Site icon Vistara News

Congress Guarantee : ಉಚಿತ ಭಾಗ್ಯಕ್ಕೆ ಕಂಡಿಷನ್‌, ವಿದ್ಯುತ್‌ ದರ ಏರಿಕೆ ವಿರುದ್ಧ ಶಾಮನೂರು ಗರಂ

Shamanur Shivashankarappa

#image_title

ದಾವಣಗೆರೆ: ಕಾಂಗ್ರೆಸ್‌ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಉಚಿತ ಭಾಗ್ಯಗಳನ್ನು (Congress Guarantee) ನೀಡಲು ಕಂಡಿಷನ್‌ಗಳನ್ನು (Conditions) ಹಾಕುವುದು ಮತ್ತು ವಿದ್ಯುತ್‌ ದರ ಏರಿಕೆ ಮಾಡಿದ್ದರ ವಿರುದ್ಧ ಹಿರಿಯ ಕೈ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಅತಿ ಹಿರಿಯ ಶಾಸಕರಾಗಿರುವ 92 ವರ್ಷದ ಶಾಮನೂರು ಅವರು ಪ್ರಮುಖವಾಗಿ ವಿದ್ಯುತ್‌ ದರ ಏರಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು. ಕಾಂಗ್ರೆಸ್ ಆಡಳಿತ ನೀತಿ ಬಗ್ಗೆ ಸಿಟ್ಟು ಪ್ರದರ್ಶಿಸಿದ ಅವರು, ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು. ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ʻʻವಿದ್ಯುತ್ ದರ ಏರಿಕೆಯಿಂದ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾದರೆ ಇಂಡಸ್ಟ್ರಿಗಳು ಉಳಿಯುವುದೇ ಕಷ್ಟ ಆಗಿದೆ. ಮೊದಲು ಮಾತು ಕೊಟ್ಟಂತೆ ನಡೆದುಕೊಳ್ಳಿ. ವಿದ್ಯುತ್ ದರ ಏರಿಕೆ ಬಗ್ಗೆ ಆಮೇಲೆ ತೀರ್ಮಾನ ತೆಗೆದುಕೊಳ್ಳಿʼʼ ಎಂದು ಸರ್ಕಾರಕ್ಕೆ ಅವರು ಚಾಟಿ ಬೀಸಿದರು.

ʻʻವಿದ್ಯುತ್ ದರ ಏರಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ತಪ್ಪಿಸಿಕೊಳ್ಳುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಾವು ಮಾಡಿಲ್ಲ, ನಾವು ಮಾಡಿಲ್ಲ ಎನ್ನುತ್ತಿವೆ. ಕೆಆರ್ ಇ ಸಿ ದರ ಏರಿಕೆ ಬಗ್ಗೆ ಬಿಜೆಪಿ ಕಾಲದಲ್ಲೇ ಆಗಿತ್ತು ಕಾಂಗ್ರೆಸ್ ನವರು ಸೈನ್ ಮಾಡಿದ್ದಾರೋ ಬಿಟ್ಟಾರೋ ಗೊತ್ತಿಲ್ಲ. ಏನೇ ಆದರೂ ಕಾಂಗ್ರೆಸ್‌ ಸರಕಾರ ಈ ಏರಿಕೆಯನ್ನು ಒಪ್ಪಬಾರದು. ಹಿಂದೆ ದರ ಹೇಗಿತ್ತೋ ಅದೇ ರೀತಿ ಮುಂದುವರಿಸಬೇಕುʼʼ ಎಂದು ಆಗ್ರಹಿಸಿದರು.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ಒದಗಿಸುವ ಶಕ್ತಿ ಯೋಜನೆಯಿಂದ ಜನರಿಗೆ ಲಾಭವಾಗಿದೆ ಎಂದು ಹೇಳಿದ ಶಾಮನೂರು ಶಿವಶಂಕರಪ್ಪ ಅವರು, ಇದರಿಂದ ಖಾಸಗಿ ಬಸ್ ಗಳಿಗೆ ನಷ್ಟ ಆದ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಕೇಳಿದರು. ರೈಲುಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಸಹ ಕಡಿಮೆ ಆಗಿದೆ ಎನ್ನುವುದನ್ನು ಅವರು ಒಪ್ಪಿಕೊಂಡರು.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್‌ ಸುರ್ಜೇವಾಲ ಅವರು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಮಾಡಿದ್ದಾರೆ ಎಂಬ ವಿಚಾರ ತನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಬೊಮ್ಮಾಯಿ ಜತೆ ಗೌಪ್ಯ ಸಭೆ

ಈ ನಡುವೆ ಮಂಗಳವಾರ ಸಂಜೆ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೌಪ್ಯ ಸಭೆ ನಡೆಸಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ ಬಾಗಿಲು ಹಾಕಿಕೊಂಡು ಸುಮಾರು ಅರ್ಧಗಂಟೆ ಕಾಲ ಅವರಿಬ್ಬರ ನಡುವೆ ಸುದೀರ್ಘ ಚರ್ಚೆ ನಡೆದಿದೆ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬ ಚರ್ಚೆ ಬೆನ್ನಲ್ಲೇ ಈ ಸೀಕ್ರೆಟ್‌ ಮೀಟಿಂಗ್‌ ನಡೆದಿರುವುದು ಭಾರಿ ಕುತೂಹಲ ಮೂಡಿಸಿದೆ.

ಈ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಶಾಮನೂರು ಶಿವಶಂಕರಪ್ಪ ಅವರು, ʻʻನಾವು ಮತ್ತು ಬೊಮ್ಮಾಯಿ ಬೀಗರು. ಚುನಾವಣೆ ಆದಾಗಿನಿಂದ ನಾವು ಭೇಟಿಯಾಗಿರಲಿಲ್ಲ. ನಾನೂ ಗೆದ್ದಿದ್ದೇನೆ, ಅವರೂ ಗೆದ್ದಿದ್ದಾರೆ. ಅದಕ್ಕೆ ಭೇಟಿಯಾದವು. ಅವರು ನನಗೆ ಹಾರ ಹಾಕಿದ್ರು, ನಾನು ಶಾಲು ಹೊದಿಸಿದೆ. ನಮ್ಮ ಸಂಬಂಧ ಹೀಗೆ ಮುಂದುವರಿಯಲಿ ಎಂದು ಹೇಳಿದೆʼʼ ಎಂದು ಹೇಳಿದ ಅವರು ಕೆಲವೊಂದು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದರು!

ಇದನ್ನೂ ಓದಿ: Congress Guarantee: ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರದ ಕೊಕ್ಕೆ!: ಗ್ಯಾರಂಟಿ ಫೇಲ್‌ ಮಾಡಲು ಷಡ್ಯಂತ್ರ ಎಂದ ಸಿಎಂ ಸಿದ್ದರಾಮಯ್ಯ

Exit mobile version