Site icon Vistara News

Karnataka politics : ಮೋದಿ ಬಾಯಲ್ಲಿ ಒಮ್ಮೆಯೂ ಬೊಮ್ಮಾಯಿ ಹೆಸರು ಬರಲಿಲ್ಲ; ಇಷ್ಟೊಂದು ನಿರ್ಲಕ್ಷ್ಯವೇ ಎಂದು ಕೇಳಿದ ಕಾಂಗ್ರೆಸ್‌

Modi and Bommai

#image_title

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ವಿಮಾನ ನಿಲ್ದಾಣ ಉದ್ಘಾಟನೆ ಮತ್ತು ಇತರ ಕಾಮಗಾರಿಗಳ ಚಾಲನೆ ಕಾರ್ಯಕ್ರಮವನ್ನು ಕಾಂಗ್ರೆಸ್‌ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಅದರಲ್ಲಿನ ಕೆಲವೊಂದು ತನಗೆ ಲಾಭವಾಗಬಲ್ಲ, ಸೂಕ್ಷ್ಮ ವಿಚಾರಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ಮುಖ್ಯವಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಒಮ್ಮೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನೇ ಹೇಳಿಲ್ಲ ಎನ್ನುವುದು. ಎರಡನೇ ಪ್ರಮುಖಾಂಶವೆಂದರೆ, ಅಂದು ಯಡಿಯೂರಪ್ಪ ಅವರ ಜತೆ ಮಾತನಾಡುವುದಕ್ಕೇ ನಿರಾಕರಿಸುತ್ತಿದ್ದ ಮೋದಿ ಅವರು ಇಂದು ಅವರನ್ನು ಭಾರಿ ದೊಡ್ಡ ಮನುಷ್ಯ ಎಂದು ಹೊಗಳುತ್ತಿದ್ದಾರೆ (Karnataka politics) ಎಂದು.

ಹೀಗೆ ಕಾಂಗ್ರೆಸ್‌ ಪಟ್ಟಿ ಮಾಡಿದ ಕೆಲವೊಂದು ವಿಚಾರಗಳು ಇಲ್ಲಿವೆ.

ಒಮ್ಮೆಯೂ ಬೊಮ್ಮಾಯಿ ಹೆಸರು ಹೇಳದ ಪ್ರಧಾನಿ ಮೋದಿ

ಹಿಂದೆ – ಯಡಿಯೂರಪ್ಪ
ಇಂದು – ಬೊಮ್ಮಾಯಿ
ಬಿಜೆಪಿ ಬಳಸಿ ಬಿಸಾಡುವ ಟಿಷ್ಯೂ ಪೇಪರ್‌ಗಳ ಹೆಸರುಗಳಿವು! ರಾಜ್ಯದ ಸಿಎಂ ಪಕ್ಕದಲ್ಲೇ ಇದ್ದರೂ ಒಂದು ಬಾರಿಯೂ ಪ್ರಧಾನಿ ಬಾಯಲ್ಲಿ ಬೊಮ್ಮಾಯಿ ಹೆಸರು ಬರಲಿಲ್ಲ. ಕರ್ನಾಟಕದ ಜನತೆ ಬೊಮ್ಮಾಯಿ ಆಡಳಿತದಿಂದ ಬೇಸತ್ತಿರುವ ಸಂಗತಿ ಮೋದಿಗೂ ತಿಳಿಯಿತೇ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯವೇ ಬಿಜೆಪಿಯವರೇ?

ಬೊಮ್ಮಾಯಿ ಎಂಬ ನಾಣ್ಯದ ಚಲಾವಣೆ ಮುಗಿದಿದೆ ಎಂದರ್ಥವೇ?

