ಶಿವಮೊಗ್ಗ: ಅಂಗಡಿ ಕ್ಲೋಸ್ ಆಗುವುದು ವಿರೋಧ ಪಕ್ಷದ್ದು, ನಮ್ಮದಲ್ಲ. ಇನ್ನೂ 5 ವರ್ಷ ಗ್ಯಾರಂಟಿಗಳು (Congress Guarantee) ಇರುತ್ತದೆ. ಯಾರು ಎಷ್ಟೇ ಹೇಳಿದರೂ ಐದು ವರ್ಷ ಸಿದ್ದರಾಮಯ್ಯ ಸರ್ಕಾರ ಇರುತ್ತದೆ. ಯಾರೇ ತಿಪ್ಪರಲಾಗ ಹೊಡಿದ್ರೂ ನಮ್ಮ ಸರ್ಕಾರವನ್ನು ಅಲುಗಾಡಿಸಲು ಆಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಯೋಜನೆಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವವರಿಗೆ ಉತ್ತರ ನೀಡಲು ಫಲಾನುಭವಿಗಳ ಕಾರ್ಯಕ್ರಮದ ಮೂಲಕ ಉತ್ತರ ಕೊಡುತ್ತಿದ್ದೇವೆ ಎಂದರು.
ಕಮಿಷನ್ ಕಮಿಷನ್ ಎನ್ನುತ್ತಾರೆ, ನಿಮ್ಮ ಅಕೌಂಟ್‌ಗೆ ಹಣ ಬರುತ್ತದೆ. ಅದರಲ್ಲಿ ಕಮಿಷನ್ ಕೊಟ್ಟಿದ್ದೀರಾ ನೀವು? ಬಸ್ ಹತ್ತೋಕೆ ಕಮಿಷನ್ ಕೊಡ್ತೀರಾ ನೀವು? ಸುಮ್ಮನೆ ಆರೋಪ ಮಾಡುತ್ತಾರೆ. ಮಾರ್ಕೆಟ್‌ನಲ್ಲಿ ಬ್ಲಡ್, ದುಡ್ಡು ಇಂಪಾರ್ಟೆಂಟ್. ದುಡ್ಡನ್ನು ಮಾರ್ಕೆಟ್‌ನಲ್ಲಿ ಇಟ್ಟೀದ್ದೀವಿ. ಮಾರ್ಕೆಟ್‌ನಲ್ಲಿ ದುಡ್ಡು ಚೆನ್ನಾಗಿದೆ. ಈಗ ಸಿಂಗಲ್ ಎಂಜಿನ್ ಇದೆ, ಈಗಲೇ ಹೀಗೆ. ಮುಂದೆ ಡಬಲ್ ಎಂಜಿನ್ ಆದರೆ ಇನ್ನು ಇನ್ನೇನು ಬರುತ್ತದೋ ನೀವು ನೋಡಬೇಕು ಎಂದು ಪರೋಕ್ಷವಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು.
ರಾಜ್ಯದಲ್ಲಿ ಬಂಗಾರಪ್ಪ ಸ್ಮಾರಕ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಬಿಜೆಪಿಯವರು ಈಗ ರಾಮನನ್ನು ಬೀದಿಗೆ ತಂದಿದ್ದಾರೆ. ರೋಡ್‌ನಲ್ಲಿ ಫ್ಲೆಕ್ಸ್ ಹಾಕಿದ್ದಾರೆ. ಅದೆಲ್ಲಾ ಈಗ ಹರಿದು ಆ ರೀತಿ ಯಾರೂ ಮಾಡಬಾರದು. ವಿದ್ಯುತ್ ಕಡಿತ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿದ್ದೇನೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಬರಗಾಲದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಇರುತ್ತದೆ, ಅದಕ್ಕೆ ಸ್ವಲ್ಪ ಕರೆಂಟ್ ಕಡಿಮೆ ನೀಡಲಾಗುತ್ತದೆ ಎಂದರು.
