ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ (Congress Guarantee) ಜಾರಿ ವಿಳಂಬವಾಗಿದ್ದರೂ ಜನರು ಇನ್ನೂ ಅದರ ಮೇಲೆ ನಂಬಿಕೆ ಇಟ್ಟಿದ್ದಾರೆ. ಯಾವಾಗದಿಂದ ಜಾರಿ ಎಂದು ಹಕ್ಕೊತ್ತಾಯದ ಮೂಲಕ ಕೇಳುತ್ತಿರುವ ಜನರು ಅದೇ ವೇಳೆಗೆ ಅದನ್ನು ಪಡೆಯಲು ಬೇಕಾದ ಸಿದ್ಧತೆಗಳನ್ನು, ಅದರ ಲಾಭಗಳನ್ನು ಅನುಭವಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಪ್ರಮಾಣ ಒಂದೇ ಸಮನೆ ಹೆಚ್ಚಿದೆ. ಅದರ ಜತೆಗೆ ಇಂಡಕ್ಷನ್ ಸ್ಟವ್ ಖರೀದಿ ಭರಾಟೆಯೂ ಜೋರಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಎಂದು ಘೋಷಿಸಿದರೆ ಅದು ಮಿಸ್ ಆಗಬಾರದು ಎಂಬ ಲೆಕ್ಕಾಚಾರದಲ್ಲಿ ಇದುವರೆಗೆ ಕಾರ್ಡ್ ಮಾಡಿಸದವರೂ ಮಾಡಿಸುತ್ತಿದ್ದಾರೆ, ಕೆಲವರು ಎಪಿಎಲ್‌ನಿಂದ ಬಿಪಿಎಲ್‌ಗೆ ಶಿಫ್ಟ್ ಆಗಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಉಚಿತ ವಿದ್ಯುತ್ ಗ್ಯಾರಂಟಿ ಜಾರಿಗೆ ಬಂದರೆ ಗ್ಯಾಸ್ ಬದಲು ವಿದ್ಯುತ್ ಸ್ಟವ್‌ನಲ್ಲೇ ಅಡುಗೆ ಮಾಡಬಹುದು ಎಂಬ ಉದ್ದೇಶದಿಂದ ಇಂಡಕ್ಷನ್ ಸ್ಟವ್‌ಗೆ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.
ಇಂಡಕ್ಷನ್ ಸ್ಟೌವ್‌ಗೆ ಡಿಮ್ಯಾಂಡ್ ಯಾಕೆ?
ಉಚಿತ ವಿದ್ಯುತ್ ಯೋಜನೆ ಜಾರಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರಾಟ ಪ್ರಮಾಣದಲ್ಲೂ ಗಣನೀಯವಾಗಿ ಏರಿಕೆ ಕಂಡಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ವವ್‌ಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
-ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ₹1 ಸಾವಿರ ಗಡಿ ದಾಟಿದೆ
-ಫ್ಯಾನ್, ವಾಷಿಂಗ್ ಮಷಿನ್ ಪ್ರತಿ ತಿಂಗಳಿಗೆ 170 ಯೂನಿಟ್ ದಾಟಲ್ಲ
-ವಿದ್ಯುತ್ ಬಿಲ್ ಫ್ರೀ ಭರವಸೆ ಹಿನ್ನೆಲೆ ಗ್ಯಾಸ್‌ಗೆ ಗುಡ್‌ಬೈ ಹೇಳುವ ಸಾಧ್ಯತೆ
ಗೃಹ ಬಳಕೆಯಾಗುವ ಎಲ್‌ಪಿಜಿ ಸಿಲಿಂಡರ್ ಬೆಲೆ 1 ಸಾವಿರ ರೂಪಾಯಿ ಗಡಿ ದಾಟಿದೆ. ಜತೆಗೆ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಮಿಕ್ಸಿ, ಫ್ರಿಜ್ ಇದ್ದೇ ಇರುತ್ತೆ. ಆದರೆ ಎಲೆಕ್ಟ್ರಿಕ್ ಸ್ಟವ್, ಇಂಡಕ್ಷನ್ ಒಲೆಗಳು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್ ಬದಲು ಎಲೆಕ್ಟ್ರಿಕ್ ಸ್ಟವ್‌ಗಳ ಬಳಕೆಗೆ ಮುಂದಾಗಿದ್ದಾರೆ.
