ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷ ವತಿಯಿಂದ 300 ಕಡೆ ಪ್ರತಿಭಟನೆ ಆಯೋಜನೆಯಾಗಿದೆ. ಇದರಲ್ಲಿ ರಸ್ತೆ ತಡೆ ಇರುವುದಿಲ್ಲ. ಆದರೂ ಹೆಚ್ಚು ವಾಹನಗಳು ಬರುವುದರಿಂದ ಸಂಚಾರಕ್ಕೆ ಸ್ವಲ್ಪ ಅಡಚಣೆ ಆಗಬಹುದು. ಹೀಗಾಗಿ ಸಾರ್ವಜನಿಕರು ತಮ್ಮ ಓಡಾಟದ ದಾರಿಗಳ ಬಗ್ಗೆ ಮೊದಲೇ ಪ್ಲ್ಯಾನ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಬೆಳಗ್ಗೆ 10ರಿಂದ 12ರವರೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ನಗರದ 200 ಜಂಕ್ಷನ್ ಹಾಗೂ ಫ್ಲೈ ಓವರ್‌ಗಳ ಬಳಿ ಪ್ರತಿಭಟನೆಗೆ ನಿರ್ಧರಿಸಿದೆ. ಈ ಸಮಯದಲ್ಲಿ ಅತೀ ಹೆಚ್ಚು ವಾಹನ ರಸ್ತೆಗಿಳಿಯುತ್ತವೆ. ಹೀಗಾಗಿ ಈ ಹೊತ್ತಿನಲ್ಲಿ ಆಫೀಸು ಸೇರಿದಂತೆ ತಮ್ಮ ಕಾರ್ಯಚಟುವಟಿಕೆಗಳಿಗೆ ತೆರಳುವವರು ಬೇರೆ ರೂಟುಗಳಲ್ಲಿ ಸಾಗುವುದು ಉತ್ತಮ.
”ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷ ಜ.23, ಸೋಮವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ನಗರದ 300ಕ್ಕೂ ಹೆಚ್ಚು ಕಡೆಗಳಲ್ಲಿ ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ ಎಂಬ ಮೌನ ಪ್ರತಿಭಟನೆ ಮಾಡಲಿದೆ. 51 ಮೆಟ್ರೋ ನಿಲ್ದಾಣಗಳಲ್ಲಿ, 26 ಫ್ಲೈ ಓವರ್, 200 ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಾವು ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ಸಂಚಾರಕ್ಕೆ ಅಡ್ಡಿ ಮಾಡಿ ಹೋರಾಟ ಮಾಡುವುದಿಲ್ಲʼʼ ಎಂದು ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ತಿಳಿಸಿದ್ದರು.
ಇದನ್ನೂ ಓದಿ | Karnataka Congress : ಇಂದು ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