Site icon Vistara News

CM Basavaraja Bommai : ಕಾಂಗ್ರೆಸ್‌ ಪ್ರಚೋದನೆಯಿಂದ ಬಿಎಸ್‌ವೈ ಮನೆಗೆ ಕಲ್ಲು ತೂರಾಟ; ಬೊಮ್ಮಾಯಿ ಆಪಾದನೆ

karnataka-election: CM Bommai Lambasts Kharge over statement against PM Narendra modi

karnataka-election: CM Bommai Lambasts Kharge over statement against PM Narendra modi

ಕಲಬುರಗಿ: ಕಾಂಗ್ರೆಸ್ ವ್ಯವಸ್ಥಿತವಾಗಿ ಪ್ರಚೋದನೆ ನೀಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಗಂಭೀರ ಆರೋಪ ಮಾಡಿದರು. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ರಾತ್ರೋರಾತ್ರಿ ಸಭೆ ಕರೆದು ಪ್ರಚೋದನೆ ನೀಡಿದ್ದಾರೆ ಎಂದರು.

ಬಿಎಸ್‌ವೈ ಅವರ ಮನೆಗೆ ಕಲ್ಲು ತೂರಾಟ ನಡೆಸಿರುವುದು ಬಿಜೆಪಿ ಕುತಂತ್ರ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರು, ʻʻಅಲ್ಲಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕವರು ಕಾಂಗ್ರೆಸ್ ನಾಯಕರು. ಅವರು ಹಿಂದಿನ ದಿನ ಜನಾಂಗದವರನ್ನು ತಪ್ಪು ದಾರಿಗೆ ಎಳೆದು, ಎಸ್.ಸಿ. ಪಟ್ಟಿಯಿಂದ ಜನಾಂಗವನ್ನು ತೆಗೆಯುತ್ತಾರೆ ಎಂದು ಸುಳ್ಳು ಹೇಳಿ ಪ್ರಚೋದಿಸಿ, ರಾತ್ರಿ ಸಭೆ ಕರೆದು ವ್ಯವಸ್ಥಿತವಾಗಿ ಗಲಾಟೆ ಸೃಷ್ಟಿಸಿದ್ದಾರೆ. ಇದನ್ನು ನಾನು ಸಾಕ್ಷಿ ಸಮೇತವಾಗಿ ಹೇಳುತ್ತಿದ್ದೇನೆ. ಸುಳ್ಳು ಹೇಳುವುದನ್ನು ಡಿ.ಕೆ.ಶಿವಕುಮಾರ್ ಬಿಡಬೇಕು ಎಂದರು.

ಕಾಂಗ್ರೆಸ್ ನವರಿಗೆ ಹೊಟ್ಟೆಕಿಚ್ಚು

ʻʻಜವಳಿ ಪಾರ್ಕ್ ಬಗ್ಗೆ ಒಂದೂವರೆ ವರ್ಷಗಳಿಂದ ಮಾತನಾಡುತ್ತಿದ್ದೇವೆ. ಜವಳಿ ಪಾರ್ಕ್ ನೂತನ ಜವಳಿ ನೀತಿಯಲ್ಲಿ ಬಂದಿದ್ದು, ಪ್ರಧಾನಿಗಳು ಜವಳಿ ಮೂಲಕ ಹೆಚ್ಚಿನ ಉದ್ಯೋಗ ಮತ್ತು ರಫ್ತು ಆಗಬೇಕೆಂಬ ಹಿನ್ನೆಲೆಯಲ್ಲಿ ಆಗಿದೆ. ಕಲಬುರಗಿಗೆ ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಬೇಕು. ಕಾಂಗ್ರೆಸ್ ನವರಿಗೆ ಹೊಟ್ಟೆಕಿಚ್ಚು. ಅವರು ಮಾಡಲು ಸಾಧ್ಯವಾಗದೆ ಇದ್ದುದನ್ನು ನಾವು ಮಾಡಿದ್ದೇವೆ ಎಂದು. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆʼʼ ಎಂದರು.

ಎಸ್.ಟಿ. ಸೋಮಶೇಖರ್ ಹಾಗೂ ಬಿ.ಎ. ಬಸವರಾಜ ಅವರು ಚುನಾವಣೆ ಘೋಷಣೆಯಾದ ನಂತರ ವಲಸೆ ಬರಲಿದ್ದಾರೆ ಎಂದು ಚೆಲುವ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರೇ ಒಬ್ಬ ವಲಸಿಗರು, ಅವರ ಮಾತು ನಂಬಲು ಆಗುತ್ತದೆಯೇ ಎಂದರು.

ಯಾರ ಜತೆಗೂ ಹೊಂದಾಣಿಕೆ ಇಲ್ಲ

ʻʻಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅವರು ಹೇಳಿರುವುದು ಸರಿಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಂದಾಣಿಕೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆʼʼ ಎಂದರು.

ಎಸ್‌ಡಿಪಿಐ ಹೇಳಿಕೆಗಳನ್ನು ಗಮನಿಸಿ ಕಾನೂನಿನ ಕ್ರಮ

ಬೆಳಗಾವಿಯಲ್ಲಿ ಮಾತನಾಡಿದ ಅವರು, ಎಸ್.ಡಿ.ಪಿ.ಐ ಹೇಳಿಕೆಗಳನ್ನು ಗಮನಿಸಿ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ʻʻಎಸ್.ಡಿ.ಪಿ.ಐ ಅಲ್ಪಸಂಖ್ಯಾತರ ವಿರೋಧಿಯಾಗಿರುವ ಒಂದು ದೇಶದ್ರೋಹಿ ಸಂಸ್ಥೆ . ಅವರಿಂದ ನಾವು ಮೆಚ್ಚುಗೆ ಬಯಸುವುದೂ ಇಲ್ಲ. ಅವರು ಸದಾ ನಮ್ಮ ಚಿಂತನೆ, ವಿಚಾರಗಳಿಗೆ ವಿರುದ್ಧ ಇದ್ದಾರೆ. ಅದಕ್ಕೆ ನಾವು ಸೊಪ್ಪು ಹಾಕುವುದಿಲ್ಲʼʼ ಎಂದು ಹೇಳಿದರು.

ಕಾಂಗ್ರೆಸ್ ದಿವಾಳಿಯಾಗಿದೆ

ಕಳೆದ 2-3 ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡಿ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಬಳಿ ಸರಿಯಾದ ಅಭ್ಯರ್ಥಿ ಇಲ್ಲದೆ ಹತಾಶರಾಗಿದ್ದಾರೆ. ಹಾಗಾಗಿ ನಮ್ಮ ಪಕ್ಷದವರಿಗೆ ಫೋನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ದಿವಾಳಿಯಾಗಿದೆ ಎಂದು ಇದರಿಂದಾಗಿ ಸ್ಪಷ್ಟವಾಗುತ್ತದೆ ಎಂದು ಹೇಳಿದರು ಬೊಮ್ಮಾಯಿ.

ಇದನ್ನೂ ಓದಿ : PM MITRA Park: ಕಲ್ಯಾಣ ಕರ್ನಾಟಕಕ್ಕೆ ಶಕ್ತಿ ತುಂಬಲಿದೆ ಕಲಬುರಗಿ ಮೆಗಾ ಜವಳಿ ಪಾರ್ಕ್‌: ಸಿಎಂ ಬೊಮ್ಮಾಯಿ

Exit mobile version