ತುಮಕೂರು: ಕೇಂದ್ರದಿಂದ ಯಾರೇ ಬಂದರೂ ರಾಜ್ಯ ಸರ್ಕಾರದ ಮೇಲೆ ಇರುವ ಆಡಳಿತ ವಿರೋಧಿ ಅಲೆ ಕಡಿಮೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಯಾರೂ ಇದನ್ನು ಬದಲಿಸಲು ಆಗಲ್ಲ. ಜನ ಈಗಾಗಲೇ ಕಾಂಗ್ರೆಸ್ ಪರವಾಗಿ ಮತ ಹಾಕಲು ತೀರ್ಮಾನ ಮಾಡಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ (Congress Convention) ಪರವಾಗಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ತುರುವೇಕೆರೆಯಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ 5 ವರ್ಷದ ಆಡಳಿತವನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಹಳೇ ಮೈಸೂರು ಪ್ರಾಂತ್ಯವನ್ನು ಬಿಜೆಪಿ ಈಗ ಟಾರ್ಗೆಟ್ ಮಾಡಿದೆ. ಹಾಗಾದರೆ, ಉತ್ತರ ಕರ್ನಾಟಕದ ಕ್ಷೇತ್ರಗಳನ್ನೆಲ್ಲ ಇವರು ಗೆದ್ದಾಯ್ತಾ ಎಂದು ಪ್ರಶ್ನಿಸಿದರು.
ಹಳೇ ಮೈಸೂರು ಪ್ರಾಂತ್ಯದ ಜನ ಬಿಜೆಪಿ ಮಾತಿಗೆ ಮಣೆ ಹಾಕಲ್ಲ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಅಂತಾ ಜನಕ್ಕೆ ಗೊತ್ತಾಗಿದೆ. 2018ರಲ್ಲಿ ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇ.10 ಕೆಲಸ ಮಾಡಿಲ್ಲ. ಅವರು ಕೊಟ್ಟ ಯಾವ ಮಾತನ್ನೂ ಉಳಿಸಿಕೊಂಡಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ | Karnataka Politics : ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರುತ್ತಾರೆ: ಶ್ರೀರಾಮುಲು ತಿರುಗೇಟು
ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಮ ಮಂದಿರವನ್ನು ನಮ್ಮೂರಿನಲ್ಲಿ ಕಟ್ಟಿಲ್ಲವೇ? ನಮ್ಮೂರಿನಲ್ಲಿ ಕಟ್ಟಿರುವುದೂ ರಾಮ ಮಂದಿರವಲ್ಲವೇ? ನಮ್ಮೂರಲ್ಲೂ, ಇವರೂರಲ್ಲೂ, ಅವರೂರಲ್ಲೂ ಎಲ್ಲ ಊರಿನಲ್ಲೂ ಕಟ್ಟಿದ್ದಾರೆ. ರಾಮಭಜನೆ ಮಾಡಲು ಶುರು ಮಾಡಿ, ರಾಮ-ರಹೀಮ ಎಲ್ಲರೂ ಒಂದೇ ಎಂದು ಗಾಂಧೀಜಿ ಅವರು ಹೇಳಿದ್ದರು ಎಂದು ತಿಳಿಸಿದರು.
ಸಿದ್ದರಾಮಯ್ಯ ಆಪ್ತ ಹನುಮಂತು ಹಾಗೂ ಜನಾರ್ದನ ರೆಡ್ಡಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಯಾರೋ ಒಬ್ಬರು ಹೋದರೆ ಹೋಗಲಿ. ಈ ತಿಂಗಳ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುತ್ತದೆ. 150 ಅಭ್ಯರ್ಥಿಗಳು ಈ ಪಟ್ಟಿಯಲ್ಲಿ ಇರಲಿದ್ದಾರೆ ಎಂದು ಹೇಳಿದರು.
ಮನಮೋಹನ್ ಸಿಂಗ್ ಇದ್ದಾಗ ಸಿದ್ದರಾಮಯ್ಯ ಅನುದಾನ ತರಲು ಆಗಲಿಲ್ಲ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಉತ್ತರಿಸಿ, ಆಹಾರ ಭದ್ರತೆ ಕಾಯ್ದೆ ತಂದವರು ಯಾರು? ಅವರು ನಾನು ಮುಖ್ಯಮಂತ್ರಿ ಆದ ಮೇಲೆ ಪ್ರಧಾನಿಯಾಗಿ ಇದ್ದಿದ್ದು ಒಂದೇ ವರ್ಷ. ಈ ಒಂಬತ್ತು ವರ್ಷ ಅಧಿಕಾರದಲ್ಲಿ ಇದ್ದವರು ಏನೇನು ಕೊಟ್ಟಿದ್ದಾರಂತೆ, 15ನೇ ಹಣಕಾಸಿನ ಆಯೋಗದಲ್ಲಿ 5495 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಈ ಅನುದಾನ ಬಂತಾ ಎಂದು ಪ್ರಶ್ನಿಸಿದರು.
