Site icon Vistara News

Gruha Jyothi Scheme: ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಸಲ್ಲಿಸೋದು ಹೇಗೆ?

Gruha jyothi scheme Application

#image_title

ಕಾಂಗ್ರೆಸ್​​ನ ಒಂದು ಗ್ಯಾರಂಟಿ (Congress Guarantee)ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿ, ಮಹಿಳೆಯರು ಅನುಕೂಲ ಪಡೆಯುತ್ತಿದ್ದಾರೆ. ನೂಕುನುಗ್ಗಲು-ಗೊಂದಲದ ಮಧ್ಯೆ ‘ಶಕ್ತಿ’ ಬಸ್​ಗಳು ಸಂಚಾರ ಮಾಡುತ್ತಿವೆ. ಇದೀಗ ಕಾಂಗ್ರೆಸ್​ನ ಎರಡನೇ ಗ್ಯಾರಂಟಿ ಅನುಷ್ಠಾನಕ್ಕೆ ಬರುತ್ತಿದೆ. 200 ಯುನಿಟ್​ ವಿದ್ಯುತ್​ ಉಚಿತ ನೀಡುವ ‘ಗೃಹಜ್ಯೋತಿ’ ಯೋಜನೆ (Gruha Jyothi Scheme)ಗೆ ಜನರು ಇಂದಿನಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಗೃಹ ಜ್ಯೋತಿ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಸೇವಾ ಸಿಂಧು ಪೋರ್ಟಲ್​ನಲ್ಲಿ ಅವಕಾಶ ಮಾಡಿಕೊಟ್ಟಿದೆ. ಇನ್ನುಳಿದಂತೆ ಜನರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂ. ಕಚೇರಿ, ವಿದ್ಯುತ್​ ಕಚೇರಿಗಳಲ್ಲಿ ನೋಂದಾಯಿಸಬಹುದು. ಹೀಗೆ ಅರ್ಜಿ ಸಲ್ಲಿಕೆ ಮಾಡುವವರು ಆಧಾರ್ ಕಾರ್ಡ್, ಆರ್​ಆರ್ ನಂಬರ್, ಮೊಬೈಲ್ ಸಂಖ್ಯೆ, ಮನೆ ಬಾಡಿಗೆ ಕರಾರು ಪತ್ರ ನೀಡುವುದು ಕಡ್ಡಾಯವಾಗಿದೆ. ವೋಟರ್​ ಐಡಿ ಕೂಡ ಯಾವುದಕ್ಕೂ ಇಟ್ಟುಕೊಂಡಿರಿ. ಮನೆ ಬಾಡಿಗೆ ಕರಾರು ಪತ್ರ ಇಲ್ಲದವರಿಗೆ ವೋಟರ್​ ಐಡಿ ಬೇಕಾಗುತ್ತದೆ.

ಗೃಹಜ್ಯೋತಿ ಯೋಜನೆಗೆ ಜೂ.15ರಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಪ್ರಕ್ರಿಯೆಯನ್ನು ಜೂ.18ಕ್ಕೆ ಮುಂದೂಡಲಾಗಿತ್ತು. ಗ್ಯಾರಂಟಿಗಳನ್ನೇ ನಂಬಿ ಮತ ಹಾಕಿದವರ ಬಹುನಿರೀಕ್ಷಿತ, ಉಚಿತ ವಿದ್ಯುತ್​​ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಇದನ್ನೂ ಓದಿ: Gruhajyothi scheme: ಗೃಹ ಜ್ಯೋತಿ ಸ್ಕೀಂ; ಎಲ್ಲ ಗೊಂದಲಗಳಿಗೆ ಇಲ್ಲಿದೆ ನಿಖರ ಉತ್ತರ

ಸೇವಾ ಸಿಂಧು ಪೋರ್ಟಲ್​​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

1. ಸೇವಾಸಿಂಧು ಪೋರ್ಟಲ್​ಗೆ ಭೇಟಿಕೊಡಿ. ಅಲ್ಲಿ ಗೃಹ ಜ್ಯೋತಿ ಯೋಜನೆಗೆ ಮೀಸಲಿಟ್ಟ ಲಿಂಕ್​ ಮೇಲೆ ಕ್ಲಿಕ್ ಮಾಡಿ.
2.ನೀವು ಈ ವೆಬ್​​ಸೈಟ್​ನ್ನು ನಿಮ್ಮ ಮೊಬೈಲ್​/ಕಂಪ್ಯೂಟರ್ ಅಥವಾ ಲ್ಯಾಪ್​ಟಾಪ್​ ಮೂಲಕ ತೆರೆಯಬಹುದು
3. ಹೀಗೆ ಅರ್ಜಿ ಸಲ್ಲಿಸುವ ಹೊತ್ತಲ್ಲಿ, ನಿಮ್ಮೊಂದಿಗೆ ಆಧಾರ್​ ಕಾರ್ಡ್​, ಆರ್​ಆರ್​ಕಾರ್ಡ್​, ನಿಮ್ಮ ಮನೆಗೆ ಬರುವ ಕರೆಂಟ್​ ಬಿಲ್​​ನಲ್ಲಿ ಇರುವ, ಗ್ರಾಹಕರ ಅಕೌಂಟ್ ಐಡಿ, ವೋಟರ್​ ಐಡಿ ಕಾರ್ಡ್​ಗಳನ್ನೆಲ್ಲ ಸಿದ್ಧವಾಗಿಟ್ಟುಕೊಳ್ಳಿ. ಗೃಹಜ್ಯೋತಿ ಫಾರ್ಮ್​​ನಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನೂ ತುಂಬಿ ಸಬ್​ಮಿಟ್ ಕೊಡಿ.
4. ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಫೋನ್​​ನಲ್ಲಿ, ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಿ.

Exit mobile version