ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು ಎಂದು ಚುನಾವಣಾ ಆಯೋಗವನ್ನು ಮನವಿ ಮಾಡುತ್ತಿರುವ ಕಾಂಗ್ರೆಸ್, ಇನ್ನೊಂದೆಡೆ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ.
ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸುಪ್ರೀಂ ಕೋರ್ಟ್ ಹೇಳಿಕೆ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ಸರಣಿ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗ ದುರ್ಬಲ ಸಂಸ್ಥೆ ಎಂಬ ಅಭಿಪ್ರಾಯಪಟ್ಟಿದೆ. ಆಯೋಗದ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಅದು ಸತ್ಯ ಕೂಡ. CEC ಹೆಸರಿಗೆ ಮಾತ್ರ ಸಾಂವಿಧಾನಿಕ ಸಂಸ್ಥೆ. ಆದರೆ ಈ ಸರ್ಕಾರದ ಅವಧಿಯಲ್ಲಿ ಹಲ್ಲಿಲ್ಲದ ಹಾವು. CEC ಇತ್ತೀಚೆಗೆ ಯಾವ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿಷ್ಠುರವಾಗಿ ನಡೆದುಕೊಂಡಿದೆ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ತಮಗೆ ಯಾರು ಅತಿ ಹೆಚ್ಚು ನಿಷ್ಟರೋ, ಯಾರು ತಮ್ಮ ಮಾತು ಚಾಚೂ ತಪ್ಪದೆ ಪಾಲಿಸುತ್ತಾರೋ ಅಂತಹ ಜಿ ಹುಜೂರ್ ಮನಃಸ್ಥಿತಿಯವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುತ್ತದೆ ಎಂದು ನೇರವಾಗಿ ಆರೋಪಿಸಿರುವ ದಿನೇಶ್ ಗುಂಡೂರಾವ್, ಅಂತಹ ಆಯುಕ್ತರು ತಮಗೆ ಹುದ್ದೆ ಕಲ್ಪಿಸಿದ ಸರ್ಕಾರಕ್ಕೆ ಮುಜುರೆ ಸಲ್ಲಿಸುವುದು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಎಂದಿದ್ದಾರೆ.
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಕೊಲಿಜಿಯಂ ವ್ಯವಸ್ಥೆಯಂತೆ ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಬೇಕು. ಇಲ್ಲವೇ ಕರ್ನಾಟಕದಲ್ಲಿ ಲೋಕಾಯುಕ್ತರ ನೇಮಕದ ಮಾನದಂಡದಂತೆ ಆಯುಕ್ತರನ್ನು ನೇಮಿಸಬೇಕು. ಹಾಗಾದಾಗ ಮಾತ್ರ ಆಯೋಗ ಸಮರ್ಥವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Voter Data | ʼಚಿಲುಮೆʼ ಅಕ್ರಮದ ಆರೋಪಿ, ನಾಪತ್ತೆಯಾಗಿದ್ದ ಲೋಕೇಶ್ ಬಂಧನ