ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ವಾಪಸ್ ಪಡೆಯಲಿದೆ. ಅದೇ ಮಾತನ್ನು ತನ್ನ ಶಾಸಕರೊಬ್ಬರಿಂದ ಹೇಳಿಸಿದೆ. ಆ ಶಾಸಕರ ಹೇಳಿಕೆಯ ಧಾಟಿ ಹೇಗಿದೆ ಎಂದರೆ, ಅವರು ಜನರಿಗೆ ಸ್ಪಷ್ಟವಾದ ಬೆದರಿಕೆ ಒಡ್ಡಿದ್ದಾರೆ. “ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ.. ಇಲ್ಲವಾದರೆ ನಿಮಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಮುಲಾಜಿಲ್ಲದೆ ರದ್ದು ಮಾಡುತ್ತೇವೆ” ಎಂದು ಅವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ, ಜನರ ನಂಬಿಕೆಗೆ ಎಸಗಿದ ಅಪಚಾರ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಮಾಗಡಿ ಶಾಸಕ ಬಾಲಕೃಷ್ಣ ಅವರು “ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಐದು ಗ್ಯಾರಂಟಿಗಳು ರದ್ದಾಗುತ್ತವೆ” ಎಂದು ಹೇಳಿರುವುದು ಖಂಡನೀಯ. ಬಾಲಕೃಷ್ಣ ಅವರು ಹೇಳಿರುವುದು ಕಾಂಗ್ರೆಸ್ ಸರ್ಕಾರದ ಅಸಲಿ ಆಲೋಚನೆಯನ್ನು ಬಯಲು ಮಾಡಿದೆ. ಕೊಟ್ಟ ಕೈಯ್ಯಲ್ಲೆ ಕಸಿದುಕೊಳ್ಳುವ ಹುನ್ನಾರ ಇಲ್ಲಿ ಸ್ಫುಟವಾಗಿ ಗೋಚರಿಸುತ್ತಿದೆ ಹೇಳಿದ್ದಾರೆ.
ಪಕ್ಷ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಅಪ್ಪಣೆ ಇಲ್ಲದೆ ಶಾಸಕರು ಇಂಥ ಮಹತ್ವದ ಹೇಳಿಕೆಯನ್ನು ಅದೂ ಚುನಾವಣೆ ಹೊತ್ತಿನಲ್ಲಿ ಕೊಡಲು ಸಾಧ್ಯವೇ? ಅಲ್ಲಿಗೆ ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂದಿರುವ ಅವರು, ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಒದ್ದಾಡುತ್ತಿರುವ ಸರ್ಕಾರವು, ತನ್ನ ಶಾಸಕರೊಬ್ಬರ ಮೂಲಕ ರದ್ದು ಮಾಡುತ್ತೇವೆ ಎಂದು ಹೇಳಿಸಿದೆ ಎಂದೇ ಭಾವಿಸಬೇಕಾಗುತ್ತದೆ. ಅದು ನಿಜವೂ ಹೌದು ಎನ್ನುವುದು ನನ್ನ ಭಾವನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Budget 2024: ಕೃಷಿ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಇದು ಬೆಸ್ಟ್ ಬಜೆಟ್: ಎಚ್.ಡಿ. ಕುಮಾರಸ್ವಾಮಿ
ಆ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ನೀವು ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟಿದ್ದಿರಿ. ಆಮೇಲೆ ಅವುಗಳನ್ನು ಜಾರಿ ಮಾಡಿದ್ದೀರಿ. ಗ್ಯಾರಂಟಿ ಕೊಡಿ, ನಿಮಗೆ ವೋಟು ಹಾಕುತ್ತೇವೆ ಎಂದು ಜನರೇನು ಕೇಳಿರಲಿಲ್ಲ. ವಾಸ್ತವ ಸ್ಥಿತಿ ಹೀಗಿದ್ದ ಮೇಲೆ ಈಗ ಗ್ಯಾರಂಟಿಗಳನ್ನು ಅದ್ಹೇಗೆ ವಾಪಸ್ ಪಡೆಯುತ್ತೀರಿ? ಕಾಂಗ್ರೆಸ್ ಸರ್ಕಾರದ ವರ್ತನೆಗೆ ನನ್ನ ಹಾಗೂ ನಮ್ಮ ಪಕ್ಷದ ತೀವ್ರ ವಿರೋಧವಿದೆ ಎಂದು ಹೇಳಿದ್ದಾರೆ.