ಬೆಂಗಳೂರು: ವಿಪಕ್ಷಗಳ 146 ಸಂಸದರ ಅಮಾನತು ವಿರೋಧಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ (Congress Protest) ನಡೆಸಲಾಯಿತು. ನ್ಯಾಯ ಕೇಳಿದ ಸಂಸದರಿಗೆ ಹಿಟ್ಲರ್ ಸರ್ಕಾರದಿಂದ ಅನ್ಯಾಯವಾಗಿದೆ. ನರೇಂದ್ರ ಮೋದಿ ಸಂವಿಧಾನ ವಿರೋಧಿ ಸರ್ವಾಧಿಕಾರಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಧಿಕ್ಕಾರದ ಘೋಷಣೆಗಳನ್ನು ಕೂಗಿ ವಿರುದ್ಧ ಕಾರ್ಯಕರ್ತರು, ಮುಖಂಡರು ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ದೇಶದ ಸಂಸತ್ತಿನ ಮೇಲೆ ನಡೆದ ದಾಳಿ ವಿಚಾರವಾಗಿ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರಿಂದ ಉತ್ತರ ಕೇಳಿದ ಕಾರಣಕ್ಕೆ ವಿರೋಧ ಪಕ್ಷಗಳ 146 ಸಂಸದರನ್ನು ಸದನದಿಂದ ಅಮಾನತು ಮಾಡಲಾಗಿದೆ. ಪ್ರಜಾಪ್ರಭುತ್ವ ಹಾಗೂ ಅದರ ಮೌಲ್ಯಗಳನ್ನು ಉಳಿಸುವ ಉದ್ದೇಶದಿಂದ ಸರ್ಕಾರದ ವೈಫ್ಯಲ್ಯ ಹಾಗೂ ಭದ್ರತಾ ಲೋಪದ ಬಗ್ಗೆ ಸದನದಲ್ಲಿ ಚರ್ಚೆಗೆ ಆಗ್ರಹಿಸಲಾಯಿತು. ಆದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತು ಪಡಿಸಿ ಉಳಿದವರನ್ನು ಅಮಾನತು ಮಾಡಿದ್ದಾರೆ ಎಂದು ಹೇಳಿದರು.
ನೂತನ ಸಂಸತ್ ಭವನದಲ್ಲಿ ವಿರೋಧ ಪಕ್ಷದ ಸಂಸದರ ವಿರುದ್ಧದ ದಾಳಿ, ಕೇಂದ್ರ ಸರ್ಕಾರದ ದುರಾಡಳಿತ, ಸಂವಿಧಾನ ವಿರೋಧಿ ನೀತಿ ಖಂಡಿಸಿ ಸಂಸತ್ ಆವರಣದ ಮಹಾತ್ಮ ಗಾಂಧಿ ಅವರ ಪ್ರತಿಮೆ ಮುಂದೆ ನಮ್ಮ ಸಂಸತ್ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ.
ಇದನ್ನೂ ಓದಿ | Patrika Bhavan: ವಸ್ತುನಿಷ್ಠ ಸುದ್ದಿ, ಸತ್ಯದ ವರದಿ ಮಾತ್ರ ಸಮಾಜಮುಖಿ: ಸಿದ್ದರಾಮಯ್ಯ
ಸ್ಪೀಕರ್ ಅವರ ಬಳಿ ಕಾಗದ ಹರಿದಿದ್ದಾರೆ ಎಂದು ವಿರೋಧ ಪಕ್ಷಗಳ ಕೆಲವು ಸದಸ್ಯರ ನಡೆಯನ್ನು ಹಕ್ಕುಬಾಧ್ಯತಾ ಸಮಿತಿಯ ಪರಿಶೀಲನೆಗೆ ಒಳಪಡಿಸಿದ್ದಾರೆ. ಆಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನು ನಾವು ಜನರ ಮುಂದೆ ಇಡಬೇಕಿದೆ ಎಂದು ತಿಳಿಸಿದರು.
ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದು, ಬಿಜೆಪಿಯ ಸರ್ವಾಧಿಕಾರಿ ಸರ್ಕಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ನಮ್ಮ ರಾಜ್ಯದಲ್ಲಿ, ಜನರ ಸಮಸ್ಯೆ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ಮಾಡಿ ಎಂದರೆ ವಿರೋಧ ಪಕ್ಷದ ನಾಯಕರು ಚರ್ಚೆ ಮಾಡಲಿಲ್ಲ. ಕೊನೆಯ ದಿನ ಅವರು ಹೊರಗೆ ಪ್ರತಿಭಟನೆ ಮಾಡಿದ್ದರು. ಜನ ಸದನದ ಒಳಗೆ ಚರ್ಚೆ ಮಾಡಲು ಬಿಜೆಪಿಯ 65 ನಾಯಕರನ್ನು ಆರಿಸಿ, ಕಳುಹಿಸಿದ್ದಾರೆ.
ಈ ಹೋರಾಟವನ್ನು ಜನರ ಮಧ್ಯೆ ತೆಗೆದುಕೊಂಡು ಹೋಗಬೇಕು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಸಂವಿಧಾನದ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಿದೆಯೇ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳ ನಾಯಕರು ಎತ್ತುತ್ತಿದ್ದಾರೆ. ಶೇ.98 ರಷ್ಟು ಫಲಾನುಭವಿಗಳಿಗೆ ನಮ್ಮ ಯೋಜನೆಗಳು ತಲುಪಿವೆ. ಸುಮಾರು 59 ಸಾವಿರ ಕೋಟಿಯಷ್ಟು ಹಣವನ್ನು ನಾವು ಈ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ಕೊಟ್ಟ ಮಾತು ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಬದ್ಧತೆ. ಕಾರ್ಯಕರ್ತರಿಂದಲೇ ಈ ಪಕ್ಷ. ನಿಮ್ಮ ಹೋರಾಟವೇ ನಮಗೆ ಸ್ಫೂರ್ತಿ. ನಿಮ್ಮ ವಿಶ್ವಾಸ ಸದಾ ನಮ್ಮ ಜತೆ ಇರಲಿ ಎಂದು ಮನವಿ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಮಾನ
ಕೇಂದ್ರದ ಬಿಜೆಪಿ ಸರ್ಕಾರ ದೇಶದ ಚರಿತ್ರೆಯಲ್ಲಿ ದಾಖಲಾಗುವಂತಹ ಕೆಲಸವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಸ್ಪೀಕರ್ ಅವರಿಂದ ಮಾಡಿಸಿದೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಭಂಗವಾಗುತ್ತಿದ್ದು, ಸಂಸತ್ ಭದ್ರತಾ ಲೋಪದ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆಯನ್ನು ಸದನದಲ್ಲಿ ನೀಡಬೇಕು ಎಂದು ಆಗ್ರಹಿಸಿದೆವು. ಈ ಬಗ್ಗೆ ಹೇಳಿಕೆ ನೀಡಲು ಅವರಿಂದ ಸಾಧ್ಯವಾಗದೇ ವಿರೋಧ ಪಕ್ಷಗಳ ಸಂಸತ್ ಸದಸ್ಯರನ್ನು ಅಮಾನತು ಮಾಡಿ ತಮಗೆ ಬೇಕಾದ ಮಸೂದೆ ಮಂಡನೆ ಮಾಡಿ ಅನುಮೋದನೆ ಪಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಮಾನ ಎಂದರು.
ಈ ವಿಚಾರವಾಗಿ ಜನರ ಗಮನ ಸೆಳೆಯಲು ದೇಶದಾದ್ಯಂತ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಾವು ಪ್ರಜಾಪ್ರಭುತ್ವ ಉಳಿಸಬೇಕು. ಲೋಕಸಭೆ ಚುನಾವಣೆವರೆಗೂ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ, ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ | CM Siddaramaiah : ಮೋದಿ ಓಡಾಡೋದು ಐಷಾರಾಮಿ ಫ್ಲೈಟ್ ಅಲ್ವಾ? ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
ಪ್ರತಿಭಟನೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹಮದ್, ಮಾಜಿ ಸಂಸದ ಉಗ್ರಪ್ಪ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಯು.ಬಿ ವೆಂಕಟೇಶ್ ಸೇರಿ ನೂರಾರು ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.