ಬೆಂಗಳೂರು: ಚಾಮರಾಜನಗರದಲ್ಲಿ ನಿವೇಶನ ಕೇಳಲು ಬಂದ ಪರಿಶಿಷ್ಟ ಸಮುದಾಯದ ಮಹಿಳೆ ಕೆನ್ನೆಗಡ ಹೊಡೆದ ಸಚಿವ ವಿ. ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಬೆಂಗಳೂರು ಕಾಂಗ್ರೆಸ್ ಘಟಕದ ವತಿಯಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಹಾಗೂ ಸೋಮಣ್ಣ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕೂಡಲೆ ಸಂಪುಟದಿಂದ ವಜಾ ಮಾಡಬೇಕು ಆಗ್ರಹ ಮಾಡಿದರು. ಸೋಮಣ್ಣ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಬಳಿ ಸುಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮನೋಹರ್, ಮನವಿ ನೀಡಲು ಬಂದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ದಲಿತ ಮಹಿಳೆ ಮೇಲೆ ಸೋಮಣ್ಣ ಹಲ್ಲೆ ಮಾಡಿದ್ದು, ಇದು ಮಹಿಳಾ ವಿರೋಧಿ ಬಿಜೆಪಿ ಸರ್ಕಾರ. ನೈತಿಕ ಹೊಣೆ ಹೊತ್ತು ಸೋಮಣ್ಣ ಅವರೇ ರಾಜೀನಾಮೆ ನೀಡಬೇಕು. ಈವರೆಗೆ ಯಾವೊಬ್ಬ ಸಚಿವರು ಕೂಡ ಸೋಮಣ್ಣ ನಡವಳಿಕೆಯನ್ನು ಖಂಡಿಸಿಲ್ಲ. ಈ ಸರ್ಕಾರ ದಲಿತ ವಿರೋಧಿ ಎನ್ನುವುದು ಸಾಬೀತಾಗಿದೆ. ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವುದು ಗೊತ್ತಾಗಿದೆ. ರಾಜಿನಾಮೆ ನೀಡದೇ ಇದ್ದರೆ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದರು.
ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದಲೂ ಪ್ರತಿಭಟನೆ ನಡೆಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆನಂತರ ಎಲ್ಲ ಕಾರ್ಯಕರ್ತರೂ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದರು. ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಇದನ್ನೂ ಓದಿ | ಮಹಿಳೆಯ ಕಪಾಳಕ್ಕೆ ಹೊಡೆದ ವಿ.ಸೋಮಣ್ಣ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ: Sorry ಎಂದ ಸಚಿವ