ಬೆಂಗಳೂರು: ಮಡಿಕೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಟೀಕೆ ಮುಂದುವರಿಸಿರುವ ರಾಜ್ಯ ಕಾಂಗ್ರೆಸ್, ಮೊಟ್ಟೆಯನ್ನು ಎರಡು ಸರ್ಕಾರಗಳು ವಿಭಿನ್ನವಾಗಿ ಬಳಸಿಕೊಂಡಿವೆ. ಕಾಂಗ್ರೆಸ್ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ಬಳಸಿಕೊಂಡರೆ, ಬಿಜೆಪಿ ಅದನ್ನು ಪ್ರತಿಭಟನೆ ಮಾಡಲು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬರ್ಥದಲ್ಲಿ ʼಕಾಂಗ್ರೆಸ್ ದಾಸೋಹ-ಬಿಜೆಪಿ ಜನದ್ರೋಹʼ ಎಂದು ಟ್ವೀಟ್ ಮಾಡಿ ಕಿಡಿ ಕಾರಿದೆ.
‘ಮೊಟ್ಟೆ’ಯನ್ನು ಎರಡು ಸರ್ಕಾರಗಳು ವಿಭಿನ್ನವಾಗಿ ಬಳಸಿಕೊಂಡಿವೆ. ಕಾಂಗ್ರೆಸ್ ಸರ್ಕಾರ ಅಂಗನವಾಡಿ ಮಕ್ಕಳಿಗೆ ವಿತರಣೆ, ಶಾಲೆ ಮಕ್ಕಳ ಬಿಸಿಯೂಟದಲ್ಲಿ ವಿತರಣೆ ಮಾಡಲು ಬಳಸಿಕೊಂಡಿದ್ದರೆ, ಬಿಜೆಪಿ ಸರ್ಕಾರ ಮೊಟ್ಟೆ ಖರೀದಿ ಟೆಂಡರ್‌ನಲ್ಲಿ ಕಮಿಷನ್ ಲೂಟಿ, ವಿಪಕ್ಷ ನಾಯಕರ ಮೇಲೆ ದಾಳಿ ಮಾಡಲು ಬಳಸುತ್ತದೆ. ಕಾಂಗ್ರೆಸ್-ದಾಸೋಹ, ಬಿಜೆಪಿ -ಜನದ್ರೋಹ ಎಂದು ಕೆಪಿಸಿಸಿ ಟೀಕಿಸಿದೆ.
ಪ್ರವೀಣ್ ನೆಟ್ಟಾರು ಅಂತಿಮಯಾತ್ರೆ ವೇಳೆ ಬೆಳ್ಳಾರೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರಿನ ಮೇಲೆ ದಾಳಿ ಮಾಡಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದ ಪೊಲೀಸರನ್ನು ಎತ್ತಂಗಡಿ ಮಾಡಿದ ಈ ಸರ್ಕಾರ, ತಾವು ಎಂದಿಗೂ ಗೂಂಡಾಗಿರಿಯ ಪರ ಎನ್ನುವುದನ್ನು ತೋರಿಸಿ ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿದಿತ್ತು. ಈಗಲೂ ಮಡಿಕೇರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣದಲ್ಲೂ ಪೊಲೀಸರನ್ನು ಕಟ್ಟಿಹಾಕಿ, ಗೂಂಡಾಗಿರಿಯ ಹಾವಿಗೆ ಹಾಲೆರೆಯುತ್ತಿದೆ ಎಂದು ಆರೋಪಿಸಿದೆ.
ಅತಿವೃಷ್ಟಿಯಿಂದ 75ಕ್ಕೂ ಹೆಚ್ಚು ಜನ ಸತ್ತಿದ್ದು, ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ನೂರಾರು ಮನೆ ಉರುಳಿವೆ.
ಸರ್ಕಾರ ಮಾತ್ರ ಯಾವುದಕ್ಕೂ ಪರಿಹಾರ ಕ್ರಮ ಕೈಗೊಂಡಿಲ್ಲ. ಆದರೆ ವಿಪಕ್ಷ ನಾಯಕರು ಈ ಬಗ್ಗೆ ಬೆಳಕು ಚೆಲ್ಲಿದರೆ ವೈಫಲ್ಯ ಬಯಲಾಗುತ್ತದೆ ಎಂದು ಸಿದ್ದರಾಮಯ್ಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಬಿಜೆಪಿ ಗೂಂಡಾಗಿರಿಗೆ ಧಿಕ್ಕಾರ ಎಂದು ಟೀಕಿಸಿದೆ.
ಇದನ್ನೂ ಓದಿ | ಸಿದ್ದರಾಮಯ್ಯ ಕೊಡಗಿಗೆ ಬಂದ್ರೆ ಕೌಂಟರ್ ಪ್ರತಿಭಟನೆ ಮಾಡ್ತೇವೆ: ಶಾಸಕ ಅಪ್ಪಚ್ಚು ರಂಜನ್