Site icon Vistara News

ಇತ್ತ ಜೆಡಿಎಸ್‌ ಜತೆಗೆ ನಂಟು; ಅತ್ತ ಜಮೀರ್‌ ಅಹ್ಮದ್‌ ಜತೆಗೂ ಮಾತು: ಕುತೂಹಲ ಕೆರಳಿಸಿದ KCR ನಡೆ

congress-mla-zameer-meeting-telangana-cm-kcr

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುವ ಅಥವಾ ಒಟ್ಟಾಗಿ ಚುನಾವಣೆ ಎದುರಿಸುವ ಕುರಿತು ಈಗಾಗಲೆ ಜೆಡಿಎಸ್‌ ಜತೆಗೆ ಮಾತುಕತೆ ನಡೆಸಿರುವ ತೆಲಂಗಾಣದ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಶಾಸಕ, ಸಿದ್ದರಾಮಯ್ಯ ಆಪ್ತ ಜಮೀರ್‌ ಅಹ್ಮದ್‌ ಖಾನ್‌ ಇತ್ತೀಚೆಗೆ ಕೆ. ಚಂದ್ರಶೇಖರ ರಾವ್‌ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಒಂದು ಕಾಲದ ಜೆಡಿಎಸ್‌ ಕಟ್ಟಾಳುವಾಗಿದ್ದು ಇದೀಗ ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯುವ ಜಮೀರ್‌ ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೆ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ.

ಈ ಕುರಿತು ಸ್ವತಃ ಜಮೀರ್‌ ಅಹ್ಮದ್‌ ಖಚಿತಪಡಿಸಿದ್ದಾರೆ. ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಜಮೀರ್‌ ಅಹ್ಮದ್‌, ಹೈದರಾಬಾದ್‌ಗೆ ಕೆಲಸಕ್ಕೆ ಅಂತ ಹೋಗಿದ್ದೆ. ಕೆಸಿಅರ್ ಅವರ ಪಕ್ಷದಲ್ಲಿ ನನ್ನ ಆತ್ಮೀಯ ಶಾಸಕರು ಇದ್ದಾರೆ. ರೋಹಿತ್ ರೆಡ್ಡಿಯವರು ನಮ್ಮ ಆತ್ಮೀಯರು.

2004 ರಲ್ಲಿ ನಾನು ಜೆಡಿಎಸ್‌ನಲ್ಲಿದ್ದಾಗ ಅವರು ದೊಡ್ಡ ಕಾರ್ಯಕ್ರಮ ಮಾಡಿದ್ದರು. ಆ ಸಂದರ್ಭದಲ್ಲಿ ಕೆಸಿಆರ್ ಅವರು ನನ್ನನ್ನು ತಿಂಡಿಗೆ ಕರೆಯಿಸಿ, ಏನಾದರೂ ‌ಮಾಡಿ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಬರುವಂತೆ ಮಾಡಿ ಎಂದು ಕೇಳಿದ್ದರು. ಹಾಗಾಗಿ ದೇವೇಗೌಡರನ್ನು ಹೆಲಿಕಾಪ್ಟರ್‌ ಮೂಲಕ ಕಳಿಸಿದ್ದೆ.

ನೀವು ಬಂದಿದ್ದರ ಕುರಿತು ಸಿಎಂಗೆ ತಿಳಿಸಿದ್ದೇನೆ ಎಂದು ನನ್ನ ಸ್ನೇಹಿತರು ಹೇಳಿದರು. ಹಿಂದಿನ ವಿಚಾರಗಳನ್ನು ಸಿಎಂ ನೆನಪು ಮಾಡಿಕೊಂಡರು ಎಂದು ಹೇಳಿದರು.

ಬಿಆರ್‌ಎಸ್‌ ಪಕ್ಷ ಬಲವರ್ಧನೆ ಮಾಡಲು ಆಹ್ವಾನ ಕೊಟ್ಟರೇ ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಿದ ಜಮೀರ್‌ ಅಹ್ಮದ್‌, ಆ ಬಗ್ಗೆ ಏನೂ ಚರ್ಚೆ ಆಗಿಲ್ಲ ಎಂದರು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರವಾಸ ಮಾಡುತ್ತಾ ಇದ್ದೇನೆ. ಬಾದಾಮಿ, ಜಮಖಂಡಿ, ಧಾರವಾಡ ,ಕೊಪ್ಪಳ ಹುಬ್ಬಳ್ಳಿಗೇ ಹೋಗಿದ್ದೆ. 19 ಕ್ಕೆ ಮುದ್ದೇಬಿಹಾಳ, ವಿಜಯಪುರಕ್ಕೆ ಹೋಗುತ್ತಾ ಇದ್ದೇನೆ ಎಂದರು.

ಈ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಕೆಸಿಆರ್‌, ದೇವೇಗೌಡರ ಮನೆಗೆ ತೆರಳಿ ಭೇಟಿ ಮಾಡಿದ್ದರು. ಟಿಆರ್‌ಎಸ್‌ ಪಕ್ಷವನ್ನು ಬಿಆರ್‌ಎಸ್‌ ಎಂದು ನಾಮಕರಣ ಮಾಡುವ ಕಾರ್ಯಕ್ರಮದಲ್ಲೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸಿದ್ದರು. ತೆಲುಗು ಪ್ರಭಾವವಿರುವ ಗಡಿಪ್ರದೇಶದಲ್ಲಿ ಜೆಡಿಎಸ್‌ ಜತೆಗೆ ಬಿಆರ್‌ಎಸ್‌ ಮೈತ್ರಿ ಮಾಡಿಕೊಳ್ಳಬಹುದು ಎಂಬ ಚರ್ಚೆ ನಡೆದಿದೆ. ಈ ನಡುವೆಯೇ ಕಾಂಗ್ರೆಸ್‌ ಶಾಸಕ ಜಮೀರ್‌ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ | Delhi Liquor Policy Scam | ದಿಲ್ಲಿ ಮದ್ಯ ನೀತಿ ಹಗರಣ, ತೆಲಂಗಾಣ ಸಿಎಂ ಕೆಸಿಆರ್ ಪುತ್ರಿಗೆ ಉರುಳು!

Exit mobile version