ಅವ್ವ ನಿನ್ನ ಕಿಡ್ನಿ ಸರಿ ಮಾಡಿಸ್ತೀನಿ
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಗೆ ಚಿಕಿತ್ಸೆ ಕೊಡಿಸುವುದಾಗಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪಲಾನುಭವಿ ಲಕ್ಷ್ಮಮ್ಮ ಜತೆ ಮಾತುಕತೆ ನಡೆಸಿದ ಅವರು, ಅವ್ವ ನಿನ್ನ ಕಿಡ್ನಿ ಸರಿ ಮಾಡಿಸ್ತೀನಿ. ನಿನಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಕೊಡಿಸುತ್ತೇನೆ. ತೊಂದರೆ ಇರುವವರಿಗೆ ಹೆಲ್ಫ್ ಮಾಡಬೇಕು. ನಾನು ನಿನಗೆ ಹಣ ಕೊಡಿಸುತ್ತೇನೆ ಎಂದು ತಿಳಿಸಿದ ಅವರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನ್ಯಾಯ ಕೊಡಿಸಿ ಸರ್… ಕಣ್ಣೀರಿಟ್ಟ ಮಹಿಳೆಯರು
ತಾಳಗುಪ್ಪ ಎಂಆರ್‌ಎಸ್‌ನಲ್ಲಿ ಸೆಕ್ಯೂರಿಟಿ ಕೆಲಸದಿಂದ ಕಿತ್ತು ಹಾಕಿದ ಹಿನ್ನೆಲೆ ಮಹಿಳೆಯರು ಸಚಿವರ ಮುಂದೆ ಕಣ್ಣೀರಿಟ್ಟು, ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ನಮ್ಮ ಗಂಡಂದಿರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ. ಹೊಸ ಸೆಕ್ಯೂರಿಟಿ ಏಜೆನ್ಸಿಯವರು ಸುಖಾಸುಮ್ಮನೆ ದೌರ್ಜನ್ಯ ಮಾಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಸರ್ ಎಂದು ಮಹಿಳೆಯರು ಕಣ್ಣೀರಿಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಡಿಸಿ ಗುರುದತ್ತ ಹೆಗಡೆ, ಎಸಿ ಯತೀಶ್, ತಹಸೀಲ್ದಾರ್ ಸರಕಾವಸ್, ಸಾವಿರಾರು ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ನಾಡಗೀತೆ ಕಡ್ಡಾಯವಲ್ಲ ಎಂಬ ಆದೇಶದ ಬಗ್ಗೆ ಪ್ರತಿಕ್ರಿಯಿಸಿ, ಯಾರೋ ಕೆಲವರು ಹೀಗೆ ಮಾಡಿರುತ್ತಾರೆ. ನಾನು ಬೆಳಗ್ಗೆ ಹೇಳಿದ್ದೆ, ಇದು ಒಳ್ಳೆಯದಲ್ಲ ಅಂತ ಹೇಳಿದ್ದೆ. ನನ್ನ ಇಲಾಖೆಯಲ್ಲಿ ನಾಡಗೀತೆಗೆ ನಿರ್ಬಂಧ ಇಲ್ಲ. ಕುವೆಂಪು ಅವರ ಬಗ್ಗೆ ಗೌರವವಿದೆ. ಯಾರು ಹೀಗೆ ಆದೇಶ ಮಾಡಿದರು ಎಂಬ ಬಗ್ಗೆ ಇಲಾಖೆಯವರು ಚೆಕ್ ಮಾಡಬೇಕು. ಅದು ನನ್ನ ಇಲಾಖೆಯಲ್ಲ, ಸರ್ಕಾರ ಜವಾಬ್ದಾರಿಯುತವಾಗಿ ಇರಬೇಕಾಗುತ್ತದೆ. ಯಾರು ಆದೇಶ ಮಾಡಿದ್ದಾರೆ ಎಂಬ ಬಗ್ಗೆ ಚೆಕ್ ಮಾಡಿಸಬೇಕು ಎಂದರು.
