ವಿಜಯಪುರ: ವಿಜಯಪುರ ನಗರ ಕ್ಷೇತ್ರದಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ, ಯತ್ನಾಳ್ ಪಕ್ಷೇತರರಾಗಿ ಸ್ಪರ್ಧಿಸಲಿ. ನಾನು ಗೆದ್ದರೆ ರಾಜಕೀಯವಾಗಿ ಮುಂದುವರಿಯುತ್ತೇನೆ, ಅವರು ರಾಜಕೀಯ ಬಿಡಲಿ. ಒಂದು ವೇಳೆ ಅವರು ಗೆದ್ದರೆ ನಾನು ರಾಜಕೀಯ ಬಿಡುತ್ತೇನೆ. ಜನ ಯಾರನ್ನು ಮೆಚ್ಚುತ್ತಾರೆ ಅಂತ ಗೊತ್ತಾಗಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಪಂಥಾಹ್ವಾನ ನೀಡಿದ್ದಾರೆ.
ಬಹಳ ಮಂದಿ ಕಳ್ಳರು ಬಿಜೆಪಿಗೆ ಬರಲು ನಾಟಕ ನಡೆಸುತ್ತಿದ್ದಾರೆ ಎಂಬ ಶಾಸಕ ಯತ್ನಾಳ್ ಹೇಳಿಕೆಗೆ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು “”ಈವರೆಗೆ ನಾನು ಅವರ ರೀತಿ ಉಸಾಬರಿ ಮಾಡಿಲ್ಲ. ಅವರು ಏನೆಲ್ಲಾ ಮಾತನಾಡಿದರೂ ನಾನು ಪ್ರತಿಕ್ರಿಯೆ ಕೊಟ್ಟಿಲ್ಲ. ಪದೇಪದೇ ಆ ರೀತಿ ಮಾತನಾಡೋದು ಅವರ ಘನತೆಗೆ ತಕ್ಕುದಲ್ಲ, ನನ್ನ ಮೇಲೆ ಅಷ್ಟು ಆಕ್ರೋಶವಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಲಿʼʼ ಎಂದು ಸವಾಲು ಹಾಕಿದರು.
“”ನಾನು ಬಿಜೆಪಿಗೆ ಹೋಗಬೇಕು ಅಥವಾ ಕಾಂಗ್ರೆಸ್‌ನಲ್ಲಿರಬೇಕು ಅಂತ ಎಂದೂ ಸೀಮಿತ ರಾಜಕಾರಣ ಮಾಡಿಲ್ಲ. ನನಗೆ ಕಾಂಗ್ರೆಸ್‌ನಿಂದ ಲಾಭವಿರಬಹುದು, ನನ್ನಿಂದ ಕಾಂಗ್ರೆಸ್‌ಗೆ ಲಾಭವಿರಬಹುದು. ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ನನ್ನಿಂದ ಬಿಜೆಪಿಗೆ ಲಾಭ ಆಗಿತ್ತು, ಹಿಂದೆ ಯತ್ನಾಳ್ ಎಂಪಿ ಮಾಡುವಾಗ ನಾನೇ ಇದ್ದೆ. ಅದನ್ನು ಅವರು ಮರೆಯಬಾರದು. ನಾನು ಎಲ್ಲಿರಬೇಕು ಅಲ್ಲಿಯೇ ಇದ್ದೇನೆ. ಯತ್ನಾಳ್ ಕೇಳಿ ನಾನು ರಾಜಕಾರಣ ಮಾಡಬೇಕಿಲ್ಲʼʼ ಎಂದರು.
“”ನಾನು ಯಾವ ಪಕ್ಷದವರನ್ನೂ ಸಂಪರ್ಕಿಸಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಪ್ರೋಚ್ ಆಗಬಹುದು. ಯತ್ನಾಳ್ ಕಾಂಗ್ರೆಸ್, ದಳದಿಂದ ಗೆದ್ದು ಬರಲಿ ನೋಡೋಣ. ಬರೀ ಬಿಜೆಪಿ, ಹಿಂದುತ್ವದ ಹೆಸರಿನಲ್ಲಿ ಗೆದ್ದು ಬರಬೇಕಾ? ನಾನು ಅವರಂತೆ ಮಾತನಾಡಿಲ್ಲ, ಹಾಗೆ ಮಾತನಾಡುವಂತೆ ಮಾಡಬೇಡಿ. ಜನ ನನ್ನ ಯಾವ ಕ್ಷೇತ್ರದಲ್ಲಿ ಬಯಸುತ್ತಾರೆ ಅಲ್ಲಿ ಹೋಗಲು ಸಿದ್ಧವಾಗಿದ್ದೇನೆ. ಇದೇ ಕ್ಷೇತ್ರ ಅಂತ ಸೀಮಿತ ಇಲ್ಲ, ಕಾಂಗ್ರೆಸ್ ನಿಂದ ಬಬಲೇಶ್ವರ, ವಿಜಯಪುರ ನಗರ ಕೊಟ್ಟರೆ ಹೋಗುವುದಕ್ಕೆ ರೆಡಿ. ವಾಪಸ್ ಬಸವನಬಾಗೇವಾಡಿ ಕೊಟ್ಟರೂ ಸ್ಪರ್ಧಿಸುತ್ತೇನೆʼʼ ಎಂದರು.
“”ನಾನು ಪಕ್ಷಕ್ಕೆ ಅಂಟಿಕೊಂಡು ರಾಜಕಾರಣ ಮಾಡಿದವನಲ್ಲ, ಬಿಜೆಪಿ, ಜೆಡಿಎಸ್‌ನಿಂದ ಗೆದ್ದು ಬಂದಿದ್ದೆ. ಕಾಂಗ್ರೆಸ್‌ನಿಂದ ಗೆದ್ದಿದ್ದೇನೆ. ಯತ್ನಾಳ್ ಸ್ವ ಪ್ರೇರಣೆಯಿಂದ ಮಾತನಾಡುತ್ತಿಲ್ಲ, ಯಾರೋ ಅವರಿಗೆ ಪ್ರಚೋದನೆ ನೀಡುತ್ತಿದ್ದಾರೆ. ನಾನು ಬಂದು ಹೋಗುವುದರಿಂದ ಯತ್ನಾಳ್‌ಗೆ ಕಷ್ಟವಾಗುತ್ತದೆ ಎಂದರೆ ಬೇಕಾದರೆ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ. ಬಿಜೆಪಿ ಅಥವಾ ಕಾಂಗ್ರೆಸ್ ನಿಂದ ಸ್ಪರ್ಧೆಗೂ ಸಿದ್ಧ. ನಾನು ಗೆಲ್ಲುತ್ತೇನೋ ಅವರು ಗೆಲ್ಲುತ್ತಾರೋ ನೊಡೋಣ. ಜನ ತೀರ್ಮಾನ ಮಾಡಿದ ಮೇಲೆ ಮಾತನಾಡುವುದು ಒಳ್ಳೆಯದುʼʼ ಎಂದರು.
ಅವರಿಗೆ ಬ್ಲ್ಯಾಕ್‌ಮೇಲ್ ಮಾಡುವ ಚಟವಿದೆ: ಯತ್ನಾಳ್
ಶಿವಾನಂದ ಪಾಟೀಲ ಪಂಥಾಹ್ವಾನಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ “”ನಾನು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ. ಅವನಿಗೆ (ಶಿವಾನಂದ ಪಾಟೀಲ) ಬ್ಲ್ಯಾಕ್‌ಮೇಲ್ ಮಾಡುವ ಚಟ ಇದೆ. ಆ ಎಂ.ಬಿ. ಪಾಟೀಲ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ ಹಾಗೆ ನನಗೆ ಮಾಡುವುದಕ್ಕೆ ಆಗಲ್ಲʼʼ ಎಂದು ಕಿಡಿ ಕಾರಿದ್ದಾರೆ.
ಈ ಹಿಂದೆ ಯತ್ನಾಲ್ ಪರೋಕ್ಷವಾಗಿ ಮಾತನಾಡುತ್ತಾ “”ಬಿಜೆಪಿಗೆ ಬರಲು ಬರಲು ಬಹಳ ಮಂದಿ ನಾಟಕವಾಡುತ್ತಿದ್ದಾರೆ. ಇಂಥವರ ಅವಶ್ಯಕತೆ ಬಿಜೆಪಿಗೆ ಇಲ್ಲ. ಮೊದಲು ಕಾಂಗ್ರೆಸ್ ಲೂಟಿ ಮಾಡಿ, ಇದೀಗ ಲೂಟಿ ಮಾಡಲು ಬಿಜೆಪಿಗೆ ಬರುತ್ತಿದ್ದಾರೆʼʼ ಎಂದು ಹೆಸರು ಪ್ರಸ್ಥಾಪಿಸದೆ ಪರೋಕ್ಷವಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ | ಯತ್ನಾಳ್ ಬಿಜೆಪಿ ಹೈಕಮಾಂಡಾ? ಅವರು ಅಮಿತ್ ಷಾ ಲೆವೆಲ್ಲಿಗಿದ್ದಾರ? ಎಂದು ಪ್ರಶ್ನಿಸಿದ ಬಿ.ಸಿ. ಪಾಟೀಲ್