Site icon Vistara News

Congress Protest: ಹೊಳೆನರಸೀಪುರದಲ್ಲಿ ಪ್ರಸಾದ ಹಂಚಲು ಕಾಂಗ್ರೆಸ್-ಜೆಡಿಎಸ್‌ ಕಾರ್ಯಕರ್ತರ ನಡುವೆ ಜಗಳ; ನೂಕಾಟ-ತಳ್ಳಾಟ

Congress, JDS workers clash over distribution of prasadam in Holenarasipura

#image_title

ಹಾಸನ: ಇತಿಹಾಸ ಪ್ರಸಿದ್ಧ ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ‌ ದೇವಾಲಯದಲ್ಲಿ ಪ್ರಸಾದ ವಿನಿಯೋಗ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ನೂಕಾಟ ತಳ್ಳಾಟ ನಡೆದಿದೆ. ಜೆಡಿಎಸ್‌ ಕಾರ್ಯಕರ್ತರು ಪ್ರಸಾದ ವಿತರಣೆ ಮಾಡುತ್ತಾರೆ. ಹೀಗಾಗಿ ತಮಗೂ ಪ್ರಸಾದ ವಿನಿಯೋಗ ಮಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಒತ್ತಾಯಿಸಿ ಪ್ರತಿಭಟನೆ (Congress Protest) ನಡೆಸಿದ್ದರಿಂದ ಜಗಳ ಶುರುವಾಗಿದೆ.

ಸ್ಥಳೀಯ ಜೆಡಿಎಸ್ ಶಾಸಕ ರೇವಣ್ಣ ಕಡೆಯಿಂದ ಪ್ರಸಾದ ವಿನಿಯೋಗ ನಡೆಯುತ್ತದೆ. ಹಾಗಾಗಿ ನಮಗೂ ಅವಕಾಶ ನೀಡಿ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಈ ವೇಳೆ ಸ್ಥಳಕ್ಕೆ ಜೆಡಿಎಸ್‌ ಕಾರ್ಯಕರ್ತರು ಆಗಮಿಸಿದ್ದರಿಂದ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ನೂಕಾಟ ತಳ್ಳಾಟ ನಡೆದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿದ್ದಾರೆ. ಈ ವೇಳೆ ದೇವಾಲಯದ ಆವರಣದಲ್ಲಿ ಯಾರಿಗೂ ಪ್ರಸಾದ ವಿನಿಯೋಗ ಮಾಡಲು ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.

ಇದನ್ನೂ ಓದಿ | Siddaramaiah: ನಾನು ಸಾಯುವವರೆಗೂ ಆರ್‌ಎಸ್‌ಎಸ್ ವಿರೋಧಿ; ಹಿಂದುತ್ವದ ಹೆಸರಲ್ಲಿ ಮನುಸ್ಮೃತಿ ಜಾರಿ ಹುನ್ನಾರ: ಸಿದ್ದರಾಮಯ್ಯ

ದೇವಾಲಯದಲ್ಲಿ ಯಾರಿಗೂ ಪ್ರಸಾದ ವಿನಿಯೋಗಕ್ಕೆ ಅವಕಾಶ ಇಲ್ಲ: ತಹಸಿಲ್ದಾರ್

ಈ ಹಿಂದಿನಿಂದಲೂ ಯಾವುದೇ ಪಕ್ಷದ ಹೆಸರಿನಲ್ಲಿ ಪ್ರಸಾದ ವಿನಿಯೋಗ ನಡೆದಿಲ್ಲ. ಈ ವರ್ಷ ಕೂಡ ಯಾರ ವೈಯಕ್ತಿಕ ಹೆಸರು ಅಥವಾ ಪಕ್ಷದ ಹೆಸರಿನಲ್ಲಿ ಅನ್ನ ಸಂತರ್ಪಣೆ ಆಗಲ್ಲ. ಆದರೆ, ಮುಜರಾಯಿ ಇಲಾಖೆಗೆ ಯಾರು ಬೇಕಾದರೂ ದಾನ ಕೊಡಬಹುದು. ದಾನಿಗಳು ದಿನಸಿ ಕೊಟ್ಟರೆ ಅದನ್ನು ಅನ್ನ ಸಂತರ್ಪಣೆಗೆ ಬಳಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಯಾರಿಗೂ ಪ್ರಸಾದ ವಿನಿಯೋಗಕ್ಕೆ ಅವಕಾಶ ಇಲ್ಲ ಎಂದು ತಹಸೀಲ್ದಾರ್ ಸ್ಪಷ್ಟನೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಗಿದೆ.

