ಬೆಂಗಳೂರು: ಭ್ರಷ್ಟಾಚಾರ, ಗುತ್ತಿಗೆದಾರರ ಮನೆಯಲ್ಲಿ ಕೋಟ್ಯಂತರ ರೂ. ಪತ್ತೆ, ಕಮಿಷನ್ ದಂಧೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ (BJP Protest) ನಡೆಸಲಾಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಆಗ್ರಹಿಸಿದರು.
ಈ ವೇಳೆ ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಎಡವಟ್ಟುಗಳ ಸರ್ಕಾರವಾಗಿದ್ದು, ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಐಟಿ ದಾಳಿ ಸಂಬಂಧ ಸಿಬಿಐ ತನಿಖೆ ಮಾಡಿ ಹಣದ ಮೂಲವನ್ನು ಪತ್ತೆ ಮಾಡಬೇಕು. ನಾಚಿಕೆ ಇಲ್ಲದ ಸರ್ಕಾರ ಇದು. ಪ್ರತಿಯೊಂದು ವಿಚಾರದಲ್ಲೂ ನಾಡಿಗೇ ಸಂಕಷ್ಟ ತಂದಿಟ್ಟ ಕಾಂಗ್ರೆಸ್ ಸರ್ಕಾರ ಇದೆ. ಈ ಸರ್ಕಾರ ತೊಲಗುವುದನ್ನೇ ಜನ ಬಯಸುತ್ತಿದ್ದಾರೆ. ಹೀಗಾಗಿ ಡಿಸಿಎಂ, ಸಿಎಂ ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | Congress Politics : ನಿಗಮ, ಮಂಡಳಿಗೆ ಗ್ರೀನ್ ಸಿಗ್ನಲ್; ಶಾಸಕರ ಜತೆ ಕಾರ್ಯಕರ್ತರ ಲಾಬಿ ಜೋರು
ಸಾಕಷ್ಟು ಆಡಳಿತ ಅನುಭವ, ಪರಿಣತಿ ಇದ್ದರೂ, ಭಾರಿ ಬಹುಮತ ಸಿಕ್ಕಿದರೂ ಜನಾಶೀರ್ವಾದಕ್ಕೆ ತಕ್ಕ ಗೌರವವನ್ನು ನೀಡಿಲ್ಲ. ನಾಮಕಾವಾಸ್ತೆಗೆ ಕೆಲವು ಭಾಗ್ಯಗಳನ್ನು ತೋರಿಸಿ ಲೂಟಿ ಸರ್ಕಾರವನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯವನ್ನು ಲೂಟಿ ಮಾಡಲು ಮತ್ತು ಸ್ವಾರ್ಥದಾಹ ಹಿಂಗಿಸಲು ಈ ಸರ್ಕಾರ ಮುಂದಾಗಿದೆ. ಏನೇ ಆಪಾದನೆಗೂ ಅದು ಜಗ್ಗುತ್ತಿಲ್ಲ. ಭಂಡತನದ ಉತ್ತರವನ್ನು ನೀಡುತ್ತಿದ್ದಾರೆ. ಗುತ್ತಿಗೆದಾರರು, ಬಿಲ್ಡರ್‌ಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ಷೇಪಿಸಿದರು.
ಮಾಜಿ ಸಚಿವ ಆರ್. ಅಶೋಕ್ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಬಂದು 4 ತಿಂಗಳಾದರೂ ಕಂಟ್ರಾಕ್ಟರ್‌ಗಳಿಗೆ ಹಣ ಬಿಡುಗಡೆ ಮಾಡಿರಲಿಲ್ಲ. ತನಿಖೆ ಮಾಡುತ್ತೇವೆ, ಆಮೇಲೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಪುಂಖಾನುಪುಂಖವಾಗಿ ಹೇಳಿದರು. ಆದರೆ ಹಣ ಬಿಡುಗಡೆ ಮಾಡದೆ ಇದ್ದಿದಕ್ಕೆ ಕಾರಣ ಅದಲ್ಲ. ಆಗ ಹಣ ಬಿಡುಗಡೆ ಮಾಡಿರೆ ಪಂಚರಾಜ್ಯ ಚುನಾವಣೆಗೆ ಹಣ ಕೊಡಲು ಆಗಲ್ಲ. ತೆಲಂಗಾಣ, ಮಧ್ಯಪ್ರದೇಶವನ್ನು ಕರ್ನಾಟಕ ದತ್ತು ತೆಗೆದುಕೊಂಡಿದೆ. ಎರಡು ಕಡೆ ಎರಡು ಟೀಂ ಇದೆ, ಅಲ್ಲಿಗೆ ಹಣ ಹೋಗುತ್ತಿದೆ ಎಂದು ಆರೋಪಿಸಿದರು.
