Site icon Vistara News

Ram Mandir: ಕಾಂಗ್ರೆಸ್ ಮನಸ್ಥಿತಿಯೇ ಕೋಮು ಗಲಭೆ ಎಬ್ಬಿಸೋದು: ಶೋಭಾ ಕರಂದ್ಲಾಜೆ ಕಿಡಿ

Shobha karandlaje

ಚಿಕ್ಕಮಗಳೂರು: ದೇಶ ಶಾಂತವಾಗಿದೆ, ಪ್ರಧಾನಿ ಮೋದಿ ಆಡಳಿತದಲ್ಲಿ ವಿಘಟನೆ, ಕೋಮು ದಳ್ಳುರಿ ನಡೆದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ದೇಶದ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಮೋದಿ ಬಂದ ಮೇಲೆ ಎಲ್ಲಾ ಭಯೋತ್ಪಾದಕ ಮನಸ್ಥಿತಿಯ ಜನರಿಗೆ ಭಯ ಬಂದಿದೆ. ಕಾಂಗ್ರೆಸ್ ಮನಸ್ಥಿತಿಯೇ ಕೋಮು ಗಲಭೆ ಎಬ್ಬಿಸೋದು ಎಂದು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಆರೋಪಿಸಿದರು.

ರಾಜ್ಯದಲ್ಲಿ ಗೋಧ್ರಾ ಹತ್ಯಾಕಾಂಡ ಮಾದರಿ ದಾಳಿ ನಡೆಯಲಿದೆ ಎಂಬ ಕಾಂಗ್ರೆಸ್‌ ನಾಯಕ ಬಿ.ಕೆ.‌ ಹರಿಪ್ರಸಾದ್ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಉದ್ಘಾಟನೆ ವೇಳೆ ಮತ್ತೆ ಕೋಮು ದಳ್ಳುರಿಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಅದರ ಚಿಕ್ಕ ಝಲಕ್ ಅನ್ನು ಹರಿಪ್ರಸಾದ್ ಅವರು ಹೇಳಿರಬಹುದು. ದೇಶದ ಜನರಿಗೆ ಹಿಂಸೆ ಬೇಡ, ಜನ ಶಾಂತಿ ಬಯಸುತ್ತಿದ್ದಾರೆ. ಆದರೆ, ಬಿ.ಕೆ. ಹರಿಪ್ರಸಾದ್‌ ಮಾತಿಗೆ ಯಾರೂ ಕಿವಿಗೊಡಬೇಡಿ, ಎಲ್ಲರೂ ಶಾಂತಿ ಕಾಪಾಡಿ ಎಂದು ಮನವಿ ಮಾಡಿದರು.

ಮಂದಿರ ನಿರ್ಮಾಣದ ಬಳಿಕ ರಾಮನಿಗೊಂದು ಅಸ್ಮಿತೆ ಬಂದಿದೆ. ನಮ್ಮ ದೇಶದಲ್ಲಿ ನಮ್ಮ ರಾಮನಿಗೆ ಮಂದಿರ ಆಗಿದೆ ಅನ್ನಿಸಿದೆ. ರಾಮಮಂದಿರಕ್ಕಾಗಿ ಲಕ್ಷಾಂತರ ಜನ ಪ್ರಾಣ ತ್ಯಾಗ ಮಾಡಿದ್ದರು. ಈಗ ಶತಮಾನದ ಕನಸು ನನಸಾಗುತ್ತಿದೆ. ಕಳೆದ 500 ವರ್ಷಗಳಿಂದ ರಾಮಮಂದಿರಕ್ಕಾಗಿ ಹೋರಾಟ ನಡೆಯುತ್ತಿದೆ. ಕಳಂಕಿತ ಹಾಗೂ ಅಪಮಾನದ ಸಂಕೇತದ ಬಾಬರಿ ಮಸೀದಿಯನ್ನು ಜನರೇ ಒದ್ದು ಉರುಳಿಸಿದ್ದರು. ಕೋರ್ಟ್‌ನಲ್ಲಿ ವಿಪಕ್ಷಗಳು ರಾಮನ ವಿರುದ್ಧ ವಾದ ಮಾಡಿದ್ದರು. ಆದರೆ, ಸೂಕ್ತ ದಾಖಲೆಗಳ ಮೂಲಕ ರಾಮಮಂದಿರ ಹಿಂದುಗಳಿಗೆ ಸಿಗುವಂತಾಯಿತು. ಇದೇ ಜ. 22ರಂದು ನಮ್ಮ ರಾಮ ಅಯೋಧ್ಯೆಯಲ್ಲಿ ವಿಜೃಂಭಿಸಲಿದ್ದಾನೆ ಎಂದು ತಿಳಿಸಿದರು.

