Site icon Vistara News

Congress Protest: ಪ್ರಧಾನಿ, ಗವರ್ನರ್‌ಗೆ ಬೆದರಿಕೆ; ಐವನ್ ಡಿಸೋಜಾ, ಜಮೀರ್‌, ರಕ್ಷಿತ್ ಶಿವರಾಮ್ ವಿರುದ್ಧ ದೂರು

Congress Protest

ಬೆಂಗಳೂರು: ಬಾಂಗ್ಲಾದೇಶದಲ್ಲಿ ಆದ ಪರಿಸ್ಥಿತಿಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಬರಲಿದೆ ಎಂದು ಪ್ರತಿಭಟನೆ (Congress Protest) ವೇಳೆ (ಆ.19) ಬೆದರಿಕೆ ಹಾಕಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರಿಂದ ಉಪ್ಪಾರಪೇಟೆ ಠಾಣೆಗೆ ದೂರು ನೀಡಲಾಗಿದೆ.

ಕಾಂಗ್ರೆಸ್ ನಾಯಕರಾದ ಐವಾನ್ ಡಿಸೋಜಾ, ರಕ್ಷಿತ್ ಶಿವರಾಮ್ ಹಾಗೂ ಸಚಿವ ಜಮೀರ್‌ ಅಹ್ಮದ್‌ ಅವರ ವಿರುದ್ಧ ಉಪ್ಪಾರಪೇಟೆ ಠಾಣೆಗೆ ಪ್ರತ್ಯೇಕ ದೂರು ನೀಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಹಾಗೂ ರಾಜ್ಯ ಮತ್ತು ರಾಷ್ಟ್ರದಲ್ಲಿ ಅರಾಜಕತೆ ಸೃಷ್ಟಿಸುವ ದುರುದ್ದೇಶದಿಂದ ತಮ್ಮ ಕಾರ್ಯಕರ್ತರುಗಳಿಗೆ ಪ್ರಚೋದನೆ ನೀಡುವ ಹೇಳಿಕೆಗಳನ್ನು ನೀಡಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದ ಐವನ್ ಡಿಸೋಜಾ

ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕರಾದ ಐವನ್ ಡಿಸೋಜಾ ಅವರು ಆ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ, ರಾಜ್ಯಪಾಲರ ವಿರುದ್ಧ ಬಾಂಗ್ಲ ದೇಶದಲ್ಲಿ ಆದ ಹಿಂಸಾಚಾರದ ಸ್ವರೂಪದಲ್ಲಿ ದಾಳಿ ಮಾಡುವುದಾಗಿ ರಾಷ್ಟ್ರವಿರೋಧಿ ಹೇಳಿಕೆ ಮತ್ತು ದುರುದ್ದೇಶ ಪೂರ್ವಕವಾದ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

“ಕೂಡಲೇ ಗವರ್ನರ್‌ ಹಿಂದಕ್ಕೆ ಹೋಗಬೇಕು ಮತ್ತು ಹೋಗದೇ ಇದ್ದರೇ, ಬಾಂಗ್ಲಾ ದೇಶದಲ್ಲಿ ಯಾವ ರೀತಿ ಆಗಿದೆಯೋ ಅದೇ ರೀತಿ ರಾಜಭವನಕ್ಕೆ ನುಗ್ಗವಂಥ ಕೆಲಸ ಕಾಂಗ್ರೆಸ್‌ನ ಕಾರ್ಯಕರ್ತರು ಮಾಡಬೇಕಾಗುತ್ತದೆ. ಅದು ಮಾಡಿಯೇ ಮಾಡುತ್ತೇವೆ, ಹಾಗಾಗಿ ಮಾನ ಮರ್ಯಾದೆ ಇದ್ದರೆ ಕೇಂದ್ರವು ಗವರ್ನರ್‌ರನ್ನು ಹಿಂದಕ್ಕೆ ಕರೆಸಬೇಕು ಮತ್ತು ಅವರು ರಾಜ್ಯ ಬಿಟ್ಟು ತೊಲಗಬೇಕು, ಇಲ್ಲದಿದ್ದರೇ, ರಾಜಭವನಕ್ಕೆ ನುಗ್ಗುವುದು ಖಂಡಿತ, ರಾಜಭವನದಲ್ಲಿ ಏನಾದರೂ ಆದರೇ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಐವನ್ ಡಿಸೋಜಾ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್‌ ದೂರು ನೀಡಿದ್ದಾರೆ.