ಕನ್ನಡ ಅಸ್ಮಿತೆ ಅಳಿಸಲು ಕಾಂಗ್ರೆಸ್ ಮುಂದಾಗಿದೆ ಎಂಬ ಬಿಜೆಪಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಟ್ವೀಟ್ ಮಾಡಿರುವವರಿಗೆ ದೇವರು ಒಳ್ಳೆಯದು ಮಾಡಲಿ. ಬಿಜೆಪಿಯವರು ಟ್ವೀಟ್ ಮಾಡುವ ಬದಲು ಜನರ ಬಳಿ ಹೋಗಿ ಕೇಳಬೇಕು. ಟ್ವೀಟ್ ಮಾಡಿದರೆ ಅಣೆಪಟ್ಟಿ ಬರುವುದಿಲ್ಲ, ಜನರ ಬಳಿ ಇವರು ಕೇಳಬೇಕು. ಹಸಿದವರಿಗೆ ಅನ್ನ ನೀಡಿದ್ದೇವೆ. ಗೃಹಜ್ಯೋತಿ, ಶಕ್ತಿ ಯೋಜನೆ ಅಂಥವರ ಬಳಿ ಹೋಗಿ ಅಭಿಪ್ರಾಯ ಕೇಳಿ ಎಂದು ಆಗ್ರಹಿಸಿದರು.
ಯಾರದ್ದೋ ದುಡ್ಡಲ್ಲಿ ಕಾಂಗ್ರೆಸ್ ಸರ್ಕಾರ ಯಲ್ಲಮ್ಮ ಜಾತ್ರೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಷ್ಟು ದಿನ ಸಿ.ಟಿ.ರವಿಯವರು ಯಾರದೋ ದುಡ್ಡಲ್ಲಿ ಯಲ್ಲಮ್ಮ ಜಾತ್ರೆ ಮಾಡಿದರು. ಇವತ್ತು ಚಿಕ್ಕಮಗಳೂರಿನಲ್ಲಿ ಅವರು ತಿಪ್ಪರಲಾಗ ಹೊಡೆದಿದ್ದಾರೆ. ಸಿ.ಟಿ.ರವಿ ಸೀಟಿ ಹೊಡೆದುಕೊಂಡು ಕೂರುವುದಕ್ಕೆ ಹೇಳಿ, ಬಸ್ಟಾಂಡ್ ಹೋಗಿ ಸೀಟಿ ಹೊಡೆಯಲಿ, ಕೂತ ಜಾಗದಲ್ಲಿ ಅವರ ಹೇಳಿಕೆ ನಡೆಯುವುದಿಲ್ಲ. ಹಣೆ ಬರಹಕ್ಕೆ ಅವರು ಇನ್ನು ಮುಂದೆ ಉದ್ಧಾರ ಆಗುವುದಿಲ್ಲ ಎಂದರು.
ಇದನ್ನೂ ಓದಿ | Karnataka Budget Session 2024: ಮೋದಿ ಬಗ್ಗೆ ಸಿದ್ದರಾಮಯ್ಯ ಟೀಕೆ; ಪಲಾಯನವಾದಿ ಸಿಎಂ ಎಂದ ಬಿಜೆಪಿ
ಕನ್ನಡ ವಿರೋಧಿ ಸರ್ಕಾರ ಆರ್.ಆಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಮೊದಲು ಕನ್ನಡ ಕಲಿಯೋಕೆ ಹೇಳಿ. ಅವರ ಕನ್ನಡ ಸರಿಯಾಗಿದಿಯಾ ತಿಳಿದುಕೊಳ್ಳೊಕೆ ಹೇಳಿ ಎಂದರು. ಇದೇ ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿ, ನಾವು ಚುನಾವಣೆಗೆ ರೆಡಿ ಇದ್ದೇವೆ. ಪಕ್ಷ ಯಾರಿಗೆ ಹೇಳುತ್ತೋ ಅವರು ಸ್ಫರ್ಧೆ ಮಾಡ್ತಾರೆ. ಯಾರಿಗೆ ಅರ್ಹತೆ ಇದೆಯೋ ಅವರು ನಿಲ್ಲುತ್ತಾರೆ. ನಾವು ಪಕ್ಷಕ್ಕಾಗಿ ದುಡಿಯುತ್ತೇವೆ. ಗ್ಯಾರಂಟಿ ಸಮಾವೇಶಕ್ಕೆ ಸಾಕಷ್ಟು ಮಹಿಳೆಯರು ಬಂದಿದ್ದಾರೆ. ಅವರಿಗೆ ಗ್ಯಾರಂಟಿ ಸಿಕ್ಕಿದೆ. ಹಾಗಾಗಿ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು.