Site icon Vistara News

Congress Padayatra | ಕಾಂಗ್ರೆಸ್‌ ಸರ್ಕಾರ ಬಂದ್ರೆ ಯಾವೊಬ್ಬ ರೈತನನ್ನೂ ಒಕ್ಕಲೆಬ್ಬಿಸಲು ಬಿಡಲ್ಲ: ಡಿ.ಕೆ.ಶಿವಕುಮಾರ್‌

Congress Padayatra

ಶಿವಮೊಗ್ಗ: ಮಲೆನಾಡಿನ ಶರಾವತಿ ಮುಳುಗಡೆ ಸಂತ್ರಸ್ತರು, ರೈತರ ಸಮಸ್ಯೆ ಬಗ್ಗೆ ಅಧ್ಯಯನ ಮಾಡಲು ಕಾಂಗ್ರೆಸ್‌ನಿಂದ ಸಮಿತಿ ರಚಿಸಲಾಗಿತ್ತು. ಸಮಿತಿಯ ವರದಿ ನಮಗೆ ಸಿಕ್ಕಿದ್ದು, ರೈತರ ಸಮಸ್ಯೆಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅರಣ್ಯ ಭೂಮಿ ಕೊಡಬಾರದು ಎಂಬ ಕಾನೂನು ಇದೆಯೇ? ಮುಂದಿನ ದಿನಗಳಲ್ಲಿ ರೈತಪರ ಕಾಂಗ್ರೆಸ್‌ ಸರ್ಕಾರ(Congress Padayatra) ಬರುತ್ತದೆ. ಯಾವೊಬ್ಬ ರೈತನನ್ನೂ ಒಕ್ಕಲೆಬ್ಬಿಸಲು ಬಿಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಕಸ್ತೂರಿ ರಂಗನ್ ವರದಿ, ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಹಾಗೂ ಶರಾವತಿ ಮುಳುಗಡೆ ರೈತರಿಗೆ ಭೂಮಿಯ ಹಕ್ಕು ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್‌ನಿಂದ ಸೋಮವಾರ ಆಯೋಜಿಸಿದ್ದ ಆಯನೂರಿನಿಂದ ಶಿವಮೊಗ್ಗದವರೆಗಿನ ಬೃಹತ್‌ ಪಾದಯಾತ್ರೆ ಬಳಿಕ ನಗರದಲ್ಲಿ ನಡೆದ ಮಲೆನಾಡ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದರು.

ಇದನ್ನೂ ಓದಿ | ಕಾಂಗ್ರೆಸ್‌ನಿಂದ ಮಲೆನಾಡ ಜನಾಕ್ರೋಶ ಪಾದಯಾತ್ರೆ; ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಾಗಿದ ಬೃಹತ್‌ ಜಾಥಾ

ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನ, ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕು, ಬಗರ್‌ ಹುಕುಂ ಸಾಗುವಳಿದಾರರು, ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೂಲಂಕಷ ಅಧ್ಯಯನಕ್ಕೆ ರಚಿಸಿದ ಸಮಿತಿಯ ವರದಿ ಬಂದಿದೆ. ನಾನೂ ಇಂಧನ, ನೀರಾವರಿ ಸಚಿವನಾಗಿ ಕೆಲಸ ಮಾಡಿದ್ದೆ. ಸಿಎಂ ಅವರೇ, ನಿಮ್ಮ‌ ಸರ್ಕಾರದಲ್ಲಿ ಇಂಧನ, ನೀರಾವರಿ ಸಚಿವರಿದ್ದಾರೊ ಇಲ್ಲವೋ ಗೊತ್ತಿಲ್ಲ. ಯಾರೋ ಒಬ್ಬ ಕೋರ್ಟ್‌ಗೆ ಹೋದ ಎಂದು‌ ಸಂತ್ರಸ್ತರಿಗೆ ಭೂ ಹಕ್ಕು ನೀಡಲು ಮಾಡಿದ್ದ ಡಿನೋಟಿಫಿಕೇಶನ್ ರದ್ದು ಮಾಡಿದ್ದೀರಿ ಎಂದು ಕಿಡಿಕಾರಿದ ಅವರು, ನಮ್ಮ ಸರ್ಕಾರ ಬಂದರೆ ಯಾವೊಬ್ಬ ರೈತನನ್ನೂ ಒಕ್ಕಲೆಬ್ಬಿಸಲು ಬಿಡಲ್ಲ ಎಂದರು.

