ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಕೆಲವೇ ದಿನಗಳು ಬಾಕಿ ಇರುವ ಕಾರಣ ಪಕ್ಷಾಂತರ ಜೋರಾಗಿದೆ. ಒಂದು ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ಬೇರೆ ಪಕ್ಷಕ್ಕೆ ಸೇರುವುದು, ಅಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸುವುದು ಸೇರಿ ಹಲವು ರೀತಿಯಲ್ಲಿ ತಂತ್ರ-ಪ್ರತಿತಂತ್ರಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ವಂಚಿತ ಅನಿಲ್ ಲಾಡ್ ಅವರು ಬೆಂಗಳೂರನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.
ಪದ್ಮನಾಭ ನಗರದಲ್ಲಿರುವ ನಿವಾಸದಲ್ಲಿ ದೇವೇಗೌಡರನ್ನು ಅನಿಲ್ ಲಾಡ್ ಅವರು ಭೇಟಿಯಾಗಿದ್ದು, ಶೀಘ್ರದಲ್ಲಿಯೇ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಮುನ್ನಾ ಭಾಯ್ ಅವರಿಗೆ ಜೆಡಿಎಸ್ ಈಗಾಗಲೇ ಟಿಕೆಟ್ ನೀಡಿದೆ. ಪರಿಸ್ಥಿತಿ ಹೀಗಿರುವ ಮಧ್ಯೆಯೇ, ಅನಿಲ್ ಲಾಡ್ ಅವರು ದೇವೇಗೌಡರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅನಿಲ್ ಲಾಡ್ ಅವರು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಜೆಡಿಎಸ್ ಸೇರ್ಪಡೆ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಎಂದಿದ್ದ ಅನಿಲ್ ಲಾಡ್
ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಅನಿಲ್ ಲಾಡ್ ಘೋಷಣೆ ಮಾಡಿದ್ದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, “25 ಸಾವಿರ ಮತಗಳ ಅಂತರದಿಂದ ಸೋತ ಸಂತೋಷ್ ಲಾಡ್‌ಗೆ ಟಿಕೆಟ್ ನೀಡಿದ್ದಾರೆ. ಆದರೆ, 15 ಸಾವಿರ ಮತಗಳ ಅಂತರದಿಂದ ಸೋತ ನನಗೆ ಟಿಕೆಟ್ ನೀಡಿಲ್ಲ. ಹಾಗಾಗಿ ನಾನು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದರು.
“ಬಳ್ಳಾರಿ ಕಾರ್ಪೊರೇಷನ್ ಕಾಂಗ್ರೆಸ್ ತೆಕ್ಕೆಬರಲು ನಾನೇ ಕಾರಣ. ನಿನ್ನೆ ಮೊನ್ನೆ ಬಂದವರಿಗೆಲ್ಲ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಆದರೆ, ನನಗೆ ಮಾತ್ರ ನೀಡಿಲ್ಲ. ನನಗೆ ಬಿಟ್ಟು ಭರತ್ ರೆಡ್ಡಿ ಅವರಿಗೆ ಟಿಕೆಟ್ ನೀಡಿದ್ದಾರೆ” ಎಂದು ಅಸಮಾಧಾನ ಹೊರಹಾಕಿದ್ದರು. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾದ ಕಾರಣ ಅನಿಲ್ ಲಾಡ್ ನಡೆಯು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Karnataka Election: ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಲಿಂಗಾಯತರ ಮೇಲೆ ಪ್ರೀತಿ: ಸಿಎಂ ಬೊಮ್ಮಾಯಿ