ʻʻಮೊನ್ನೆ ಅಮಿತ್ ಶಾ ಬೊಮ್ಮಾಯಿ ಮೇಲೆ ಭರವಸೆ ಇಡಿ ಎನ್ನಲಿಲ್ಲ. ಇಂದು ಶಿವಮೊಗ್ಗದಲ್ಲಿ ಪ್ರಧಾನಿ ಒಮ್ಮೆಯೂ ಬೊಮ್ಮಾಯಿಯವರ ಹೆಸರು ಹೇಳಲಿಲ್ಲ. ಇದು ಬಿಜೆಪಿಯಲ್ಲಿ ಬೊಮ್ಮಾಯಿ ಅವರ ನಾಣ್ಯದ ಚಲಾವಣೆ ಮುಗಿದಿದೆ ಎಂದರ್ಥವಲ್ಲವೇ ಕರ್ನಾಟಕ ಬಿಜೆಪಿಯವರೇ? ಬಿಜೆಪಿಯಲ್ಲಿ ಇನ್ನೇನಿದ್ದರೂ ಜೋಶಿ, ಸಂತೋಷ್ ಅವರದ್ದೇ ಆಟ ಎಂಬುದರ ಮುನ್ಸೂಚನೆಯಲ್ಲವೇ ಇದು!?ʼʼ ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದೆ.

ಮೋದಿಯವರು ಟಾರ್ಚ್‌ ಹಾಕಿ ಹುಡುಕುವಂತದ್ದು ಏನಿತ್ತು?

ಬಿಎಸ್‌ ಯಡಿಯೂರಪ್ಪ ಅವರಿಗೆ ಗೌರವ ಸೂಚಿಸಲು ಮೊಬೈಲ್‌ ಟಾರ್ಚ್‌ ಆನ್‌ ಮಾಡಲು ಹೇಳಿದರು ನರೇಂದ್ರ ಮೋದಿ

ಬಿಎಸ್‌ವೈ ಅವರ ಜನ್ಮದಿನದ ಸಂಭ್ರಮವನ್ನು ಪ್ರಧಾನಿಯವರು ಮೊಬೈಲ್‌ ಟಾರ್ಚ್‌ ಆನ್‌ ಮಾಡಿ ಕೈಬೀಸುವಂತೆ ಮಾಡಿ ಆಚರಿಸಿದರು. ಇದರ ಬಗ್ಗೆಯೂ ಕಾಂಗ್ರೆಸ್‌ ಕೊಂಕು ನುಡಿದಿದೆ.
ʻʻಅಲ್ಪನಿಗೆ ಐಶ್ವರ್ಯ ಸಿಕ್ಕರೆ, ಬೆಳದಿಂಗಳಲ್ಲಿ ಕೊಡೆ ಹಿಡಿಯುತ್ತಾನೆ – ಹಳೆ ಗಾದೆ! ಅಧಿಕಾರಕ್ಕಾಗಿ ಹಗಲಿನಲ್ಲೂ ಟಾರ್ಚ್ ಹಾಕ್ತಾರೆ – ಹೊಸ ಗಾದೆ! BSY ಅವರ ಅಧಿಕಾರ ಎಂಬ ಬ್ಯಾಟರಿ ಕಿತ್ತುಹಾಕಿ ಈಗ ಹಗಲಿನಲ್ಲೇ ಮೊಬೈಲ್ ಟಾರ್ಚ್ ಹಾಕುವುದೇಕೆ ನರೇಂದ್ರ ಮೋದಿಯವರೇ? BSY ಸುರಿಸಿದ್ದ ಕಣ್ಣೀರು ಹುಡುಕುವುದಕ್ಕಾ ಅಥವಾ ಸಂತೋಷ ಹುಡುಕುವುದಕ್ಕಾ?ʼʼ ಎಂದು ಕೇಳಿದೆ.

ಆವತ್ತು ಇದೇ ಬಿಎಸ್‌ವೈ ಅವರನ್ನು ಕಚೇರಿ ಒಳಗೂ ಬಿಟ್ಟುಕೊಂಡಿರಲಿಲ್ಲ!