Congress, JDS workers clash over distribution of prasadam in Holenarasipura Holenarasipur

ದೇವರ ಕಾರ್ಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದ ಪ್ರಜ್ವಲ್‌ ರೇವಣ್ಣ

ಮೊದಲಿನಿಂದ ಜಾತ್ರೆ ಹೇಗೆ ನಡೆದುಕೊಂಡು ಬರುತ್ತಿದೆಯೋ ಹಾಗೆಯೇ ನಡೆಯುತ್ತದೆ. ಯಾರೂ ಕೂಡ ದೇವರ ಕಾರ್ಯ ಹಾಳು ಮಾಡುವ ಕೆಲಸ ಮಾಡಬಾರದು. ಅವರೂ ಬಂದು ಪೂಜೆ ಮಾಡಲಿ, ನಾವು ಬೇಡ ಎನ್ನಲ್ಲ. ಪ್ರಸಾದವನ್ನು ಒಳಗೆ ಬಿಡುವುದಿಲ್ಲ, ಹೂಗಳನ್ನು ಒಳಗಡೆ ಬಿಡುವುದಿಲ್ಲ ಎಂದರೆ ಹೇಗೆ? ಇದರಿಂದ ನನಗೇನು ಆಗಲ್ಲ ಅವರಿಗೇ ತೊಂದರೆ ಆಗುತ್ತದೆ. ದೇವರ ಕಾರ್ಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಂಸದ ಪ್ರಜ್ವಲ್‌ ರೇವಣ್ಣ ತಿಳಿಸಿದ್ದಾರೆ.

ಹಾಸನ‌ ಜಿಲ್ಲೆ ಹೊಳೆನರಸೀಪುರದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಪ್ರಸಾದ ವಿತರಣೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ರಾಜಕಾರಣ ಮಾಡುವ ಕಡೆ ಮಾಡಲಿ‌, ನಾನೇನೂ ಬೇಡ ಎಂದು ಹೇಳುವುದಿಲ್ಲ. ಈಗ ಅವರು ಸ್ಟೇಜ್ ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದಾರೆ. ಒಂದು ಸಾವಿರ ಜನ ಸೇರಿಸಿ ದೊಡ್ಡ ಸಮಾವೇಶ ಎಂದು ಬಿಂಬಿಸಿಕೊಂಡರು. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಲ್ಲ. ಆದರೆ ದೇವರ ಕಾರ್ಯದ ಸಂದರ್ಭದಲ್ಲಿ ಗಲಾಟೆ ಆಗುವುದು ಬೇಡ. ಇದು ಊರಿನ ಜಾತ್ರೆ ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಬೇಡ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಮಂಡ್ಯದಲ್ಲಿ ಭುಗಿಲೆದ್ದ ʻಕೈʼ ಭಿನ್ನಮತ: ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ; ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆತ

ದೇವರ ಕಾರ್ಯ ಮೊದಲಿನಿಂದ‌ ಹೇಗೆ ನಡೆಯುತ್ತಿದೆ ಹಾಗೆಯೆ ನಡೆಯಲಿ, ನಾವು ಇಲ್ಲಿ ಪ್ರಸಾದ ಕೊಡುತ್ತಿಲ್ಲ, ದಾನ ಎಂದು ಕೊಡುತ್ತಿದ್ದೇವೆ. ಅದನ್ನು ದೇವಾಲಯ ಸಮಿತಿಯವರು ಪಡೆದು ಅವರೇ ಪ್ರಸಾದ ಕೊಡುತ್ತಾರೆ. ಅವರೇ ಸ್ವಯಂ ಸೇವಕರನ್ನು ಇಟ್ಟುಕೊಂಡು ಪ್ರಸಾದ ಹಂಚುತ್ತಾರೆ. ನಾವು ಸ್ವ-ಇಚ್ಛೆಯಿಂದ ತರಕಾರಿ, ದಿನಸಿ ದಾನ ಕೊಡುತ್ತೇವೆ. ಅವರೂ ಕೊಡಲಿ, ನಾವೇನು ಬೇಡ ಎನ್ನುವುದಿಲ್ಲ ಎಂದು ಪ್ರಜ್ವಲ್‌ ಹೇಳಿದರು.

Exit mobile version