ಫ್ಯಾನ್, ವಾಷಿಂಗ್ ಮಷಿನ್, ಫ್ರಿಡ್ಜ್ ಇದ್ದರೂ ಪ್ರತಿ ತಿಂಗಳಿಗೆ 100 ಯುನಿಟ್‌ಗಿಂತ ದಾಟಲ್ಲ. ಆದರೆ ಮೊದಲು ಬಿಲ್ ಭಯದಲ್ಲಿ ಮಧ್ಯಮ ವರ್ಗದವರು ಎಲೆಕ್ಟ್ರಿಕ್ ವಸ್ತು ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಈಗ ಉಚಿತ ವಿದ್ಯುತ್ ಘೋಷಣೆ ನಂತರ ಎಲೆಕ್ಟ್ರಿಕ್ ವಸ್ತುಗಳ ಖರೀದಿಯಲ್ಲಿ ಹೆಚ್ಚಳವಾಗಿದೆ.
ಇತರೆ ಎಲೆಕ್ಟ್ರಾನಿಕ್ ವಸ್ತುಗಳಾದ ಏರ್ ಕೂಲರ್, ಎಲೆಕ್ಟ್ರಿಕ್ ಗೀಸರ್‌ಗಳ ಮಾರಾಟದಲ್ಲಿ ಕೂಡ ಹೆಚ್ಚಳವಾಗಿದೆ. ಮೊದಲೆಲ್ಲಾ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತದೆ ಎಂದು ಏರ್ ಕೂಲರ್, ಏರ್ ಕಂಡಿಷನರ್ ಬಳಸಲು ಜನರು ಹಿಂದೇಟು ಹಾಕುತ್ತಿದ್ದರು. ಉಚಿತ ವಿದ್ಯುತ್ ಘೋಷಣೆ ನಂತರ ಇವುಗಳ ಮಾರಾಟದಲ್ಲಿ ಕೂಡ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳು ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಸೆಲ್ಸ್ ಮ್ಯಾನೇಜರ್ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಸದ್ಯ ಜನರೇನೊ ಉಚಿತ ಆಫರ್‌ಗೆ ಫಿದಾ ಆಗಿ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಏನಾದರೂ ಉಚಿತ ವಿದ್ಯುತ್ ನೀಡಲು ಹಲವು ನಿಯಮಗಳನ್ನು ರೂಪಿಸುತ್ತೆ ಎಂದು ಬಿಪಿಎಲ್ ಕಾರ್ಡ್‌ಗೂ ಜನ ಮುಗಿಬಿದ್ದಿದ್ದಾರೆ.
ಬಿಪಿಎಲ್ ಕಾರ್ಡ್ ಬೇಕಾದರೆ ಇನ್ಮುಂದೆ ಬೇಕು ಪರ್ಮಿಷನ್?
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆ. ಸಿದ್ದರಾಮಯ್ಯ ಸರ್ಕಾರದ ಹಲವು ಭಾಗ್ಯ, ಗ್ಯಾರಂಟಿ ಘೋಷಣೆ ಬೆನ್ನಲ್ಲೆ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿಗಳ ಸುರಿಮಳೆ ಬರುತ್ತಿದೆ. ಉಚಿತ ಸ್ಕೀಂ ಪಡೆಯಲು ಪ್ರತಿದಿನ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ ಆಗುತ್ತಿದೆ.
ಕಳೆದೆರಡು ವರ್ಷದಿಂದ ಇಲ್ಲಿಯವರೆಗೆ ಒಟ್ಟು 3.36 ಲಕ್ಷ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ 2.87 ಲಕ್ಷ ಬಿಪಿಎಲ್ ಹಾಗೂ 46,576 ಎಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಇನ್ನು ಮುಂದೆ ಬಿಪಿಎಲ್ ಕಾರ್ಡ್ ಬೇಕಾದರೆ ಹಣಕಾಸು ಇಲಾಖೆ ಅನುಮತಿ ಅಗತ್ಯ ಎನ್ನಲಾಗುತ್ತಿದೆ.