ಅಧಿವೇಶನದಲ್ಲಿ ಸಿದ್ದರಾಮಯ್ಯ ಮಹದಾಯಿ ಬಗ್ಗೆ ಮಾತನಾಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸೆಂಬ್ಲಿ ಇನ್ನೊಂದು ವಾರ ಮಾಡಬೇಕಿತ್ತು. ಆದರೆ, ಯಾಕೆ ಮೊಟಕುಗೊಳಿಸಿದರು? ಉತ್ತರ ಕರ್ನಾಟಕದ ಬಗ್ಗೆ ನೀವು ಮಾತನಾಡಿದ್ದೀರಾ, ಜಗದೀಶ್ ಶೆಟ್ಟರ್ ಮಹದಾಯಿ ಬಗ್ಗೆ ಮಾತನಾಡಿದ್ದಾರಾ? ಅವರಿಗೆ ನೈತಿಕತೆ ಇದೆಯಾ ಎಂದು ಕಿಡಿಕಾರಿದರು.
2018ರಲ್ಲಿ ಯಡಿಯೂರಪ್ಪ, ಮನೋಹರ್ ಪರಿಕ್ಕರ್ ಬಳಿಯಿಂದ ಲೆಟರ್ ತಂದು, ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ ಮಾಡಿ ಕುಡಿಯಲು ನೀರು ಕೊಡುತ್ತೇವೆ. ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದಿದ್ದರು, ಹೇಳಿದಂತೆ ಮಾಡಿದರಾ ಎಂದು ಅವರು ಕಿಡಿಕಾರಿದರು.
2018ರ ಅ.14ರಂದು 13.42 ಟಿಎಂಸಿ ಕರ್ನಾಟಕಕ್ಕೆ, 24 ಟಿಎಂಸಿ ನೀರು ಗೋವಾಕ್ಕೆ, 1.3 ಟಿಎಂಸಿ ನೀರು ಮಹಾರಾಷ್ಟ್ರಕ್ಕೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತ್ತು. ಅದು ಇವರು ಮಾಡಿದ್ದಲ್ಲ. 2020ರ ಫೆ. 27ರಂದು ಗೆಜೆಟ್ ನೋಟಿಫಿಕೇಷನ್ ಆಯಿತು. ಅವತ್ತಿನಿಂದ ಜಗದೀಶ್ ಶೆಟ್ಟರ್, ಬೊಮ್ಮಾಯಿ ಏನು ಮಾಡುತ್ತಿದ್ದರು. ಈಗ ಚುನಾವಣೆ ಬಂದಿದೆ ಎಂದು ಮಹದಾಯಿ ಯೋಜನೆ ಡಿಪಿಆರ್ ಒಪ್ಪಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಇದು ಡೋಂಗಿತನ ಅಲ್ಲವೇ ಎಂದು ಹರಿಹಾಯ್ದರು.
ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲ ಎಂಬ ಸೋನಿಯಾ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಆ ಮಾತನ್ನು ಅವರು ಗೋವಾದಲ್ಲಿ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದು ಗೋವಾ ಚುನಾವಣೆ ಸಂದರ್ಭದಲ್ಲಿ ಮಾತನಾಡಿರುವುದು ಎಂದರು.
2010ರಲ್ಲಿ ನಮ್ಮ ಸರ್ಕಾರವಿದ್ದಾಗ ಪಾಂಚಾಲ್ ನ್ಯಾಯಾಧೀಕರಣ ಆಯಿತು. ಸೂಕ್ತ ಸಾಕ್ಷ್ಯಾಧಾರ ಕೊಟ್ಟವರು ನಾವು. 2018ರಲ್ಲಿ ಪಾಂಚಾಲ್ ತೀರ್ಪು ಬಂತು. ಗೆಜೆಟ್ ನೋಟಿಫಿಕೇಷನ್ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮೆಲ್ಮನವಿ ಹಾಕಿದ್ದೆವು. 2020ರಲ್ಲಿ ನೋಟಿಫಿಕೇಷನ್ ಆಯ್ತು. ಅದು ನಮ್ಮ ಕಾಲದಲ್ಲಿ ಮಾಡಿದ್ದು, ಇವರು ಏನನ್ನು ಮಾಡದೆ ಈಗ ಚುನಾವಣೆ ಬಂದಿದೆ ಎಂದು ಡಿಪಿಆರ್ ಅನುಮೋದನೆ ಮಾಡಿದ್ದೇವೆ ಎಂದು ನೀರಾವರಿ ಇಲಾಖೆಯಿಂದ ಹೇಳಿಸಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ತುರುವೇಕೆರೆಯಿಂದ ರಾಜ್ಯ ಮತ್ತು ಜಿಲ್ಲೆಗೆ ಹೊಸ ಸಂದೇಶ ಹೋಗಬೇಕು. ಆ ರೀತಿಯಲ್ಲಿ ಜನ ಸೇರಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಅಲೆ ಜೋರಾಗಿದ್ದು, ಬಿಜೆಪಿ ಸರ್ಕಾರ ಮುಳುಗುತ್ತಾ ಇದೆ. ಆಪರೇಷನ್ ಕಮಲದಿಂದ ಜಗ್ಗೇಶ್ ಹೊರಟು ಹೋದರು. ಅದಾದ ಬಳಿಕ ಯಾರೂ ತುರುವೇಕೆರೆಯಿಂದ ಕಾಂಗ್ರೆಸ್‌ನಿಂದ ಗೆದ್ದಿಲ್ಲ. ಹೀಗಾಗಿ ಜಿಲ್ಲೆಯ ಜನತೆ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬೆಮೆಲ್ ಕಾಂತರಾಜು, ಗುಬ್ಬಿ ವಾಸು, ಮಧು ಬಂಗಾರಪ್ಪ ಎಲ್ಲರೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ವೈ.ಎಸ್.ವಿ. ದತ್ತ ಕೂಡ ಅರ್ಜಿ ಹಾಕಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಕೈ ಬಲಪಡಿಸಲು ಪಕ್ಷಕ್ಕೆ ಬರುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರ ಬಿಟ್ಟು ಹೋಗುವಾಗ ಕಣ್ಣೀರು ಹಾಕಿದ್ದರು. ಬಿಜೆಪಿ ಉತ್ತಮ ಆಡಳಿತ ಕೊಟ್ಟರೆ ಯಾಕೆ ಅವರು ಕಣ್ಣೀರು ಹಾಕುತ್ತಿದ್ದರು. ಕಾಂಗ್ರೆಸ್ 126 ಸ್ಥಾನ, ಬಿಜೆಪಿ 60 ಸ್ಥಾನ ಎಂದು ನಮ್ಮ ಸಮೀಕ್ಷೆ ಹೇಳುತ್ತಿದೆ. ಹೊಸ ಮನೆ, ಹಳೆ ಮನೆ ಎಂದು ನಾವು ನೋಡಲ್ಲ. ಎಲ್ಲರನ್ನು ಒಳ್ಳೇ ರೀತಿ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಕಟೀಲ್ ಲವ್ ಜಿಹಾದ್ ಬಗ್ಗೆ ಚರ್ಚೆ ಮಾಡಿ, ಅಭಿವೃದ್ಧಿ ಬಗ್ಗೆ ಬೇಡ ಮಾತುಕತೆ ಎನ್ನುತ್ತಾರೆ. ಸಿದ್ದರಾಮಯ್ಯ ಕಾಲದಲ್ಲಿ ಲಕ್ಷಾಂತರ ಎಕರೆ ನೀರಾವರಿ ಮಾಡಿದ್ದೇವೆ. ಎಲ್ಲೂ ಪವರ್ ಕಟ್ ಆಗಿರಲಿಲ್ಲ. ಗುತ್ತಿಗೆದಾರ ತುಮಕೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ನಾಲ್ಕು ಗುತ್ತಿಗೆದಾರರು ಸಂಕಷ್ಟದಲ್ಲಿ ಇದ್ದಾರೆ. ಕರ್ನಾಟಕ ಎಂದೂ ಇಂತಹ ಭ್ರಷ್ಟ ಸರ್ಕಾರ ಕಂಡಿರಲಿಲ್ಲ. ಬಿಜೆಪಿ ಜನರ ಭಾವನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಮನಸ್ಸುಳನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.
ರೈತರ ಆದಾಯ ಡಬಲ್ ಮಾಡಲು ಬಿಜೆಪಿ ಸಂಕಲ್ಪ ಮಾಡಿತ್ತು. ಅವರ ಆಶ್ವಾಸನೆ ಸುಳ್ಳಾಗಿದೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಅಧಿಕಾರಕ್ಕೆ ಬಂದ ಹಾಗೆ. ಎಲ್ಲ ವರ್ಗದ ಜನರಿಗೆ ಶಕ್ತಿ ಕೊಟ್ಟು ನಾವು ಬಂದಿದ್ದೆವು. ಬಿಜೆಪಿ ಸರ್ಕಾರದಲ್ಲಿ ಅಚ್ಛೇ ದಿನ ಬಂದಿಲ್ಲ. ಜನರ ಆದಾಯ ಹೆಚ್ಚಾಗಿಲ್ಲ. ಇದೆಲ್ಲ ಬದಲಾವಣೆ ಆಗಬೇಕಾದರೆ ನೀವು ಸಹಾಯ ಮಾಡಬೇಕು. ಭ್ರಷ್ಟಾಚಾರ ರಹಿತ ಸರ್ಕಾರ ನಾವು ನೀಡುತ್ತೇವೆ. ಕೈನಾಯಕರಿಗೆ ಶಕ್ತಿ ಕೊಡಿ, ತುರುವೇಕೆರೆಯಲ್ಲಿ ಬಹಳ ವರ್ಷಗಳಿಂದ ಕಾಂಗ್ರೆಸ್ ಸೋತಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | Karnataka Politics : ನಾಯಿ ಮರಿ ಹೇಳಿಕೆ ಸಿದ್ದು ಸಂಸ್ಕೃತಿ ತೋರಿಸುತ್ತದೆ, ಜನರೇ ಬುದ್ಧಿ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