ʻʻಇದೇ BSY ಸಿಎಂ ಆಗಿದ್ದಾಗ ಕರ್ನಾಟಕದ ನೆರೆ ಸಂಕಷ್ಟದ ಬಗ್ಗೆ ಹೇಳಿಕೊಳ್ಳಲು ಹಲವು ಬಾರಿ ಅಲೆದಾಡಿದರೂ ಪ್ರಧಾನಿ ಕಚೇರಿ ಒಳಗೂ ಬಿಟ್ಟುಕೊಳ್ಳಲಿಲ್ಲ. ಮೋದಿ ಬೆಂಗಳೂರಿಗೇ ಬಂದಿದ್ದರೂ BSY ಮುಖವನ್ನೂ ನೋಡದೆ ವಾಪಸ್ ತೆರಳಿದ್ದರು. ಈಗ ಚುನಾವಣೆಗಾಗಿ BSY ಸ್ತುತಿ ಮಾಡುತ್ತಿರುವ ನರೇಂದ್ರ ಮೋದಿ ಅವರ ನಾಟಕ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ!ʼʼ ಎಂದು ಕಾಂಗ್ರೆಸ್‌ ಕೆಣಕಿದೆ.

ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಗೆ ಭೇಟಿ ನೀಡಲು ಭಯವೇ?

2008ರಲ್ಲಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದ ಶಿವಮೊಗ್ಗ ವಿಮಾನ ನಿಲ್ದಾಣದ ಟೇಪ್ ಕಟ್ ಮಾಡಿ ನನ್ನದೇ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿಯವರೇ ಅಲ್ಲೇ ಸಮೀಪದಲ್ಲಿರುವ ಭದ್ರಾವತಿಯ VISL ಕಾರ್ಖಾನೆಗೆ ಭೇಟಿ ನೀಡಲು ಭಯವೇಕೆ? ಕರ್ನಾಟಕದ ಹೆಗ್ಗುರುತನ್ನು ಅಳಿಸುತ್ತಿರುವುದರಿಂದ ಅಲ್ಲಿಗೆ ಹೋಗಲು ಅಳುಕಾಗುತ್ತಿದೆಯೇ?

ಕುವೆಂಪು ಹೆಸರು ಇಡಲಿರುವ ನಿಲ್ದಾಣದಲ್ಲಿ ಕನ್ನಡದ ಸುಳಿವೇ ಇಲ್ಲ!

ಕುವೆಂಪು ಅವರನ್ನು ಎಲ್ಲಾ ಬಗೆಯಲ್ಲೂ ಅವಮಾನಿಸುತ್ತಿದೆ ಬಿಜೆಪಿ. ಪಠ್ಯದಲ್ಲಿ ಅವಮಾನಿಸಿದ್ದಾಯ್ತು, ಈಗ ಕನ್ನಡದ ಒಂದೇ ಒಂದು ಪದಕ್ಕೆ ಜಾಗವಿಲ್ಲದೆ, ಕೇವಲ ಹಿಂದಿ, ಇಂಗ್ಲಿಷ್ ರಾರಾಜಿಸುವ ಶಿವಮೊಗ್ಗದ ಏರ್ಪೋರ್ಟ್‌ಗೆ ಕುವೆಂಪು ಹೆಸರಿಟ್ಟು ಅವಮಾನಿಸಿದೆ. ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣದಲ್ಲಿ ಕನ್ನಡವಿರಬಾರದು ಎಂಬುದು ನಿಮ್ಮ ಆಜ್ಞೆಯೇ?- ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಇದನ್ನೂ ಓದಿ ; Karnataka Election 2023: ನಮಗಂತೂ ಧಮ್‌, ತಾಕತ್ತು ಇಲ್ಲ; ಬೊಮ್ಮಾಯಿಯವರೇ ನಿಮಗೆ ಧಮ್‌ ಇದೆಯಲ್ಲವೇ? ಬನ್ನಿ ಚರ್ಚೆಗೆ ಎಂದ ಸಿದ್ದರಾಮಯ್ಯ

Exit mobile version