ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಖದರ್, ಚರಿಷ್ಮಾ ಇರುವುದು ಸಿದ್ದರಾಮಯ್ಯ ಅನ್ನುವುದು ಸ್ವತಃ ಡಿ.ಕೆ.ಶಿವಕುಮಾರ್ ಅವರು ಕೂಡಾ ಅಲ್ಲಗಳೆಯದ ಸತ್ಯ. ಅಷ್ಟೊಂದು ಜನಪ್ರಿಯತೆ, ಮಾಸ್ ಅಪೀಲ್ ಇರುವ ಅವರನ್ನು ಸಿದ್ದರಾಮೋತ್ಸವದ ಮಾದರಿಯಲ್ಲೇ ಮತ್ತೊಮ್ಮೆ ವಿಜೃಂಭಿಸಲು ಮಹಾ ಪ್ಲ್ಯಾನ್ ಶುರುವಾಗಿದೆ. ಅದುವೇ ಸಿದ್ದರಾಮಯ್ಯ ಬಯೋಪಿಕ್! (Siddaramaiah biopic)
ಹೌದು, ಸಿದ್ದರಾಮೋತ್ಸವದ ಬಳಿಕ ಮತ್ತೊಂದು ಬಿಗ್ ಇವೆಂಟ್ ಮಾಡಲು ಸಿದ್ದರಾಮಯ್ಯ ಟೀಮ್ ರೆಡಿಯಾಗಿದೆ. ಸಿದ್ದರಾಮಯ್ಯ ಅವರ ಲೈಫ್ ಜರ್ನಿಯನ್ನು ಸಿನಿಮಾವಾಗಿಸಿ ಬಿಡುಗಡೆ ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಭಾರಿ ಲಾಭವಾಗಲಿದೆ ಎನ್ನುವುದು ಟೀಮ್ ಲೆಕ್ಕಾಚಾರ. ಸಿದ್ದರಾಮಯ್ಯ ಅವರ ಬದುಕಿನ ಘಟನಾವಳಿಗಳು ತುಂಬ ಕುತೂಹಲಕಾರಿಯಾಗಿರುವುದು, ರೋಚಕವಾಗಿರುವುದು ಇದಕ್ಕೆ ಮೂಲ ಕಾರಣ. ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಜನಿಸಿದ ಅವರು ವಕೀಲರಾಗಿದ್ದು, ಆಗಲೇ ಹೋರಾಟ ಮಾಡಿದ್ದು, ಜನತಾದಳ ನಾಯಕನಾಗಿ ಮೆರೆದದ್ದು, ಹಣಕಾಸು ಮಂತ್ರಿಯಾಗಿದ್ದು, ಉಪಮುಖ್ಯಮಂತ್ರಿಯಾಗಿದ್ದು, ಚರಿತ್ರೆಯಲ್ಲೇ ಅತಿ ಗರಿಷ್ಠ ಬಜೆಟ್ ಮಂಡನೆ ಮಾಡಿದ್ದು, ಮುಖ್ಯಮಂತ್ರಿಯಾಗಿ ಐದು ವರ್ಷದ ಕಂಪ್ಲೀಟ್ ಮಾಡಿದ ದಾಖಲೆ.. ಇದೆಲ್ಲ ಸಿದ್ದರಾಮಯ್ಯ ಬದುಕಿನ ವಿಶೇಷತೆಗಳು. ಅದಕ್ಕಿಂತಲೂ ಹೆಚ್ಚಾಗಿ ಅವರ ಮಾತು, ಗ್ರಾಮೀಣ ಸೊಗಡು, ಯಾರನ್ನೂ ಸೆಳೆಯಬಲ್ಲ ಮಾತಿನ ವರಸೆ, ವಾದಗಳಲ್ಲಿ ಗೆಲ್ಲುವ ರೀತಿ, ಮಾತಿನ ಶೈಲಿ ಎಲ್ಲವೂ ಜನರಿಗೆ ಹುಚ್ಚು ಹಿಡಿಸಿದೆ.
