ಚಿಕ್ಕಮಗಳೂರು: ಗೃಹಲಕ್ಷ್ಮಿ ಯೋಜನೆಯ ಹಣ ಬಾರದ ಹಿನ್ನೆಲೆಯಲ್ಲಿ ಮಹಿಳೆಯರು ಆಕ್ರೋಶ ಹೊರಹಾಕಿದ ಘಟನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ (Congress Guarantee) ನಡೆಯಿತು. ನಮಗೆ ಗೃಹ ಲಕ್ಷ್ಮಿ ಹಣವೇ ಬಂದಿಲ್ಲ, ನಮಗೆ ಹಣ ಬೇಕು, ಅದನ್ನು ಕೇಳಲು ಬಂದಿದ್ದೇವೆ. ನಮ್ಮನ್ನು ಸಿಎಂ ಸಿದ್ದರಾಮಯ್ಯ ಅವರ ಬಳಿ ಕಳುಹಿಸಿ ಎಂದು ಮಹಿಳೆಯರು ಪಟ್ಟು ಹಿಡಿದದ್ದು ಕಂಡುಬಂತು.
ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭಾಷಣ ಆರಂಭವಾಗುತ್ತಿದ್ದಂತೆ ಸಿಟ್ಟು ಹೊರಹಾಕಿದ ಮಹಿಳೆಯರು, ನಾವು ಕಡೂರಿನಿಂದ ಸಮಾವೇಶಕ್ಕೆ ಬಂದಿದ್ದೇವೆ, ನಮಗೆ ಗೃಹ ಲಕ್ಷ್ಮಿ ಹಣ ಬಂದಿಲ್ಲ, ಸಿಎಂ ಅವರ ಬಳಿ ಮಾತನಾಡಲು ಬಿಡಿ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು.
ಬಿಜೆಪಿಯಿಂದ ಸುಳ್ಳುಗಳ ಆಧಾರದಲ್ಲೇ ದೇಶ ಆಳುವ ಸರ್ಕಸ್: ಸಿಎಂ ಸಿದ್ದರಾಮಯ್
ಚಿಕ್ಕಮಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ (Congress Guarantee:) ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಬಿಜೆಪಿ ನಿರಂತರವಾಗಿ ಅವಮಾನಿಸುತ್ತಿದೆ. ಒಂದು ಕಡೆ ಅವಮಾನಿಸುತ್ತಲೇ ಮತ್ತೊಂದು ಕಡೆ ವಿಪರೀತ ಸುಳ್ಳುಗಳನ್ನು ಹೇಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಇಲ್ಲವೇ ಸಿ.ಟಿ.ರವಿ? ಈ ಪ್ರಶ್ನೆಗೆ ಬಹಿರಂಗವಾಗಿ ಉತ್ತರಿಸಲು ಬಿಜೆಪಿಗೆ ಸವಾಲು ಹಾಕಿದ ಸಿಎಂ, ಗ್ಯಾರಂಟಿ ಯೋಜನೆಗಳು ರಾಜ್ಯದ ಜನರು ಹಕ್ಕು. ಫಲಾನುಭವಿಗಳನ್ನು ಅವಮಾನಿಸುವುದನ್ನು ತಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು.
ಐದಕ್ಕೆ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸಿದ ಜಿಲ್ಲೆಯ ಜನತೆಯ ಸಮಯಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು, ನಿಮಗೆ ಬಿಜೆಪಿ ಸರ್ಕಾರದ ಅಚ್ಛೆ ದಿನಗಳು ಬಂದಿದೆಯಾ ಎಂದು ಪ್ರಶ್ನಿಸಿದರು. ನೆರೆದಿದ್ದ ಜನರು ಇಲ್ಲ ಇಲ್ಲ ಎಂದು ಕೂಗಿದರು.
ಅಭಿವೃದ್ಧಿ ಶೂನ್ಯ ಬಿಜೆಪಿ, ಸುಳ್ಳುಗಳ ಉತ್ಪಾದನೆ ಮಾಡುತ್ತಿದೆ. ಸುಳ್ಳುಗಳ ಆಧಾರದಲ್ಲೇ ದೇಶವನ್ನು ಆಳುವ ಸರ್ಕಸ್ ಮಾಡುತ್ತಿದೆ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್, ಹಸಿವು ಮುಕ್ತ ಭಾರತ ನಿರ್ಮಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ನೀವು ಸ್ವತಂತ್ರ ಭಾರತದ ಇತಿಹಾಸ ನೋಡಿದರೆ ಹಸಿವು ಮುಕ್ತ ಭಾರತಕ್ಕಾಗಿ ಕಾಂಗ್ರೆಸ್ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿತು ಎನ್ನುವ ಪಟ್ಟಿಯೇ ಸಿಗುತ್ತದೆ ಎಂದರು.
ಕುವೆಂಪು ಅವರ ಸರ್ವೋದಯವಾಗಲಿ ಸರ್ವರಲಿ ಎನ್ನುವ ಮೌಲ್ಯವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಸರ್ವರ ಉದಯಕ್ಕಾಗಿಯೇ ಕಾಂಗ್ರೆಸ್ ಶ್ರಮಿಸುತ್ತಿದೆ. ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ನಾಲ್ಕೂವರೆ ಕೋಟಿ ಜನರ ಮನೆ ಬಾಗಿಲು ಬಡಿದಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಬಿಜೆಪಿ ರಾಜ್ಯದ ಜನರ ಬದುಕನ್ನು ಪಕ್ಕಕ್ಕಿಟ್ಟು ಕೇವಲ ಭಾವನೆಗಳನ್ನು ಕೆರಳಿಸುತ್ತದೆ. ಇದುವರೆಗೂ ರಾಜ್ಯದಲ್ಲಿ ಬಿಜೆಪಿ ಒಂದು ಭಾರಿಯೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರೇ ಹೊರತು ಸ್ವಂತ ಶಕ್ತಿ ಮೇಲೆ ಅಧಿಕಾರ ನಡೆಸಿಯೇ ಇಲ್ಲ. ನಾವು 2013 , 2023 ಎರಡೂ ಬಾರಿಯೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾ, ಅಲ್ವಾ ತಮ್ಮಯ್ಯ ಎಂದು ಚಿಕ್ಕಮಗಳೂರು ಶಾಸಕರನ್ನು ಪ್ರಶ್ನಿಸಿ ಬಿಜೆಪಿಗೆ ತಿವಿದರು.
ಇದನ್ನೂ ಓದಿ | Congress Guarantee : ಹೊಟ್ಟೆ ತುಂಬ ಊಟ ಮಾಡ್ತೀವಿ; ಹೆಬ್ಬಾಳ್ಕರ್ ಗಲ್ಲ ಸವರಿ ಗ್ಯಾರಂಟಿಗೆ ಜೈ ಎಂದ ಅಜ್ಜಿ
4 ಕೋಟಿ 64 ಲಕ್ಷ ಜನರಿಗೆ ನಮ್ಮ ಗ್ಯಾರಂಟಿಗಳು ತಲುಪಿ, ಅವರಿಗೆ ಸ್ವಲ್ಪ ಸಮಾಧಾನ ತಂದಿದೆ. ಅವರ ಜೇಬಿಗೆ ನೇರವಾಗಿ ನಾವು ಹಣ ಹಾಕುತ್ತಿರುವುದರಿಂದ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಇದರ ಪರಿಣಾಮ ರಾಜ್ಯದ ಆರ್ಥಿಕತೆಗೆ ಬಡವರು ಶಕ್ತಿ ತುಂಬಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.