ಬಿಎಸ್‌ವೈ ಅವರೇ 15 ದಿನಗಳಲ್ಲಿ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಕೊಡುವುದಾಗಿ ಹೇಳಿದ್ದಿರಿ, ಆದರೆ ಯಾವುದೇ ಕೆಲಸವಾಗಿಲ್ಲ. ಅಮಿತ್ ಶಾ ಅವರಿಗೂ ನುಡಿದಂತೆ ನಡೆಯಲು ಆಗಿಲ್ಲ. ಸಂತ್ರಸ್ತರಿಗೆ ಪರ್ಯಾಯ ಭೂಮಿ ಕೊಡಲು ಸಾಧ್ಯವಿಲ್ಲವೇ? ಒಕ್ಕಲೆಬ್ಬಿಸುವಂತೆ ಯಾರು ಹೇಳಿದರು ಎಂದು ಪ್ರಶ್ನಿಸಿದ ಅವರು, ಹಾಲಿ ರಾಜ್ಯ ಸರ್ಕಾರದಿಂದ ಏನೂ ಆಗಿಲ್ಲ, ಕಾಂಗ್ರೆಸ್ ಸರ್ಕಾರ ಬಂದರೆ ಅಡಕೆ ಸಂಶೋಧನಾ ಕೇಂದ್ರ ಸ್ಥಾಪಿಸುತ್ತೇವೆ, ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುತ್ತೇವೆ. ಸಾಗುವಳಿ ಒಡೆತನ ನೀಡಲು ಅರಣ್ಯ ಹಕ್ಕು ಕಾಯ್ದೆಯ 75 ವರ್ಷ ಹಾಗೂ ಮೂರು ತಲೆಮಾರಿನ ದಾಖಲೆ ನೀಡುವ ನಿಯಮ ತೆಗೆಯಲಾಗುವುದು. ಈ ಅಂಶಗಳನ್ನು ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಭದ್ರಾವತಿಯಲ್ಲಿ ಕಾರ್ಖಾನೆಗಳನ್ನು ಆರಂಭಿಸಿದ್ದು ಕಾಂಗ್ರೆಸ್. ಆದರೆ, ಮುಚ್ಚುತ್ತಿರುವುದು ಬಿಜೆಪಿ ಸರ್ಕಾರ. ಇದರಿಂದ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಯಾರೊಬ್ಬರೂ ಬರುತ್ತಿಲ್ಲ. ಅಶಾಂತಿ ಹೆಚ್ಚಾಗಿದ್ದು, ಯಾರೂ ಉದ್ಯಮಗಳನ್ನು ಆರಂಭಿಸಲು ಬರುತ್ತಿಲ್ಲ. ನುಡಿದಂತೆ ನಡೆಯುತ್ತೇವೆ ಎಂದು ಹೇಳಿದವರಿಗೆ ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟ ರೈತರಿಗೂ ಸೈಟ್‌ ಕೊಡಲೂ ಸಾಧ್ಯವಾಗಿಲ್ಲ. ಉಡುಪಿ, ಮಂಗಳೂರು ಭಾಗಕ್ಕೆ ಮಾತ್ರ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ, ರಾಜ್ಯದ ಬೇರೆ ಕಡೆ ಭತ್ತ ಬೆಳೆಗಾರರಿಲ್ಲವೇ ಎಂದು ಪ್ರಶ್ನಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡ. ಆದರೆ ಅದಕ್ಕೆ ಕಾರಣರಾದ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದಾಗ ಅವರು ದೋಷಮುಕ್ತರಾಗಿ ಬರುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿದರು. ಹೀಗಿದ್ದಾಗ ಅಧಿಕಾರಿಗಳು ಬಿ ರಿಪೋರ್ಟ್‌ ನೀಡದೆ ಏನು ಮಾಡುತ್ತಾರೆ. ಲಂಚ ತಗೊಳ್ಳಿ, ಮಂಚಕ್ಕೆ ಹೋಗಿ ಎಂಬುವುದು ಬಿಜೆಪಿ ಸಾಧನೆ. ಧರ್ಮ ರಾಜಕಾರಣ ಆಯ್ತು, ಈಗ ವೋಟು ಕದಿಯಲು ಬಂದಿದ್ದಾರೆ. 80 ಲಕ್ಷ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಿ, ಕೆಲವರನ್ನು ಸೇರಿಸಿದ್ದಾರೆ. ಇದು ಅಶ್ವತ್ಥನಾರಾಯಣ ಕೃಪಾಪೋಷಿತ ನಾಟಕ ಕಂಪನಿ ಕೈವಾಡ, ಮತದಾರರು ಹುಷಾರಾಗಿರಬೇಕು ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮಲೆನಾಡಿನ ಸಮಸ್ಯೆಗಳ ಬಗ್ಗೆ ವರದಿ ಸಿಕ್ಕಿದೆ. ಶರಾವತಿ ಮುಳುಗಡೆ ಸಂತ್ರಸ್ತರು, ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬರುವುದು ಶತಃಸಿದ್ಧ, ಅಧಿಕಾರಕ್ಕೆ ಬಂದಾಗ ನೂರಕ್ಕೆ ನೂರು ಸಮಸ್ಯೆ ಬಗೆಹರಿಸುತ್ತೇವೆ. ನುಡಿದಂತೆ ನಡೆವ ಸರ್ಕಾರ ನಮ್ಮದು. 2013ರಲ್ಲಿ ಕೊಟ್ಟ 160 ಭರವಸೆಯಲ್ಲಿ 157 ಈಡೇರಿಸಿದ್ದೇವೆ, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದು ನಮ್ಮ ಸರ್ಕಾರ ಮಾತ್ರ ಎಂದರು.

