Site icon Vistara News

Shivamogga News: ಸೂಲಿಬೆಲೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಪ್ರತ್ಯುತ್ತರವಾಗಿ ಹಿಂದು ಕಾರ್ಯಕರ್ತರ ಪ್ರೊಟೆಸ್ಟ್‌

Hindu Workers protest against congress

ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮ ವಿರೋಧಿಸಿ ನಗರದ (Shivamogga News) ಕರ್ನಾಟಕ ಸಂಘದ ಎದುರು ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಕೈ ಕಾರ್ಯಕರ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಹಾಕಿರುವ ಚಕ್ರವರ್ತಿ ಸೂಲಿಬೆಲೆ ಬಂಧನಕ್ಕೆ ಒತ್ತಾಯಿಸಿ ಒಂದೆಡೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಪ್ರತ್ಯುತ್ತರವಾಗಿ ಹಿಂದು ಸಂಘಟನೆಗಳು ಕೂಡ ಪ್ರತಿಭಟನೆ ನಡೆಸಿದ್ದು ಕಂಡುಬಂತು. ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸೂಲಿಬೆಲೆ ಗೋ ಬ್ಯಾಕ್ ಎಂದು ಕಾಂಗ್ರೆಸ್ ಕಾರ್ಯಕರ್ತರು, ಚಪ್ಪಲಿ, ಪೊರಕೆ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹಿಂದು ಕಾರ್ಯಕರ್ತರು ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ್ದವರು, ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸುಂದರೇಶ್, ಸೌಗಂಧಿಕ ರಘುನಾಥ್ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಬಂದಿದ್ದ ಜನರು, ಜೈ ಮೋದಿ, ಜೈ ಮೋದಿ ಎಂದು ಜೈಕಾರ ಘೋಷಣೆ ಕೂಗುತ್ತಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸ್ಥಳವನ್ನು ಗೋಮೂತ್ರ ಹಾಕಿ ಶುದ್ಧೀಕರಣ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಕರೆದೊಯ್ಯುತ್ತಿದ್ದಂತೆ ಟಾಟಾ ಬೈಬೈ ಎಂದು ಹಿಂದು ಪರ ಕಾರ್ಯಕರ್ತರು ವ್ಯಂಗ್ಯವಾಡಿದ್ದು ಕಂಡುಬಂತು. ನಂತರ ಸಭಾಂಗಣ ತುಂಬಿದ್ದರಿಂದ ಸೂಲಿಬೆಲೆ ಭಾಷಣ ಕೇಳಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ‌

Protest in Shivamogga

ಇದನ್ನೂ ಓದಿ | Karnataka Politics: ನೂರು ದಿನದಲ್ಲಿ ದಿಕ್ಕುತಪ್ಪಿದ ಸರ್ಕಾರದಲ್ಲಿ ಹಗಲು ದರೋಡೆ: ಬಸವರಾಜ ಬೊಮ್ಮಾಯಿ

ಚಕ್ರವರ್ತಿ ಸೂಲಿಬೆಲೆ ಪೋಸ್ಟ್‌ ವಿವಾದವೇನು?

ಇಸ್ರೋದ ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥಿಸಿ ಪೂಜೆ ಮಾಡಿಸಿ ಫೊಟೋ ಹಾಕಿ ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಶಿವಮೊಗ್ಗ ನಿವಾಸಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆ ಸೌಗಂಧಿಕಾ ರಘುನಾಥ್ ಕಮೆಂಟ್ ಮಾಡಿ, “ದೇವರ ಪೂಜೆಗಿಂತ ವಿಜ್ಞಾನಿಗಳ ಶ್ರಮ ಯಶಸ್ವಿಯಾಗಲೆಂದು ಪ್ರಾರ್ಥಿಸೋಣ” ಎಂದು ಹೇಳಿದ್ದರು. ಈ ವೇಳೆ ಸೂಲಿಬೆಲೆ ಪ್ರತಿಕ್ರಿಯಿಸಿ, “ನಿನಗೇನು ಉರಿ?” ಎಂದು ಪೋಸ್ಟ್ ಮಾಡಿದ್ದರು. ಹೀಗಾಗಿ ಸ್ತ್ರೀ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸೌಗಂಧಿಕಾ ರಘುನಾಥ್ ನೀಡಿದ ದೂರಿನ ಅನ್ವಯ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಾಗಿದೆ.

Exit mobile version