ಬೆಂಗಳೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಪ್ರಸ್ತಾಪವನ್ನು ಪ್ರಕಟಿಸಿದ್ದರ ವಿರುದ್ಧ ಬಿಜೆಪಿ, ಸಂಘ ಪರಿವಾರದ ನಾಯಕರ ಆಕ್ರೋಶ ಭುಗಿಲೆದ್ದಿದೆ. ಹಲವಾರು ನಾಯಕರು ಈ ಪ್ರಸ್ತಾವನೆಯನ್ನು ಖಂಡಿಸಿದ್ದರೆ ಹಲವು ನಾಯಕರು ತಾಕತ್ತಿದ್ದರೆ ಬಜರಂಗ ದಳವನ್ನು ನಿಷೇಧಿಸಿ ಎಂಬ ಸವಾಲು ಹಾಕಿದ್ದಾರೆ.
ಈ ನಡುವೆ, ಬಿಜೆಪಿ ನಾಯಕರು, ಸಂಘ ಪರಿವಾರದ ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣದಲ್ಲೂ ಕಾಂಗ್ರೆಸ್ ಪ್ರಸ್ತಾವನೆ ವಿರುದ್ಧ ಪ್ರತಿಭಟನೆ ದಾಖಲಿಸಿದ್ದಾರೆ. ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಅಕೌಂಟ್‌ನ ಡಿಸ್‌ಪ್ಲೇ ಪಿಕ್ಚರ್ (ಡಿಪಿ) ಮೂಲಕವೂ ಪ್ರತಿಭಟನೆ ದಾಖಲಿಸಿದ್ದಾರೆ. ʻನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು, ನಾನೊಬ್ಬ ಬಜರಂಗಿʼ ಎಂದು ಬರೆದುಕೊಂಡು ಒಂದೇ ರೀತಿಯ ಡಿಪಿಯನ್ನು ಬಳಸಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸಂಸದರಾದ ಡಿ.ವಿ. ಸದಾನಂದ ಗೌಡ, ರಾಜ್ಯದ ಸಚಿವರಾದ ಸಿ.ಎನ್. ಅಶ್ವತ್ಥನಾರಾಯಣ ಅವರು ತಮ್ಮ ಡಿಪಿಯಲ್ಲಿ ಹೊಸ ಚಿತ್ರ ಹಾಕಿಕೊಂಡಿದ್ದಾರೆ. ಈ ಮೂಲಕ ನಾವೂ ಬಜರಂಗಿ, ನಮ್ಮನ್ನೂ ತಾಕತ್ತಿದ್ದರೆ ಬಂಧಿಸಿ ಎಂದು ಸವಾಲು ಹಾಕಿದ್ದಾರೆ.
ಉಡುಪಿಯಲ್ಲಿ ಕಾಂಗ್ರೆಸ್, ಅದರ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿದ್ದಾರೆ.
ಬಜರಂಗದಳ ವಿಚಾರದಲ್ಲಿ ಪ್ರಣಾಳಿಕೆಯಲ್ಲಿ ಇರುವುದೇನು?
ಸಮಾಜದಲ್ಲಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲೀ, ಬಜರಂಗ ದಳ ಮತ್ತು ಪಿಎಫ್‌ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು, ಸಹಿಸುವುದಿಲ್ಲ. ಆದ ಕಾರಣ ಇಂಥ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Congress Manifesto : ಭುಗಿಲೆದ್ದ ಆಕ್ರೋಶದ ಹಿನ್ನೆಲೆ; ಬಜರಂಗ ದಳ ನಿಷೇಧ ಪ್ರಸ್ತಾಪ ಕೈಬಿಡಲು ಚಿಂತನೆ