೨೦ ಕೋಟಿ ರೂಪಾಯಿ ಬಜೆಟ್
ಈ ರೀತಿಯ ಕಲರ್‌ಫುಲ್ ಬದುಕು ಮತ್ತು ಚರಿಷ್ಮಾ ಹೊಂದಿರುವ ಸಿದ್ದರಾಮಯ್ಯ ಅವರನ್ನು ಬೃಹತ್ ತೆರೆಯಲ್ಲಿ ಹೀರೋ ಆಗಿ ಪ್ರೊಜೆಕ್ಟ್ ಮಾಡುವುದು ಸಿದ್ದರಾಮಯ್ಯ ಅಭಿಮಾನಿ ರಾಜಕಾರಣಿಗಳ ಪ್ಲ್ಯಾನ್. ಸರಿಸುಮಾರು 20 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡುವ ಪ್ಲ್ಯಾನ್ ಹೊಂದಿದೆ ಸಿದ್ದರಾಮಯ್ಯ ಟೀಮ್. ಈ ಬಗ್ಗೆ ಸಿದ್ದರಾಮಯ್ಯ ಅವರ ಜತೆ ಎರಡು ಬಾರಿ ಚರ್ಚೆಯೂ ನಡೆದಿದೆ.
ಗಡ್ಡ ಬಿಟ್ಟಿರೋ ಗೆಟಪ್‌ನಲ್ಲಿ ತೋರಿಸಬೇಕು!
ಡಿಸಿಎಂ ಆಗಿದ್ದಾಗ ಸಿದ್ದರಾಮಯ್ಯ ಗಡ್ಡ ಬಿಡುತ್ತಿದ್ದರು. ಅದು ತುಂಬ ಫೇಮಸ್ ಆಗಿತ್ತು. ಸಿನಿಮಾದಲ್ಲಿ ಇದೇ ಗಡ್ಡಧಾರಿ ಸಿದ್ದರಾಮಯ್ಯ ಅವರನ್ನೇ ಪ್ರೊಜೆಕ್ಟ್ ಮಾಡಲು ಯೋಜಿಸಲಾಗುತ್ತಿದೆ. ಈ ಪಾತ್ರವನ್ನು ಮಾಡಲು ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ಸೇತುಪತಿಯನ್ನು ಅಪ್ರೋಚ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದೆಲ್ಲ ಬೇಕಾ ಎಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ನಿವಾಸದಲ್ಲಿ ಕಳೆದ ಗುರುವಾರ ಸಿನಿಮಾದ ಬಗ್ಗೆ ಮಾತುಕತೆ ನಡೆದಿದೆ. ಜನವರಿಯಲ್ಲಿ ಸಿನಿಮಾ ಮುಹೂರ್ತಕ್ಕೆ ದಿನ ನಿಗದಿ ಮಾಡುವುದಾಗಿ ಟೀಮ್ ಹೇಳಿದೆ. ಆದರೆ, ಚುನಾವಣಾ ಸಮಯದಲ್ಲಿ ಇವೆಲ್ಲ ಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. 20 ಕೋಟಿ ವ್ಯರ್ಥ ಮಾಡುವುದು ಯಾಕೆ? ಸಿನಿಮಾ ಬೇಡ ಎಂದು ಹೇಳಿದ್ದಾರಂತೆ.
ಆದರೆ, ಬೆಂಬಲಿಗರು ಮಾತ್ರ ʻʻನಿಮ್ಮ ಲೈಫ್ ಜರ್ನಿಯನ್ನು ಸಿನಿಮಾ ಮಾಡುವುದರಿಂದ ನಮಗೆ ಪ್ಲಸ್ ಆಗುತ್ತದೆ. ಪಕ್ಷಕ್ಕೆ ಬೂಸ್ಟ್ ಸಿಗುತ್ತದೆ. ಇಡೀ ರಾಜ್ಯಾದ್ಯಂತ ನಿಮಗೆ ಅಭಿಮಾನಿಗಳು ಇದ್ದಾರೆ, ಒಪ್ಪಿಕೊಳ್ಳಿʼʼ ಎಂದು ಮನವಿ ಮಾಡಿದ್ದಾರಂತೆ. ʻʻಸರಿ ಯೋಚನೆ ಮಾಡಿ ಹೇಳ್ತೀನಿʼʼ ಎಂದು ಸಿದ್ದರಾಮಯ್ಯ ಹೇಳಿದ್ದಾರಂತೆ. ಇನ್ನು ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಬಂದು ಸಿದ್ದರಾಮಯ್ಯ ಅವರಿಗೆ ತೋರಿಸಲು ಟೀಮ್ ರೆಡಿಯಾಗುತ್ತಿದೆ.
