ನವ ದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಆದರೆ, ಪಕ್ಷದ ಆಂತರಿಕ ರಾಜಕೀಯ (Congress Politics) ಮಾತ್ರ ಹದಗೆಟ್ಟಿದೆ. ಒಬ್ಬರಾದ ಮೇಲೆ ಒಬ್ಬರು ಸರ್ಕಾರ ಹಾಗೂ ಸಚಿವರ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದು ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊದಲಿಗೆ ಸಚಿವರ ವಿರುದ್ಧವೇ ಭ್ರಷ್ಟಾಚಾರ, ವರ್ಗಾವಣೆ ದಂಧೆ ಬಗ್ಗೆ ಆರೋಪಿಸಿ ಹಿರಿಯ ಶಾಸಕರು ಪತ್ರ ಬರೆದಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಮಾತುಗಳನ್ನಾಡಿದ್ದರು. ಈಚೆಗೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡದೇ ಹೋದರೆ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂದು ಸಚಿವ ಕೆ.ಎನ್. ರಾಜಣ್ಣ (Minister KN Rajanna) ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ (Karnataka Politics) ಗದ್ದಲವನ್ನು ಎಬ್ಬಿಸಿತ್ತು. ಪ್ರತಿಪಕ್ಷಗಳಿಗೆ ಆಹಾರವೂ ಆಗಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Congress state in-charge Randeep Singh Surjewala) ಅವರು ಕೆ.ಎನ್. ರಾಜಣ್ಣ ಸಹಿತ ಕಾಂಗ್ರೆಸ್ ನಾಯಕರಿಗೆ ಬಹಿರಂಗವಾಗಿಯೇ ವಾರ್ನಿಂಗ್ ನೀಡಿದ್ದಾರೆ.
ಸಚಿವ ಕೆ.ಎನ್. ರಾಜಣ್ಣ ಮೂರು ಡಿಸಿಎಂ ಸೃಷ್ಟಿ ಮಾಡಬೇಕು ಎಂಬ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಈಗಾಗಲೇ ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಸೂಚನೆ ಕೊಡುವ ಕೆಲಸವನ್ನು ಮಾಡಿದ್ದಾರೆ. ಕೆಲ ನಾಯಕರಿಂದ ಈ ರೀತಿಯ ಹೇಳಿಕೆ ಹೊರಬರುತ್ತಿದೆ. ನಾವು ಕರ್ನಾಟಕ ಸರ್ಕಾರದ ಯೋಜನೆ ಮತ್ತು ಮಾಡೆಲ್ ಬಗ್ಗೆ ಮಾತನಾಡಬೇಕು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಂತ್ರ ಮಾಡುತ್ತಿದ್ದಾರೆ. ನಾನು ಮಾಧ್ಯಮಗಳ ಮೂಲಕ ವಾರ್ನಿಂಗ್ ಕೊಡುತ್ತಿದ್ದೇನೆ. ಈ ರೀತಿಯ ವಿಚಾರ ಪಕ್ಷದ ಒಳಗೆಯಾಗಲಿ, ಹೊರಗಡೆಯಾಗಲಿ ಹೇಳಿಕೆ ಕೊಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರು.
ಮುಂದೆ ಹೇಳಿಕೆ ನೀಡದಂತೆ ಎಚ್ಚರಿಕೆ
ನಾನು ಈಗಾಗಲೇ ಇಂತಹ ಹೇಳಿಕೆ ಬಗ್ಗೆ ಕೆ.ಎನ್. ರಾಜಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಈ ರೀತಿಯ ಹೇಳಿಕೆಯನ್ನು ಮುಂದೆ ನೀಡದಿರಲು ಸೂಚನೆ ನೀಡಿದ್ದೇನೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಮಾಧ್ಯಮಗಳಿಗೆ ತಿಳಿಸಿದರು.
ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಣದೀಪ್ ಸಿಂಗ್ ಸುರ್ಜೇವಾಲ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹಿಂದಿನಿಂದಲೇ ಹೇಳುತ್ತಿದ್ದೆ. ಅದು ಈಗ ಬಹಿರಂಗವಾಗಿ ಹೊರ ಬಂದಿದೆ. ಇದು ಅವಕಾಶವಾದಿ ಮೈತ್ರಿಯಾಗಿದೆ. ಸೋತ ಇಬ್ಬರಿಂದ ಮೈತ್ರಿಯಾಗಿದೆ. ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ ಎಂದು ಟಾಂಗ್ ನೀಡಿದರು.
ಹೊಸ ಮಾಡೆಲ್ ನಿರ್ಮಾಣ ಮಾಡಿದ ಕರ್ನಾಟಕ ಕಾಂಗ್ರೆಸ್
ಕರ್ನಾಟಕ ಕಾಂಗ್ರೆಸ್ ಹೊಸ ಮಾಡೆಲ್ ಅನ್ನು ನಿರ್ಮಾಣವಾಗಿದೆ. ಇದು ಈಗ ದೇಶದ ಮಾಡೆಲ್ ಆಗಿ ಹೊರಹೊಮ್ಮಿದೆ. ನಮ್ಮ ಯೋಜನೆಗಳೆಲ್ಲವನ್ನೂ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳವರು ನಮ್ಮ ಯೋಜನೆಯನ್ನು ತಮ್ಮ ರಾಜ್ಯಗಳಲ್ಲಿ ತರುತ್ತಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಇದನ್ನೂ ಓದಿ: Cauvery water dispute : ದೇವೇಗೌಡರ ನೋಡಿ ಕಲಿಯಲು ಬಿಜೆಪಿಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ!
ಭವಿಷ್ಯವನ್ನಷ್ಟೇ ನೋಡುತ್ತೇವೆ
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿರುವ ವಿಚಾರದ ಬಗ್ಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ನಾವು ಹಿಂದಿನದರ ಬಗ್ಗೆ ನೋಡಲ್ಲ, ಭವಿಷ್ಯದ ಬಗ್ಗೆ ನೋಡುತೇವೆ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.