ಯಾಕೆಂದರೆ ಕರ್ನಾಟಕವು ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಮಿತಿ ತಲುಪಿದೆ. ಕಳೆದ ಮೂರು ತಿಂಗಳ ಹಿಂದೆ 1.5 ಲಕ್ಷ ಬಿಪಿಎಲ್ ಕಾರ್ಡ್‌ಗೆ ಅನುಮತಿ ನೀಡಿದ್ದು, ಎರಡು ಲಕ್ಷಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಿದೆ. ಅನಾರೋಗ್ಯದಂತಹ ತುರ್ತು ಇದ್ದರಷ್ಟೇ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಗ್ಯಾನೇಂದ್ರ ಕುಮಾರ್ ಪ್ರತಿಕ್ರಿಯಿಸಿದ್ದಾರೆ.\
ಹೊಸ ಅರ್ಜಿ ಸ್ವೀಕಾರಕ್ಕೆ ಬ್ರೇಕ್
ಜಿಲ್ಲೆಗಳು- ಅರ್ಜಿ ಸಲ್ಲಿಕೆ
ಬೆಳಗಾವಿ- 27,411
ವಿಜಯಪುರ- 17,228
ಬೆಂಗಳೂರು – 12,765
ಬೀದರ್ – 12,661
ರಾಯಚೂರು- 12,498
ಗ್ಯಾರಂಟಿ ಯೋಜನೆಗಳನ್ನು ಕೇವಲ ಬಡ ವರ್ಗದ ಜನರಿಗೆ ಸೀಮಿತಗೊಳಿಸಲು ಯೋಚಿಸುತ್ತಿದ್ದು, ಈ ಹಿನ್ನೆಲೆ ಉಚಿತ ಕೊಡುಗೆಗಳ ಲಾಭ ಪಡೆಯಲು ಜನರು ಹೊಸ ಬಿಪಿಎಲ್ ಕಾರ್ಡ್ ಮಾಡಿಸಲು ಮುಂದಾಗಿದ್ದಾರೆ. ಮೇ 14 ರಿಂದ 20ರವರೆಗೆ ಆರೇ ದಿನಗಳಲ್ಲಿ ಬರೋಬ್ಬರಿ 78 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಬಿಪಿಎಲ್ ಕಾರ್ಡ್‌ಗಾಗಿ ಅಲೆದಾಡುತ್ತಿರುವ ಜನರಿಗೆ ನಿರಾಸೆ ಕಾದಿದ್ದು, ಹೊಸ ಕಾರ್ಡ್‌ಗಳಿಗಾಗಿ ಅರ್ಜಿ ಸ್ವೀಕಾರವೇ ಸ್ಥಗಿತವಾಗಿದೆ.
ಅರ್ಜಿ ಸಲ್ಲಿಕೆ ಹೆಚ್ಚಾಗುತ್ತಿದ್ದಂತೆ ಆಹಾರ ಇಲಾಖೆ ಹೊಸ ಅರ್ಜಿಗಳನ್ನು ಪಡೆಯುವುದನ್ನು ನಿಲ್ಲಿಸಿಬಿಟ್ಟಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಪ್ರಕಟ ಮಾಡಿದೆ. ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಪ್ರಕಾರ ಈಗಾಗಲೇ ಕರ್ನಾಟಕ ರಾಜ್ಯ ಮಿತಿ ತಲುಪಿದೆ. ಹೀಗಾಗಿ ಅರ್ಜಿ ಸಲ್ಲಿಕೆ ತಾತ್ಕಲಿಕವಾಗಿ ಸ್ಥಗಿತ ಮಾಡಲಾಗಿದೆ. ಇನ್ನು ಬಿಪಿಎಲ್ ಕಾರ್ಡ್ ನೀಡಲು ಹಣಕಾಸು ಇಲಾಖೆ ಅನುಮತಿ ಅಗತ್ಯವಾಗಿದೆ.
ಅರ್ಜಿ ಸ್ವೀಕರವನ್ನು ಆಹಾರ ಇಲಾಖೆ ಸ್ಥಗಿತ ಮಾಡಿದರೂ ಸಾವಿರಾರು ಜನರು ಅರ್ಜಿ ಸಲ್ಲಿಕೆಗೆ ಯತ್ನಿಸುತ್ತಿದ್ದಾರೆ. ಸೈಬರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿಚಾರಿಸುತ್ತಿದ್ದಾರೆ. ಆಹಾರ ಇಲಾಖೆಯ ಕಂಟ್ರೋಲ್ ರೂಂಗೆ ಕೂಡ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದರಂತೆ. ಇನ್ನು ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್‌ಗಳನ್ನು ನೀಡುವಂತೆ ಆಗ್ರಹವೂ ವ್ಯಕ್ತವಾಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಹೆಚ್ಚು ಅರ್ಜಿ ಸಲ್ಲಿಕೆ?
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