ವಿಜಯಪುರ: ದೇವರು ವರ ಕೊಡಲ್ಲ, ಶಾಪವೂ ಕೊಡಲ್ಲ. ಆದರೆ ಅವಕಾಶ ಕೊಡುತ್ತಾನೆ. ಅದರಂತೆ ಕಾಂಗ್ರೆಸ್ ಆಯ್ಕೆ ಒಂದು ಅವಕಾಶ ಇದ್ದಂತೆ, ಅದನ್ನು ರಾಜ್ಯದ ಜನರು ಸದುಪಯೋಗ ಮಾಡಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ (Congress Convention) ಅಧಿಕಾರಕ್ಕೆ ಬಂದೇ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ದರ್ಬಾರ್ ಶಾಲಾ ಮೈದಾನದಲ್ಲಿ ಕಾಂಗ್ರೆಸ್‌ನಿಂದ ಶುಕ್ರವಾರ ಆಯೋಜಿಸಿದ್ದ ಕೃಷ್ಣಾ ಜಲಾಂದೋಲನ ಸಮಾವೇಶದಲ್ಲಿ ಮಾತನಾಡಿ, ನಮ್ಮ ಸರ್ವೇ ತಂಡ ವಿಜಯಪುರ ಜಿಲ್ಲೆಯಲ್ಲಿ ಎಂಟರಲ್ಲಿ ಆರು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿತ್ತು. ಆದರೆ ಇಲ್ಲಿ ಸೇರಿದ ಜನರನ್ನು ನೋಡಿದರೆ ಎಂಟಕ್ಕೆ ಎಂಟು ಸ್ಥಾನ ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನರಿಗಾದ ಅನ್ಯಾಯವನ್ನು ಸರಿಪಡಿಸಲು ವಿಜಯಪುರಕ್ಕೆ ಬಂದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ನನೆಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ರೈತನಿಗೆ ಸಂಬಳ ಇಲ್ಲ, ಪಿಂಚಣಿ ಇಲ್ಲ, ಅದರಂತೆ ನಿವೃತ್ತಿ ಸಹ ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅನ್ನದಾತನ ಪರವಾಗಿ ನಿಲ್ಲಲು ಪ್ರತಿಜ್ಞೆ ಮಾಡಲು ಇಲ್ಲಿಗೆ ಬಂದಿದೆ. ನುಡಿದಂತೆ ನಡೆದು, ನಿಮ್ಮ ಏಳಿಗೆಗಾಗಿ ದುಡಿಯುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ | Amit Shah | ಶೀಘ್ರವೇ ಸಹಕಾರ ವಿವಿ ಸ್ಥಾಪನೆ, ಮೋದಿಯಿಂದ ರೈತಪರ ಯೋಜನೆಗಳು: ಅಮಿತ್ ಶಾ
ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷವಾಗಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ. ಅಧಿಕಾರಕ್ಕೆ ಬಂದಾಗ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. 15 ಲಕ್ಷ ರೂ.ಗಳನ್ನು ಖಾತೆಗೆ ಹಾಕುತ್ತೇವೆ ಎಂದೂ ಹೇಳಿದ್ದರು. ಆದರೆ ರೈತರ ಆದಾಯ ಪಾತಾಳಕ್ಕೆ ಇಳಿದಿದ್ದು, ಬೆಲೆ ಏರಿಕೆ ಗಗನಕ್ಕೆ ಏರಿದೆ. ಈ ಬಿಜೆಪಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಹೇಳಿದರು.
ಅಂದಾಜು ಸಮಿತಿಯಲ್ಲಿ ಎಸ್ಟಿಮೇಟ್ ಡಬಲ್ ಮಾಡುವ ಹುನ್ನಾರ ನಡೆಯುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ನಾವು ಸಹ ಸಚಿವರಾಗಿ ಕೆಲಸ ಮಾಡಿದ ಅನುಭವಿಗಳಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯ ಪ್ರತಿ ಎಸ್ಟಿಮೇಟ್‌ನ ತನಿಖೆ ಪ್ರಾಮಾಣಿಕವಾಗಿ ಆಗುತ್ತದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತ ಅಫಿಡವಿಟ್ ಯಾವಾಗ ಹಾಕುತ್ತೀರೋ ತಿಳಿಸಬೇಕು. ಇದನ್ನು ರಾಷ್ಟ್ರೀಯ ಯೋಜನೆಯಾಗಿ ಯಾವಾಗ ಮಾಡುತ್ತೀರೋ ತಿಳಿಸಬೇಕು. ಗೋವಾ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಆದರೂ ಯಾವುದೇ ಕ್ರಮ ಆಗಿಲ್ಲ. ಬರೀ ಮೋಸದ ಸರ್ಕಾರವಿದು. ಈ ಸರ್ಕಾರಕ್ಕೆ ಇನ್ನು ಕೇವಲ 90 ದಿನ ಬಾಕಿ ಇದೆ, ಹೀಗಾಗಿ ಕಾಂಗ್ರೆಸ್ ಅನ್ನು ಬಲಪಡಿಸಿ ಎಂದು ಮನವಿ ಮಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಹೆಚ್ಚು ಒಣಪ್ರದೇಶವನ್ನು ಹೊಂದಿದೆ. ಇಲ್ಲಿ ಕಾವೇರಿ, ಕೃಷ್ಣಾ ಸೇರಿ ಅನೇಕ ನದಿಗಳಿವೆ. 3475 ಟಿಎಂಸಿ ನೀರು ಇವುಗಳಿಂದ ಹರಿಯುತ್ತದೆ. 1690 ಟಿಎಂಸಿ ನಮ್ಮ ಬಳಕೆಗಿದೆ, ಆದರೆ, ಇದರಲ್ಲಿ ನಾವು ಬಳಸಿಕೊಂಡಿದ್ದು ಅತ್ಯಲ್ಪ ಎಂದು ಹೇಳಿದರು.
ಹೆಚ್ಚು ನೀರಾವರಿ ಬಳಕೆಗೆ ಅವಕಾಶವಿರುವ ಪ್ರದೇಶ ಕೃಷ್ಣಾ ಜಲಾನಯನ ಪ್ರದೇಶವಾಗಿದ್ದು, ದೇಶದಲ್ಲಿ ಶೇ.48.08 ನೀರಾವರಿಗೆ ಬಳಸಿಕೊಂಡರೆ, ಕರ್ನಾಟಕದಲ್ಲಿ ಕೇವಲ ಶೇ.27 ಮಾತ್ರ ನೀರಾವರಿಗೆ ಬಳಸಿಕೊಳ್ಳಲಾಗಿದೆ. ಇಡೀ ದೇಶವನ್ನು ಗಮನಿಸಿದರೆ, ಕರ್ನಾಟಕದಲ್ಲಿ ಲಭ್ಯ ನೀರು ಬಳಸಿಕೊಂಡಿರುವುದು ಕಡಿಮೆ. ಮಿಸ್ಟರ್ ಬಸವರಾಜ ಬೊಮ್ಮಾಯಿ, ನಿಮ್ಮ ಡಬಲ್ ಎಂಜಿನ್ ಸರ್ಕಾರ ಯಾಕೆ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುತ್ತಿಲ್ಲ ಎಂದು ಕಿಡಿ ಕಾರಿದರು.
ಅಲಿ ಬಾಬಾ ಮತ್ತು 40 ಮಂದಿ ಕಳ್ಳರ ತಂಡವನ್ನು ಕಿತ್ತು ಹಾಕಿ
ನಾವು ಅಧಿಕಾರಕ್ಕೆ ಬಂದ ಮೇಲೆ ಕೃಷ್ಣಾ ಮೇಲ್ದಂಡೆ ಯೋಜನೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದ ಸಿದ್ದರಾಮಯ್ಯ, ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ಇದೆ. ವಜ್ಜಲ್ ಗುತ್ತಿಗೆದಾರನಿಂದ ಎಸ್ಟಿಮೇಟ್ ಹೆಚ್ಚಳ ಆಗಿದೆ. 750 ಕೋಟಿ ರೂಪಾಯಿ ಇದ್ದದ್ದು 2 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಎಸ್ಟಿಮೇಟ್ ಕಮಿಟಿಯ ಶಾಸಕ ಹೂಲಗೇರಿ ಸಿಎಂಗೆ ದೂರು ನೀಡಿದ್ದಾರೆ. ತನಿಖೆ ಮಾಡಲು ಹೋದರೆ ಗುಂಡಾಗಿರಿ ಮಾಡುತ್ತಾರೆ. ರಾಜ್ಯದ ಜನರಿಗೆ ನೀರು ಕೊಡುವ 45 ಸಾವಿರ ಕೋಟಿ ರೂ.ಗಳಲ್ಲೂ ಲೂಟಿಯಾಗಿದೆ. ಅಲಿ ಬಾಬಾ 40 ಕಳ್ಳರು ಯಾರೆಂದರೆ, ಅದು ಬೊಮ್ಮಾಯಿ ಹಾಗೂ ಸಚಿವರು. ಈ ಅಲಿ ಬಾಬಾ ಮತ್ತು 40 ಮಂದಿ ಕಳ್ಳರ ತಂಡವನ್ನು ಕಿತ್ತು ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅಚ್ಛೇ ದಿನ್ ಎಲ್ಲಿ ಬಂದಿದೆಯಪ್ಪಾ?
ಅಚ್ಛೇ ದಿನ್ ಎಲ್ಲಿ ಬಂದಿದೆ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಬಗ್ಗೆ ದೂರು ಕೊಟ್ಟಿದ್ದಾರೆ. ನರೇಂದ್ರ ಮೋದಿ ನ ಖಾವುಂಗಾ ನ ಖಾನೆ ದೂಂಗಾ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈ ರಾಜ್ಯ ಉಳಿಯಲು, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣವಾಗಲು ಹಾಗೂ ಭ್ರಷ್ಟಾಚಾರ ತೊಲಗಲು ಕಾಂಗ್ರೆಸ್ ಸರ್ಕಾರ ಬರಬೇಕು ಎಂದು ಹೇಳಿದರು.
ನಾವು ಮಾಡಿದ ಅನೇಕ ಯೋಜನೆಗಳನ್ನು ಬಿಜೆಪಿಯವರು ನಿಲ್ಲಿಸಿ ಬಿಟ್ಟಿದ್ದಾರೆ. ಕಬ್ಬಿಗೆ ಪ್ರತಿ ಟನ್ ಗೆ 3500 ರೂಪಾಯಿ ಕೊಡಿ ಎಂದು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ 350 ರೂಪಾಯಿ ಕೊಟ್ಟಿದೆ. ಆದರೆ, ನರೇಂದ್ರ ಮೋದಿ 150 ರೂಪಾಯಿ ಹೆಚ್ಚು ಮಾಡಿದ್ದಾರೆ ಎಂದು ರೈತರಿಗೆ ಬಿಜೆಪಿ ನಾಯಕರು ಟೋಪಿ ಹಾಕುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದ ಬಗ್ಗೆ ಕಣ್ಣೀರು ಸುರಿಸುತ್ತೀರಿ, ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಎನ್ನುತ್ತೀರಿ, 1 ವರ್ಷ 20 ತಿಂಗಳು ಆಗಿದ್ದರೂ ಇನ್ನೂ ಮಾಡಲು ಆಗಿಲ್ಲ. ಹೀಗಾಗಿ ರಾಜ್ಯದ ಜನರಿಗೆ ಒಳ್ಳೆಯದಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದಕ್ಕೇ ಜನತೆಯ ಬೆಂಬಲ ಬೇಕು ಎಂದು ಮನವಿ ಮಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಜನತೆಗೆ ಮೋಸ ಮಾಡುತ್ತಿದೆ. ಅಮಿತ್ ಶಾ, ಬಸವರಾಜ ಬೊಮ್ಮಾಯಿಯವರೇ ನಿಮ್ಮ ಸರ್ಕಾರದ ವಿದಾಯದ ಸಮಯ ಬಂದಿದೆ. ಈಗಲಾದರೂ ಕೃಷ್ಣಾ ನೀರಾವರಿ ಯೋಜನೆಯನ್ನು ಯಾವಾಗ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುತ್ತೀರಿ? ಯಾವಾಗ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುತ್ತೀರಿ ಎಂದು ಜನತೆಗೆ ತಿಳಿಸಿ ಎಂದು ಒತ್ತಾಯಿಸಿದರು. …
ಕೃಷ್ಣಾ ಯೋಜನೆಯ ಮೊದಲ ಹಾಗೂ ಎರಡನೇ ಹಂತದ ಯೋಜನೆಗಳನ್ನು ಕಾಂಗ್ರೆಸ್ ಪೂರ್ಣಗೊಳಿಸಿ ತೋರಿಸಿದೆ.…2013ರಿಂದ ೨೦18ರ ನಡುವೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ 2 ಸಾವಿರ ಕಿಲೋಮೀಟರ್ ಯೊಜನೆಯ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 5 ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡುತ್ತದೆ ಎಂದು ಹೇಳಿದರು.…
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ | Ghulam Nabi Azad | ಕಾಂಗ್ರೆಸ್ ತೊರೆದು, ಹೊಸ ಪಕ್ಷ ಕಟ್ಟಿ, ಮತ್ತೆ ಮಾತೃಪಕ್ಷಕ್ಕೆ ಹಿಂತಿರುಗುವರೇ ಗುಲಾಂ ನಬಿ ಆಜಾದ್?