40 ಪರ್ಸೆಂಟ್ ಕಮಿಷನ್ ಎಂದು ನಮ್ಮ ಮೇಲೆ ಆರೋಪ ಮಾಡಿದರು. ಸಾಕ್ಷಿ ಕೇಳಿದಾಗ ಯಾವುದೇ ದಾಖಲೆ ಕೊಡಲಿಲ್ಲ. ತನಿಖೆ ಮಾಡಿ ಎಂದು ಹೇಳಿದ್ದೆವು. ಈಗ ಅವರದೇ ಸರ್ಕಾರದ ಅವಧಿಯಲ್ಲಿ ಸಾಕ್ಷಿ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು. ಹೈಕಮಾಂಡ್ ಇಲ್ಲಿ ಬಂದು ಕೂತಿದೆ. ರೈಡ್ ಆದ ಮೇಲೆ ಕಾಂಗ್ರೆಸ್ ಹೈಕಮಾಂಡ್ ನಡುಗಿದೆ ಹುಷಾರಾಗಿ ವಸೂಲಿ ಮಾಡಿ ಎಂದು ಅವರ ನಾಯಕರಿಗೆ ಹೇಳುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಿಎಂ ಸದಾನಂದಗೌಡ ಮಾತನಾಡಿ, ನಾಡಿನ ಪರಿಸ್ಥಿತಿ ಹಿಗಾಯ್ತಲ್ಲ ಎಂದು ನಮ್ಮೆಲ್ಲರಿಗೂ ಬೇಸರ ಆಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಡೀ ದೇಶವನ್ನೇ ಲೂಟಿ ಮಾಡಿದ್ದರು. ಕಾಂಗ್ರೆಸ್ ಬಂದ್ರೆ ಭ್ರಷ್ಟಾಚಾರ, ಮೋಸ, ಅನ್ಯಾಯ ಮಾಡುವುದೇ ಕೆಲಸ. ಇದೆಲ್ಲದರ ವಿರುದ್ಧ ನಾವು ಪ್ರತಿಭಟನೆ ಮಾಡಬೇಕಿದೆ. ಇಷ್ಟು ದಿನ ಹೋಟೆಲ್‌ನಲ್ಲಿ ದರ ಪಟ್ಟಿ ಇತ್ತು. ಚಟ್ನಿ, ಸಾಂಬಾರ್‌ಗೆ ದರ ಇರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಚಟ್ನಿ, ಸಾಂಬಾರ್‌ಗೂ ದರ ಫಿಕ್ಸ್ ಮಾಡಿದೆ ಎಂದು ಕಿಡಿಕಾರಿದರು.
ಅಂಬಿಕಾಪತಿ ಮನೆಗೆ ಕಂಟ್ರಾಕ್ಟರ್ಸ್ ಹೋಗಿದ್ದರು. ಕೆಂಪಣ್ಣ ಮತ್ತು ಟೀಂ ಆಲೋಚನೆ ಮಾಡಿದೆ. ಎಲ್ಲಾ ಗುತ್ತಿಗೆದಾರರನ್ನು ಅಂಬಿಕಾಪತಿ ಮನೆಗೆ ಕಳಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ. ಪರದೆ ಕೀ ಪೀಚೆ ಕೆಲವರಿದ್ದಾರೆ. ಅವರು ಹೊರಗೆ ಬರಬೇಕಾದ್ರೆ ಸಿಬಿಐ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | IT Raid : ಐಟಿ ದಾಳಿಯಲ್ಲಿ ಸಿಕ್ಕಿದೆ ಡೈರಿ; ಯಾರ ಹೆಸರಿದೆ? ಕೈ ನಾಯಕರಿಗೆ ನಡುಕ
ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಭಾಸ್ಕರ ರಾವ್, ನೆ.ಲ. ನರೇಂದ್ರ ಬಾಬು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಜಿ, ನಾರಾಯಣ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.