ಇದನ್ನೂ ಓದಿ | Ram Janmabhoomi: ಮನೆ ಮನೆಗೆ ಮಂತ್ರಾಕ್ಷತೆ ನೀಡಿದ ಬಿ.ವೈ. ವಿಜಯೇಂದ್ರ; ಜ. 22ರಂದು 5 ಪವಿತ್ರ ದೀಪ ಬೆಳಗಲು ಕರೆ

ಎಲ್ಲರ ಮನೆಯ ಮುಂದೆ ದೀಪ ಬೆಳಗಬೇಕು

ಎಲ್ಲಾ ರಾಮಭಕ್ತರನ್ನು ಅಯೋಧ್ಯೆಗೆ ಕರೆಯಲು ಸಾಧ್ಯವಿಲ್ಲ. ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದಿದೆ, ಅದು ನಮ್ಮ ಮನೆಯಲ್ಲಿ ಇಟ್ಟು ಪೂಜಿಸಬೇಕು. ಅವರವರ ಊರುಗಳಲ್ಲಿ ರಾಮನ ಪೂಜೆ ನಡೆಯಬೇಕು. ರಾಮ ಮಂದಿರ ಉದ್ಘಾಟನೆ ವೇಳೆ ಎಲ್ಲರ ಮನೆಯ ಮುಂದೆ ದೀಪ ಬೆಳಗಬೇಕು. ಮಂತ್ರಾಕ್ಷತೆಯನ್ನು ಸಿಹಿ ಮಾಡಿ ಊಟ ಮಾಡಬೇಕು. ರಾಮಮಂದಿರಕ್ಕಾಗಿ ಇಟ್ಟಿಗೆ ಒತ್ತವರು, ಒದೆ ತಿಂದವರಿಗೆ ಇಂದು ತುಂಬಾ ಖುಷಿಯಾಗಿದೆ ಎಂದು ಹೇಳಿದರು.

ಪಿಎಫ್‌ಐ, ದೇಶದ್ರೋಹಿ ಭಯೋತ್ಪಾದಕ ಸಂಘಟನೆಗಳ ಕೇಸ್‌ಗಳನ್ನು ಕ್ಯಾಬಿನೆಟ್‌ಗೆ ತಂದು ವಾಪಸ್ ಪಡೆಯುವುದು, ದೇಶಭಕ್ತರು, ರಾಮ ಮಂದಿರ ಹೋರಾಟಗಾರರ ಕೇಸ್‌ಗಳನ್ನು ರೀ ಓಪನ್ ಮಾಡುವುದು, ರಾಜ್ಯದಲ್ಲಿ ವಿಧ್ವಂಸ ಕೃತ್ಯಕ್ಕೆ ಪ್ರಯತ್ನ ಮಾಡುತ್ತಿರುವವರ ರಕ್ಷಣೆ ಮಾಡುವುದು ಕಾಂಗ್ರೆಸ್ ಸರ್ಕಾರದ ನೀತಿಯಾಗಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ | Ram Janmabhoomi: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ; ಹೃದಯದಲ್ಲೇ ದೇವರಿದ್ದಾನೆಂದ ಡಿಕೆಶಿ

ಬಳ್ಳಾರಿಯಲ್ಲಿ ಆರ್‌ಡಿಎಕ್ಸ್‌ ಬಾಂಬ್‌ಗಳು ಸಿಕ್ಕಿದವು, ಬೆಂಗಳೂರು, ಮಂಗಳೂರು, ಪುತ್ತೂರಲ್ಲೂ ಹಿಂದು ಕಾರ್ಯಕರ್ತರ ಹತ್ಯೆಯಾಯ್ತು. ಇಂತಹ ಕೇಸ್‌ಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಆದರೆ ಭಯೋತ್ಪಾದಕರು, ದೇಶದ್ರೋಹಿಗಳನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಸರ್ಕಾರ ನಿರತವಾಗಿದೆ. 2013 ಮತ್ತು 2017 ರಲ್ಲೂ ಸಿದ್ದರಾಮಯ್ಯನವರ ಸರ್ಕಾರ ಇದನ್ನೇ ಮಾಡಿದ್ದು. ಪೆಟ್ರೋಲ್ ಬಾಂಬ್ ಕೇಸ್ ಮುಚ್ಚಿ ಹಾಕಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ. ಇದು ಕಾಂಗ್ರೆಸ್ ಸಿದ್ದರಾಮಯ್ಯನವರ ಸ್ವಭಾವ, ಅದನ್ನೇ ಅವರು ತೋರಿಸಿದ್ದು. ಆದರೆ, ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತೆ, ದೇಶದಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ರಸ್ತೆಯಲ್ಲಿ ನಿಂತು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version