Site icon Vistara News

Congress Karnataka: ರಾಜಕೀಯ ಲಾಭಕ್ಕಾಗಿ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ: ಬಸವರಾಜ ರಾಯರೆಡ್ಡಿ

Basavarj rayareddy urges on DCM Post

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ನಡುವಿನ ಬಣ ಜಗಳ ಬೀದಿಗೆ ಬಂದು ನಿಂತಿದೆ. ಮೂವರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ದಲಿತ ಹಾಗೂ ಸಿಎಂ ಆಪ್ತ ಸಚಿವರು ಈಚೆಗೆ ಧ್ವನಿ ಎತ್ತಿದ್ದರು. ಜತೆಗೆ ಡಿನ್ನರ್‌ ಪಾಲಿಟಿಕ್ಸ್‌ (Dinner Politics) ಸಹ ನಡೆದಿತ್ತು. ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ (Randeep Singh Surjewala) ಅವರು ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಿ ಅಸಮಾಧಾನಿತರ ಅಹವಾಲನ್ನು ಆಲಿಸಿದ್ದರು. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾತನಾಡಿ, ಯಾವುದೇ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಪ್ರಸ್ತಾಪ ಹೈಕಮಾಂಡ್‌ ಮುಂದೆ ಇಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಇಷ್ಟಾದರೂ ಹೇಳಿಕೆ ಮಾತ್ರ ನಿಂತಿಲ್ಲ. ಈಗ ಈ ಬಗ್ಗೆ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿದ್ದು, ರಾಜಕೀಯ ಲಾಭದ ದೃಷ್ಟಿಯಿಂದ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗಿರುವುದು ನಿಜ. ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕು ಎಂದಾದರೆ ಗ್ಯಾರಂಟಿ ಯೋಜನೆಗಳ ಜಾರಿ ಅನಿವಾರ್ಯವಾಗಿದೆ. ಹಣಕಾಸಿನ ಮೇಲೆ ಪರಿಣಾಮ ಆಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಇವುಗಳನ್ನು ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಾರೆ. ಈ ಬಾರಿ ಕೊರತೆ ಬಜೆಟ್ ಮಂಡಿಸಿದ್ದು ಸಹ ಅದೇ ಕಾರಣಕ್ಕಾಗಿದೆ ಎಂದು ಹೇಳಿದರು.

ಬಿಜೆಪಿಯಿಂದ ಆರ್ಥಿಕ ಅಶಿಸ್ತು

ಗ್ಯಾರಂಟಿ ಯೋಜನೆಗಳಿಂದಾಗಿಯೇ ಕೊರತೆ ಬಜೆಟ್ ಅನ್ನು ಮಂಡಿಸಬೇಕಾಯಿತು. ನಾವು ಚುನಾವಣೆಯಲ್ಲಿ ಕಮಿಟ್ ಆಗಿದ್ದೇವೆ. ಹೀಗಾಗಿ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇತ್ತು. ಆರ್ಥಿಕ ಪರಿಸ್ಥಿತಿ ಹಿನ್ನಡೆ ಆಗಲು ಕೇವಲ ಗ್ಯಾರಂಟಿ ಅಷ್ಟೇ ಕಾರಣವಲ್ಲ. ಈ ಹಿಂದಿನ ಸರ್ಕಾರದ ಆರ್ಥಿಕ ಅಶಿಸ್ತು ಸಹ ಕಾರಣವಾಗಿದೆ ಎಂದು ಬಸವರಾಜ ರಾಯರೆಡ್ಡಿ ಕಿಡಿಕಾರಿದರು.

ಇದನ್ನೂ ಓದಿ: Congress Karnataka: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಖಡಕ್‌ ವಾರ್ನಿಂಗ್

ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ

ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ರಾಯರೆಡ್ಡಿ, ಡಿಸಿಎಂ ಹುದ್ದೆಯೇ ಅಸಂವಿಧಾನಿಕವಾಗಿದೆ. ಅದು ನಮ್ಮ ಲಾಭಕ್ಕೆ ಮಾಡಿಕೊಳ್ಳುವ ಹುದ್ದೆಯಾಗಿದೆ. ಈಗ ಪಕ್ಷವನ್ನು ಅಧಿಕಾರಕ್ಕೆ ತಂದ ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿದ್ದಾರೆ. ಇನ್ನಷ್ಟು ಡಿಸಿಎಂ ಹುದ್ದೆ ಸೃಷ್ಟಿಯಾದರೆ ರಾಜಕೀಯವಾಗಿ ಲಾಭ ಆಗಬಹುದು. ರಾಜಕೀಯ ಲಾಭದ ದೃಷ್ಟಿಯಿಂದ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

Exit mobile version