ಶಿಕಾರಿಪುರ: ಮಡಿಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಕರಣದ ವಿರುದ್ಧ ಕಾಂಗ್ರೆಸ್ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದೆ. ಅದರಲ್ಲೂ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ತವರಾದ ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ನೆರೆ ವೀಕ್ಷಣೆಗೆ ತೆರಳಿದ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು ಮತ್ತು ಕರಿ ಬಾವುಟ ಪ್ರದರ್ಶಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ಪ್ರಕಟಿಸಿದೆ.
ಪ್ರತಿಭಟನೆ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮಹೇಶ್ ಹುಲ್ಮಾರ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗು ಗೃಹ ಸಚಿವ ಆರಗ ಜ್ಞಾನೇಂದ್ರರವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಾಗಿ ಆಗ್ರಹಿಸಿದರು.
ಪುರಸಭೆಯ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಳ್ಳಿ ದರ್ಶನ್ ಮಾತನಾಡಿ, ಮೊಟ್ಟೆ ಎಸೆದ ಆರೆಸ್ಸೆಸ್ ಕಾರ್ಯಕರ್ತರನ್ನು ಕೂಡಲೇ ಬಂಧಿಸದಿದ್ದರೆ ಸೆಪ್ಟೆಂಬರ್ ಎರಡರಂದು ಶಿವಮೊಗ್ಗಕ್ಕೆ ಆಗಮಿಸುವ ಮುಖ್ಯಮಂತ್ರಿ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುರಸಭೆಯ ಸದಸ್ಯರಾದ ನಾಗರಾಜ್ ಗೌಡ್ರು, ಗೋಣಿ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಭಂಡಾರಿ ಮಾಲತೇಶ್, ರಾಘವೇಂದ್ರ ನಾಯಕ್, ಬಡಗಿ ಪಾಲಾಕ್ಷಪ್ಪ, ಸಂದೀಪ್, ಮಲ್ಲಿಕ್ ನಾಯ್ಕ್, ಶ್ರೀಕಾಂತ್, ದಯಾನಂದ್, ಚರಣ್ , ಮಂಜು, ಪ್ರಕಾಶ್, ಪ್ರದೀಪ್ ಹಾಗು ಮುಂತಾದ ಮುಖಂಡರು ಪಾಲ್ಗೊಂಡಿದ್ದರು.
ಿಇದನ್ನೂ ಓದಿ| ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ: ಮೈಸೂರಿನಲ್ಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಪ್ರತಿಭಟನೆ