ಬೆಂಗಳೂರು: ಇನ್ನೂ ಎಷ್ಟು ದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇರುತ್ತೇನೋ, ಇಲ್ಲವೋ ಎನ್ನುವುದು ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲು ನಾನು ರೆಡಿ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿರುವುದು ರಾಜಕಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷರು ಬದಲಾಗುತ್ತಾರೆ ಎಂಬ ಚರ್ಚೆಗೆ ಸಚಿವ ಕೆ.ಎನ್ ರಾಜಣ್ಣ ಸಾಥ್ ನೀಡಿದ್ದು, ಅಧ್ಯಕ್ಷರನ್ನು ಬದಲಾವಣೆ ಮಾಡೋದು ಹೈಕಮಾಂಡ್. ಮೂರು ವರ್ಷಗಳಿಗೆ ಒಬ್ಬರು ಬದಲಾವಣೆ ಆಗಬೇಕು. ಬದಲಾದರೆ ನಾನು ಸಹ ಆಕಾಂಕ್ಷಿ. ಅಧ್ಯಕ್ಷ ಸ್ಥಾನಕ್ಕಾಗಿ ಬೇಕಿದ್ದರೆ ಸಚಿವ ಸ್ಥಾನ ತ್ಯಾಗ ಮಾಡುತ್ತೀನಿ ಎಂದು ಹೇಳಿದ್ದಾರೆ.
ಈ ಹಿಂದೆ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಹೇಳಿಕೆ ಕೊಟ್ಟಿದ್ದ ಸಚಿವ ಕೆ.ಎನ್. ರಾಜಣ್ಣ ಅವರು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಎಂದು ಪರೋಕ್ಷವಾಗಿ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಬಾರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಭಾರಿ ಸದ್ದು ಮಾಡಿತ್ತು, ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ರಾಜಣ್ಣ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್ ಜೋಶಿ
ಡಿಕೆಶಿಗೆ ಚೆಕ್‌ಮೇಟ್ ಕೊಡುತ್ತಿದೆಯಾ ಸಿದ್ದರಾಮಯ್ಯ ಟೀಮ್
ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಸಚಿವ ಕೆ.ಎನ್ ರಾಜಣ್ಣ ಅವರು ಗುರುತಿಸಿಕೊಂಡಿದ್ದಾರೆ. ಇವರ ಮೂಲಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯನ್ನು ಮುನ್ನೆಲೆಗೆ ಬರುವಂತೆ ಸಿದ್ದರಾಮಯ್ಯ ಟೀಮ್ ಮಾಡಿದೆ. ಈ ಮೂಲಕ ಡಿ.ಕೆ. ಶಿವಕುಮಾರ್ ಬದಲಾವಣೆಗೆ ಒಳಗೊಳಗೆ ಸಿದ್ದರಾಮಯ್ಯ ಟೀಮ್ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ. ಡಿಕೆಶಿ ಹೇಳಿಕೆ ಬೆನ್ನಲ್ಲೇ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಗ್ಗೆ ಕುತೂಹಲ ಮೂಡಿದೆ.
ಕೆಪಿಸಿಸಿ ಅಧ್ಯಕ್ಷನಾಗಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ; ಡಿಕೆಶಿ ಹೀಗೆ ಹೇಳಿದ್ಯಾಕೆ?
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಪೂರೈಕೆ ಹಿನ್ನೆಲೆಯಲ್ಲಿ ಕೆಪಿಸಿಸಿ ಘಟಕದಿಂದ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ತಮ್ಮ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ್ದರು. ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಆದರೆ, ಈ ಸ್ಥಾನದಲ್ಲಿ ಇನ್ನೆಷ್ಟು ದಿನ ಇರುತ್ತೇನೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದೀಗ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ಹಿಂದೆ ಏನಾದರೂ ಉದ್ದೇಶ ಇದೆಯಾ? ಅವರು ಹೀಗೆ ಹೇಳಿದ್ದು ಯಾಕೆ ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ.