ಅರಾಜಕತೆ ಸೃಷ್ಟಿಸುವ ಎಚ್ಚರಿಕೆ‌ ನೀಡಿದ್ದ ಕೈ ನಾಯಕ

ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಮ್ ಬೆಳ್ತಂಗಡಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ವಿರುದ್ಧ ಬಾಂಗ್ಲಾ ದೇಶದಲ್ಲಿ ಆದ ಪರಿಸ್ಥಿತಿಯೇ ತಮಗೂ ಬರುತ್ತದೆ ಎಂದು ಅರಾಜಕತೆ ಸೃಷ್ಟಿಸುವ ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿಯಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಪ್ರಧಾನಿಯವರೇ ಒಂದು ವಿಚಾರವನ್ನು ತಿಳ್ಕೊಳ್ಳಿ, ಬಾಂಗ್ಲಾದೇಶದಲ್ಲಿ ಹಾಸಿಗೆ ದಿಂಬು ಹಿಡ್ಕೊಂಡು ಹೋದ್ರಲ್ಲ ಆ ಪ್ರಸಂಗ ನಿಮಗೂ ಕೂಡ ಅತೀ ಶೀಘ್ರದಲ್ಲಿ ಬರಲಿದೆ. ಎಚ್ಚರವಾಗಿರಿ” ಎಂದು ದೇಶದಲ್ಲಿ ಆರಾಜಕತೆ ಸೃಷ್ಟಿಸುವ ರಾಷ್ಟ್ರ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ರಕ್ಷಿತ್ ಶಿವರಾಮ್ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಮೇಶ್‌ ಸುಲ್ತಾನಪುರ್‌ ದೂರು ನೀಡಿದ್ದಾರೆ.

ಜನ ಸುಮ್ಮನೆ ಕೂರಲ್ಲ ಎಂದಿದ್ದ ಜಮೀರ್‌ ಅಹ್ಮದ್

ಬೆಂಗಳೂರಿನ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕರು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ, ಶಾಸಕರು, ಎಲ್ಲಾ ಸಚಿವರು, ಎಲ್ಲಾ ಕಾರ್ಯಕರ್ತರು, ಎಲ್ಲಾ ರಾಜ್ಯದ ಜನ ಏಳು ಕೋಟಿ ರಾಜ್ಯದ ಜನ ಸಿದ್ದರಾಮಯ್ಯ ಜತೆ ಇದ್ದಾರೆ. ರಾಜ್ಯಪಾಲರಿಗೆ ಒಂದು ಮಾತು ಹೇಳೋಕೆ ಬಯಸುತ್ತೇನೆ. ಇವತ್ತೇನು ಯಾರದೋ ಮಾತನ್ನು ಕೇಳಿ ಈ ತರಹ ತೀರ್ಮಾನ ತಗೋಂಡಿದ್ದೀರಾ? ಇದರಿಂದ ಏನಾದರೂ ಗಲಾಟೆ ಆಗಿ, ಹಲ್ಲೆ ಏನಾದರೂ ಆದರೆ ರಾಜ್ಯಪಾಲರು ಹೊಣೆ ಆಗುತ್ತಾರೆ. ಜನ ಸುಮ್ಮನೆ ಕೂರಲ್ಲ ಹಾಗೂ ಹಿಂದುಳಿದ ವರ್ಗದ ನಾಯಕನನ್ನು ಮುಗಿಸುವಂತ ಷಡ್ಯಂತ್ರ ನೆಡೆಯುತ್ತಿದೆ ಎಂದು ಹೇಳುವ ಮೂಲಕ ಕೋಮುಗಳ ನಡುವೆ ದ್ವೇಷ ಭಾವನೆ ಬಿತ್ತಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ತಮ್ಮ ಕಾರ್ಯಕರ್ತರಿಗೆ ಕೋಮು ಗಲಭೆ, ದಾಂಧಲೆ, ಹಲ್ಲೆಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕುಮ್ಮಕ್ಕು ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಎಸ್‌.ಮಂಜುನಾಥ್‌ ದೂರು ನೀಡಿದ್ದಾರೆ.

ಇದನ್ನೂ ಓದಿ | Paralympic 2024: ಒತ್ತಡಕ್ಕೆ ಒಳಗಾಗಬೇಡಿ; ಭಾರತದ ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸಲಹೆ

ರಾಜ್ಯಪಾಲರ ಭಾವಚಿತ್ರ ದಹನ; ಡಿಜಿಪಿಗೆ ಬಿಜೆಪಿ ದೂರು

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವೇಳೆ ರಾಜ್ಯಪಾಲರ ಫೊಟೊಗೆ ಚಪ್ಪಲಿಯಲ್ಲಿ ಹೊಡೆದು ಹಾಗೂ ಸುಟ್ಟುಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ‌ ಕೈಗೊಳ್ಳುವಂತೆ ಡಿಜಿಪಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ನೇತೃತ್ವದ ನಿಯೋಗದಿಂದ‌ ದೂರು ಸಲ್ಲಿಸಲಾಗಿದೆ.

Exit mobile version