ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ನಲ್ಲಿ ಒಂದೆಡೆ ಸಿದ್ದರಾಮಯ್ಯ-ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಹಗ್ಗ ಜಗ್ಗುತ್ತಿದ್ದಾರೆ. ಒಟ್ಟಿಗೇ ಇರುತ್ತಾರೆ ಆದರೆ ವೈಯಕ್ತಿಕ ಬಲಪ್ರದರ್ಶನ ಮಾಡುತ್ತಲೇ ಇರುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಗೆ ತಾನೇ ಏರಬೇಕು ಎಂಬುದು ಇವರಿಬ್ಬರಿಗೂ ಇರುವ ಮಹಾನ್ ಅಭಿಲಾಷೆ. ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಾಡಳಿತ ನಡೆಸಿದವರು. ಇತ್ತ ಡಿ.ಕೆ.ಶಿವಕುಮಾರ್ ಆ ಹುದ್ದೆಗೆ ಏರಲೇಬೇಕು ಎಂದು ಕನಸಿಟ್ಟುಕೊಂಡವರು. ಒಟ್ಟಿನಲ್ಲಿ ಇವರು ಬಹಿರಂಗವಾಗಿ ದೊಡ್ಡಮಟ್ಟದಲ್ಲಿ ಕಿತ್ತಾಡದಿದ್ದರೂ ಆಂತರಿಕವಾಗಿ ಜಟಾಪಟಿ ನಡೆದೆ ಇದೆ. ಇದು ರಾಜ್ಯದ ಜನರಿಗೂ ಗೊತ್ತು. ಪಕ್ಷದೊಳಗಿನ ನಾಯಕರಿಗೂ ತಿಳಿದಿರುವ ವಿಷಯ.
ಈಗ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ್ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗಿ ಒಂದು ಪೂಜೆ ಮಾಡಿಸಿದ್ದಾರೆ. ಅದನ್ನು ಮಾಡಿಸಲು ಕಾರಣ ಇದೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರಂತೆ. ಈ ಇಬ್ಬರೂ ನಾಯಕರಿಗೆ ಸದ್ಬುದ್ದಿ ಕೊಡು, ಇವರಿಬ್ಬರೂ ಕಿತ್ತಾಡದಿರಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾಗಿ ಲಕ್ಷ್ಮೀನಾರಾಯಣ್ ಹೇಳಿಕೊಂಡಿದ್ದಾರೆ. ಪೂಜೆ ಬಳಿಕ ಹನಗುಂದ ತಾಲೂಕಿನ ಸುಳಿಬಾವಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ, ಅಧಿಕಾರಕ್ಕಾಗಿ ಕಿತ್ತಾಡುವುದನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಿಟ್ಟುಬಿಡಬೇಕು. ಪಕ್ಷ ಸಂಘಟನೆಗೆ, ಎರಡನೇ ಹಂತದ ಕಾರ್ಯಕರ್ತರನ್ನು ಬೆಳೆಸುವ ಕಡೆಗೆ ಗಮನಹರಿಸಬೇಕು. ಇದೇ ಕಾರಣಕ್ಕೆ ನಾನು ನನ್ನ ಪತ್ನಿಯೊಂದಿಗೆ ಹೋಗಿ ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ.
2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೂ ಮೊದಲು ಪಕ್ಷ ಸಂಘಟನೆಯಾಗಲಿ. ಬಳಿಕ ಚುನಾವಣೆಯಲ್ಲಿ ಗೆದ್ದ ಬಳಿಕ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದ ವರಿಷ್ಠರು, ಗೆದ್ದ ಶಾಸಕರ ಬಹುಮತ ಯಾರಿಗೆ ಇರುತ್ತದೆಯೋ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಹೈಕಮಾಂಡ್ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯತಮೆಯನ್ನು ಬಿಡು ಎಂದರೆ, ಇಲ್ಲ ರಾಜಕೀಯವನ್ನೇ ಬಿಡುತ್ತೇನೆಂದ ಕಾಂಗ್ರೆಸ್ ಮಾಜಿ ಸಚಿವ