನಷ್ಟೆ ಪಡೆದು ಅಧಿಕಾರಕ್ಕೆ ಬಂದಿದ್ದಾರಾ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ದಿನ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಬೇಕು ಎನ್ನುತ್ತಾರೆ. ಮತ್ತೊಂದೆಡೆ ಆಮಂತ್ರಣ ಪತ್ರಿಕೆ ಬಂದಿಲ್ಲ ಎನ್ನುತ್ತಾರೆ. ಯಾರಿಗೆ ಆಹ್ವಾನ ಬಂದಿದೆ, ಅವರು ನಾನು ಹೋಗುವುದಿಲ್ಲ ಎಂದು ತೀರ್ಮಾನ ಮಾಡುತ್ತಾರೆ. ಈ ರೀತಿಯಾಗಿ ದೆಹಲಿಯಿಂದ ಬೆಂಗಳೂರುವರೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಗೊಂದಲಮಯವಾಗಿದೆ ಎಂದು ಹೇಳಿದರು.

ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಬರುವುದು ಖಾತ್ರಿಯಾಗಿದೆ‌. ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನ ಮಂತ್ರಿ ಆಗದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version