ಅಷ್ಟಕ್ಕೂ ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಹೇಳಿದ್ದೇನೆಂದರೆ, “ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇನ್ನೂ ಎಷ್ಟು ದಿನ ಈ ಸ್ಥಾನದಲ್ಲಿ ಇರುತ್ತೇನೋ, ಇಲ್ಲವೋ ಅನ್ನುವುದು ಗೊತ್ತಿಲ್ಲ. ನಮ್ಮ ಪಕ್ಷದ ನಾಯಕತ್ವ ಬುನಾದಿ ಗಟ್ಟಿ ಮಾಡಬೇಕು. ಬೂತ್ ಮಟ್ಟದಲ್ಲಿ ಗಟ್ಟಿ ಮಾಡಬೇಕು” ಎಂದು ಕಿವಿಮಾತು ಹೇಳಿದ್ದರು.
ನಾನು ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ. ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ, ಅದು ಮುಖ್ಯ ಎಂಬ ಮಾತನ್ನೂ ಇದೇ ವೇಳೆ ಹೇಳಿದ್ದರು. ಅಂದರೆ, ಅವರಿಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತುಗಳನ್ನು ಆಡಿದ್ದರು. ತಾವು ಪಕ್ಷಕ್ಕಾಗಿ ಗಟ್ಟಿಯಾಗಿ ನಿಂತಿದ್ದರಿಂದ ಪಕ್ಷವು ಅಧಿಕಾರಕ್ಕೆ ಬಂದಿದೆ. ಅದೇ ರೀತಿಯಾಗಿ ಪಕ್ಷದ ನಾಯಕತ್ವವನ್ನು, ಉನ್ನತ ಹುದ್ದೆಯನ್ನು ಕೇಳುವವರು ಕೆಲಸ ಮಾಡಿ ತೋರಿಸಬೇಕು ಎಂಬ ನೇರ ಸಂದೇಶವನ್ನು ಡಿ.ಕೆ. ಶಿವಕುಮಾರ್ ರವಾನೆ ಮಾಡಿದ್ದರು.
ಹೊಸ ನಾಯಕತ್ವ ಬೆಳೆಸುವ ಎಚ್ಚರಿಕೆ!
ನಾಲ್ಕು ವೋಟ್ ಹಾಕಿಸದೇ ಬಂದು ಇಲ್ಲಿ ಸ್ಥಾನಮಾನ ಕೇಳುತ್ತೀರಾ? ಮೊದಲು ನಿಮ್ಮ ಬೂತ್‌ನಲ್ಲಿ ಸಂಘಟನೆ ಮಾಡಿ. ಬೂತ್ ಲೀಡ್ ಕೊಡಿಸಿ ಬಂದು ನಾಯಕತ್ವ ಕೇಳಿ. ಇಲ್ಲದೆ ಹೋದರೆ ನಾಯಕತ್ವ ಕೊಡಲ್ಲ ಎಂದು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಚಾಟಿ ಬೀಸಿದ್ದರು.
ಇದನ್ನೂ ಓದಿ | Drinking Water: ಅಧಿಕಾರಿಗಳೇ ಹುಷಾರ್! ನೀರಿನಿಂದ ಆರೋಗ್ಯ ಕೈಕೊಟ್ರೆ ಶಿಸ್ತು ಕ್ರಮ: ಡಿಕೆಶಿ ವಾರ್ನಿಂಗ್
ನಾಲ್ಕು ವೋಟ್ ಹಾಕಿಸದೇ ಬಂದು ಇಲ್ಲಿ ಸ್ಥಾನಮಾನ ಕೇಳಿದರೆ ಹೇಗೆ? ಬಿಳಿ ಜುಬ್ಬಾ, ಬಿಳಿ ಕಾರು ತೆಗೆದುಕೊಂಡು ಬಂದು ಸ್ಥಾನಗಳನ್ನು ಕೇಳುವುದಲ್ಲ. ಮೊದಲು ಸಂಘಟನೆ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ. ನಾವು ಹೊಸ ನಾಯಕತ್ವವನ್ನು ಬೆಳೆಸುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಬೂತ್ ಮಟ್ಟದಲ್ಲಿ ಪಕ್ಷ ಬಲಗೊಳ್ಳದಿದ್ದರೆ ದೂರದೃಷ್ಟಿಯಲ್ಲಿ ಪಕ್ಷವು ಉಳಿದುಕೊಳ್ಳುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಮುಖಂಡರಿಗೆ ಬಿಸಿ ಮುಟ್ಟಿಸುವ ಪ್ರಯತ್ನವನ್ನು ಡಿ.ಕೆ. ಶಿವಕುಮಾರ್ ಮಾಡಿದ್ದಾರೆನ್ನಲಾಗಿದೆ.