ಇದನ್ನೂ ಓದಿ | Karnataka Election 2023 | ರಾಜ್ಯದಲ್ಲಿ ಎಸ್‌ಸಿ- ಎಸ್‌ಟಿ ಮತಗಳನ್ನು ಸೆಳೆಯಲು ಮೂರೂ ಪಕ್ಷಗಳ ಕಸರತ್ತು

ಬೊಮ್ಮಾಯಿ, ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ ಅವರು, 2018ರಲ್ಲಿ ಕೊಟ್ಟ 600 ಭರವಸೆಯಲ್ಲಿ ಅವರು ಕೇವಲ 25 ಮಾತ್ರ ಈಡೇರಿಸಿದ್ದಾರೆ. ಕೊಟ್ಟ ಮಾತನ್ನು ತಪ್ಪಿದ ಸರ್ಕಾರ ಬಿಜೆಪಿಯವರದ್ದು, ನಾವು ಅಧಿಕಾರಕ್ಕೆ ಬಂದಾಗ ಅನ್ನಭಾಗ್ಯ ಯೋಜನೆ ತಂದೆವು. ಆದರೆ, ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿತು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ ಪಡಿತರ ನೀಡುತ್ತೇವೆ. ಬಿಜೆಪಿಗೆ ಮಾತಿನಲ್ಲಿ ಕಮ್ಮಿಟ್ಮೆಂಟ್‌ ಇಲ್ಲ, ಬರೀ 40 ಪರ್ಸೆಂಟ್‌ ಕಮಿಷನ್ ಕಮಿಟ್ಮೆಂಟ್‌ ಮಾತ್ರ ಇದೆ. ಇದನ್ನು ನಾನು ಹೇಳುತ್ತಿಲ್ಲ, ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ನವರನ್ನು ಹುಡುಕಿ ಹುಡುಕಿ ದಾಳಿ ಮಾಡಿಸುತ್ತಿದ್ದಾರೆ. ಬಿಜೆಪಿಯವರು ಹರಿಶ್ಚಂದ್ರರಾ? ಮೊದಲು ಬಿಜೆಪಿ ನಾಯಕರ ಆಸ್ತಿ ನೋಡಿ ಎಂದ ಅವರು, ಎಲ್ಲ ಇಲಾಖೆಗಳಲ್ಲಿ ರೇಟ್‌ ಫಿಕ್ಸ್ ಮಾಡಿದ್ದಾರೆ. ಯುವಕರನ್ನು ಎತ್ತಿ ಕಟ್ಟಿ ಗಲಾಟೆ ಮಾಡಿಸುತ್ತಿದ್ದಾರೆ. ಹಿಂದು ಮುಸ್ಲಿಮರ ನಡುವೆ ಜಗಳ ಹಚ್ಚಿ ತಮ್ಮ ಬೇಳೆ ಬೇಯಿಕೊಳ್ಳುತ್ತಾ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಧಿಕ್ಕಾರವಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ, ಇಂಥ ಸರ್ಕಾರ ಬೇಕಾ? ಶಿವಮೊಗ್ಗದಲ್ಲಿ ಬಿಜೆಪಿ ಕಿತ್ತೆಸೆಯಬೇಕು ಎಂದು ಕರೆ ನೀಡಿದರು.

ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದರು, ಕಾಗೋಡು ಮಂತ್ರಿಯಾಗಿದ್ದರು. ಅವರ ಆಸ್ತಿಪಾಸ್ತಿ ನೋಡಿ, ಇವತ್ತು ಬಿಜೆಪಿಯವರ ಆಸ್ತಿ ನೋಡಿ, ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಹಿಜಾಬ್, ಪ್ರಾರ್ಥನೆ ಮಾಡುವ ಬಗ್ಗೆ ಮಾತನಾಡುವ ಬಿಜೆಪಿಯವರು, ಸರ್ವ ಧರ್ಮ‌ ಸಮಾನತೆ ಇರುವ ದೇಶದಲ್ಲಿ ಸಂವಿಧಾನವನ್ನು ಕಿತ್ತೆಸೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಲೆನಾಡಿನ ಸಮಸ್ಯೆ ಕುರಿತ ಅಧ್ಯಯನ ವರದಿ ಸಲ್ಲಿಕೆ
ಸಮಾವೇಶದ ಆರಂಭದಲ್ಲಿ ಮಲೆನಾಡಿನ ಸಮಸ್ಯೆಗಳ ಕುರಿತ ಅಧ್ಯಯನ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸಲ್ಲಿಸಲಾಯಿತು. ಅಧ್ಯಯನ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಅವರು ವರದಿ ಸಲ್ಲಿಸಿದರು. ವರದಿಯಲ್ಲಿ ಮಲೆನಾಡಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಶಿಫಾರಸುಗಳನ್ನು ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಸಮಿತಿಯನ್ನು ರಚನೆ ಮಾಡಲಾಗಿತ್ತು.

ಇದನ್ನೂ ಓದಿ | Karnataka election | ಸಿದ್ದರಾಮಯ್ಯ – ಡಿಕೆಶಿ ಜೋಡೆತ್ತುಗಳಲ್ಲ, ಕಿತ್ತಾಡುವ ಚಿರತೆಗಳು ಎಂದ ಶ್ರೀರಾಮುಲು

Exit mobile version