ಸಿನಿಮಾದ ಹಿಂದಿರುವುದು ಶಿವರಾಜ್ ತಂಗಡಗಿ!
ಸಿದ್ದರಾಮಯ್ಯ ಅವರ ಸಿನಿಮಾ ಮಾಡಬೇಕು ಎನ್ನುವ ಪ್ರಾಜೆಕ್ಟ್ ಇಟ್ಟುಕೊಂಡು ಮುಂಚೂಣಿಯಲ್ಲಿ ನಿಂತವರು ಮಾಜಿ ಸಚಿವ, ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಶಿವರಾಜ್ ತಂಗಡಗಿ.
ʻʻಸಿದ್ದರಾಮಯ್ಯ ಬಗ್ಗೆ ಸಿನಿಮಾ ಮಾಡಬೇಕು ಅಂತ ನಮ್ಮ ಕಡೆ ಜನರ ಒತ್ತಡವಿದೆ. ಸಿದ್ದರಾಮಯ್ಯ ಸಾಹೇಬ್ರನ್ನ ಎರಡು ಬಾರಿ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಮುಂದಿನ ವಾರ ಮತ್ತೆ ಬರಲು ಹೇಳಿದ್ದಾರೆʼʼ ಎಂದು ಶಿವರಾಜ್ ತಂಗಡಗಿ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದರು.
ʻʻಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಅವರ ಸಿನಿಮಾ ಮಾಡಲು ಸಿದ್ದತೆ ನಡೆದಿದೆ. ಚುನಾವಣೆ ಒಳಗೆ ಸಿನಿಮಾ ಬಿಡುಗಡೆ ಆಗಬೇಕು ಅನ್ನೋದು ನಮ್ಮ ಇಚ್ಛೆ. ಹೀಗಾಗಿ ನಾವು ಸಾಹೇಬ್ರನ್ನ ಒಪ್ಪಿಸಲು ಮುಂದಾಗಿದ್ದೇವೆ. ಒಪ್ಪುತ್ತಾರೆ ಅನ್ನೋ ನಂಬಿಕೆ ಇದೆʼʼ ಎಂದಿರುವ ಶಿವರಾಜ್ ತಂಗಡಗಿ, ʻʻವಿಜಯ್ ಸೇತುಪತಿ ಅವರನ್ನು ಹೀರೊ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆʼʼ ಎಂದರು.
ಪ್ಯಾನ್ ಇಂಡಿಯಾ ಸಿನಿಮಾ
ʻʻನನ್ನ ಸ್ನೇಹಿತರು ಸಿನಿಮಾಕ್ಕೆ ಹಣ ಹಾಕಲು ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ಹುಟ್ಟು ಬೆಳವಣಿಗೆ ಮತ್ತು ಐದು ವರ್ಷಗಳ ಆಡಳಿತವನ್ನ ಸಿನಿಮಾದಲ್ಲಿ ತೋರಿಸುತ್ತೇವೆ. ಪ್ಯಾನ್ ಇಂಡಿಯಾ ಸಿನಿಮಾ ರೀತಿಯಲ್ಲಿ ಮಾಡಲು ನಿರ್ಧಾರ ಮಾಡಿದ್ದೇವೆ. ಅವರು ಒಪ್ಪಿದ ತಕ್ಷಣ ಸಿನಿಮಾ ಶೂಟಿಂಗ್ ಶುರುವಾಗುತ್ತೆʼʼ ಅಂತಾರೆ ಶಿವರಾಜ್ ತಂಗಡಗಿ.