ಕಲಬುರಗಿ : ಹಿಜಾಬ್, ಅಜಾನ್ ಏನೇ ವಿಚಾರ ತಂದರೂ ಕರ್ನಾಟಕದ ಮತದಾರರು ಉತ್ತರ ಪ್ರದೇಶದ ಮತದಾರರ ರೀತಿ ಅಲ್ಲ ಎನ್ನುವುದು ಈ ಚುನಾವಣೆಯ ಮೂಲಕ ಸಾಬೀತಾಗಿದೆ. ಕರ್ನಾಟಕದಲ್ಲಿ ಪ್ರಬುದ್ಧ ಮತದಾರರಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಅವರು, ಶಿಕ್ಷಕ ಮತ್ತು ಪದವೀಧರರ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮತದಾರರು ಕೂಡ ಕಾಂಗ್ರೆಸ್ ಪರ ತೀರ್ಪು ನೀಡಿದ್ದಾರೆ. ಬಸವರಾಜ ಹೊರಟ್ಟಿ ಅವರ ಗೆಲುವು ವೈಯಕ್ತಿಕವಾದುದು. ಅದು ಬಿಜೆಪಿ ಗೆಲುವಲ್ಲ. ಬಿಜೆಪಿ ಗೆದ್ದಿದ್ದು, ಒಂದೇ ಸೀಟು, ಅದು ನಿರಾಣಿಯವರದ್ದು ಎಂದು ಹೇಳಿದ್ದಾರೆ.
ಇದನ್ನು ಓದಿ| ವಿಧಾನಪರಿಷತ್ತಿನ 4 ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಪ್ರಕಟ, 49 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಈ ಪರಿಷತ್ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಆಯೋಗ್ಯ ಸಮಿತಿ ಮೂಲಕ ಪಠ್ಯಪುಸ್ತಕದಲ್ಲಿ ಇತಿಹಾಸ ತಿರುಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ, ಇದಕ್ಕೆಲ್ಲಾ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರು ಮತ್ತು ಪದವೀಧರ ಮತದಾರರು ಉತ್ತರ ಕೊಟ್ಟಿದ್ದಾರೆ. ಇತಿಹಾಸ ತಿರುಚಿ ಆರ್ಎಸ್ಎಸ್ ಫ್ರೇಮ್ ವರ್ಕ್ನಲ್ಲಿ ಕೆಲಸ ಮಾಡುವ ಪ್ರಯತ್ನ ವರ್ಕೌಟ್ ಆಗಲಿಲ್ಲ. ಬುದ್ದ, ಬಸವ, ಅಂಬೇಡ್ಕರ್ ಸೇರಿದಂತೆ ಮಹನಿಯರಿಗೆ ಮಾಡಿರುವ ಅಪಮಾನ ಸಹಿಸುವುದಿಲ್ಲ ಎನ್ನುವ ಸಂದೇಶ ಪರಿಷತ್ ಚುನಾವಣೆಯಲ್ಲಿ ಹೊರಬಂದಿದೆ ಎಂದು ಹೇಳಿಕೆ ನೀಡಿದ್ದಾರೆ.