Site icon Vistara News

Congress‌ Meeting | ಪಕ್ಷ ಕಟ್ಟುವ ಮೂಲ‌ ಕಾಂಗ್ರೆಸ್ಸಿಗರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ; ಕಾರ್ಯಾಧ್ಯಕ್ಷರ ಎದುರೇ ಕೈ ಕಾರ್ಯಕರ್ತರ ಕಿಡಿ

KPCC president Dhruvanarayan

ಹಾಸನ: ‌ಜಿಲ್ಲಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಹಾಸನ (Congress‌ Meeting) ಕೈ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಹಾಸನ ಕಾರ್ಯಕರ್ತರ ಆಕ್ಷೇಪದಂತೆ ಅಹವಾಲು ಆಲಿಸಲು ಶುಕ್ರವಾರ ಸಭೆ ಕರೆದಿದ್ದರು. ಈ ವೇಳೆ ಸಭೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಇ.ಎಚ್.ಲಕ್ಷ್ಮಣ್‌ ಅವರನ್ನು ಹಾಸನ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಾಯಕರ ವಿರುದ್ಧ ಕಾರ್ಯಕರ್ತರು ಹರಿಹಾಯ್ದರು. ಅಲ್ಪಸಂಖ್ಯಾತರ ಪರ ಮಾತನಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ಅಂತಹ ಬಿಜೆಪಿಯಲ್ಲಿದ್ದು ಬಂದವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೀರಿ? ಇದರಲ್ಲೂ ಡೀಲ್ ಮಾಡಿಕೊಂಡಿದ್ದೀರಾ ಎಂದು ಸಭೆಯಲ್ಲಿ ಪ್ರಶ್ನೆ ಮಾಡಿದರು.

ಹಾಸನ ಜಿಲ್ಲೆಗೆ ಇಪ್ಪತ್ತೈದು ವರ್ಷದಲ್ಲಿ ಒಬ್ಬರೇ ಒಬ್ಬ ದಕ್ಷ ಜಿಲ್ಲಾಧ್ಯಕ್ಷನನ್ನು ನೇಮಕ ಮಾಡಲು ಆಗಿಲ್ಲ ಎಂದು ಧ್ರುವನಾರಾಯಣ್ ಸಮ್ಮುಖದಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಕೆಲವರ ವರ್ತನೆ ಹೇಗಿದೆ ಎಂದರೆ ಚುನಾವಣೆಯಲ್ಲಿ ಗೆದ್ದಾಯಿತು, ಸರ್ಕಾರವನ್ನು ರಚನೆ ಮಾಡಲು ರೆಡಿ ಇರುವುದಾಗಿ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಗೆ ಸರಿಯಾದ ಒಬ್ಬ ನಾಯಕನನ್ನು ನೇಮಕ ಮಾಡಿ ಎಂದು ಒತ್ತಾಯ ಮಾಡಿದ್ದವು. ಆದರೆ ಜಿಲ್ಲೆಯ ಎಲ್ಲ ಮುಖಂಡರು ಸೇರಿ ಎ.ಮಂಜು ಅವರನ್ನು ಸಚಿವರಾನ್ನಾಗಿ ಮಾಡುವಂತೆ ದೆಹಲಿಗೆ ಹೋದರು. ಅವರು ಮಂತ್ರಿಯಾಗಿ ದೇವೇಗೌಡರ ಕುಟುಂಬವನ್ನು ಜಿಲ್ಲೆಯಲ್ಲಿ ಹೇಳಹೆಸರಿಲ್ಲದಂತೆ ಮಾಡಿ ಜೆಡಿಎಸ್‌ ಪಕ್ಷ ನಿರ್ಮೂಲನೆ ಮಾಡುತ್ತಾರೆಂದು ಭಾವಿಸಿದ್ದೆವು. ಆದರೆ, ಹಾಗೆ ಆಗಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಜು ಅವರು ಮಂತ್ರಿಯಾಗಿ ಬಂದ ಬಳಿಕ ಜಾವಗಲ್ ಮಂಜುನಾಥ್ ಅವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರು. ಅವರ ಹತ್ತಿರ ಜೇಬಿನಲ್ಲಿ ಒಂದು ಕಾಸಿಲ್ಲದೆ ಓಡಾಡಿಕೊಂಡು ಆರು ವರ್ಷ ಕಳೆದರು. ಈ ತನಕ ಒಂದು ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಗಲಿಲ್ಲ, ಪಕ್ಷದ ಎಂಎಲ್‌ಎ ಅನ್ನು ನಾವು ನೋಡಲಿಲ್ಲ. ಎಲೆಕ್ಷನ್‌ ಸಮಯದಲ್ಲಿ ನೀವೂ ಜೆಡಿಎಸ್‌ನವರ ಜತೆ ಒಪ್ಪಂದ ಮಾಡಿಕೊಳ್ಳೋದು ಸಾಕು. ಪಕ್ಷ ಕಟ್ಟುವ ಮೂಲ‌ ಕಾಂಗ್ರೆಸ್ಸಿಗರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ, ಇಲ್ಲವಾದರೆ ಹಾಸನದಿಂದ ಒಬ್ಬರೂ ಎಂಎಲ್‌ಎ ಆಗುವುದಿಲ್ಲ ಎಂದು ಸಭೆಯಲ್ಲಿ ಕಿಡಿಕಾರಿದರು. ಇತ್ತ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಉತ್ತರಿಸಲಾಗದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮೊಬೈಲ್ ನೋಡುತ್ತಾ ಕುಳಿತುಕೊಂಡರು.

ಕೈ ಮಿಲಾಯಿಸಿದ ಕೈ ಕಾರ್ಯಕರ್ತರು
ಸಭೆಯಲ್ಲಿ ಬೇಲೂರು ಟಿಕೆಟ್‌ ಆಕಾಂಕ್ಷಿ ಮಾಜಿ ಸಚಿವ ಬಿ.ಶಿವರಾಮ್ ಪರವಾಗಿ ಮಾತನಾಡಲು ಮುಂದಾದವರ ವಿರುದ್ಧ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಶಿವರಾಮ್ ಪರವಾಗಿ ಮಾತನಾಡುತ್ತಿದ್ದವರ ಮೇಲೆ ಮುಗಿಬಿದ್ದ ಮುಖಂಡರು, ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಬಳಿಕ ವಾಗ್ವಾದ ನಡೆಸುತ್ತಿದ್ದವರನ್ನು ಸಭೆಯಿಂದ‌ ಹೊರ ಕಳುಹಿಸಿ ಪರಿಸ್ಥಿತಿ ತಿಳಿಸಲು ಕೆಲ ಮುಖಂಡರು ಮುಂದಾದರು.

ಇದನ್ನೂ ಓದಿ | ಶರತ್‌ ಬಚ್ಚೇಗೌಡಗೆ ಕಾಂಗ್ರೆಸ್‌ ಟಿಕೆಟ್‌ ಬೇಡ: ಮೂಲ ಕಾಂಗ್ರೆಸಿಗರ ಸಭೆಯಲ್ಲಿ ಒತ್ತಾಯ, ಜಟಾಪಟಿ

Exit mobile version