ಬೆಂಗಳೂರು: ವಿಧಾನಸಭಾ ಚುನಾವಣೆ ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡುವ ಮೂಲಕ ಒಂದು ಹಂತದಲ್ಲಿ ಮುಂದಿದೆ. ಆದರೆ, ಎಷ್ಟೇ ಅಳೆದು ತೂಗಿ ಮಾಡಿದರೂ ಪಕ್ಷದಲ್ಲಿ ಬಂಡಾಯದ ಕೂಗು ಕೇಳಿ ಬರುತ್ತಲೇ ಇದೆ. ಗುರುವಾರ (ಏ. 6) ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಉಡುಪಿ ಸೇರಿದಂತೆ ಹಲವು ಕಡೆ ಆಕಾಂಕ್ಷಿಗಳು ಅಸಮಾಧಾನವನ್ನು ಹೊರಹಾಕಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಪಕ್ಷೇತರವಾಗಿ ನಿಲ್ಲುವ ಸಾಧ್ಯತೆ ದಟ್ಟವಾಗಿದೆ.
ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷದ ವಿರುದ್ಧ ರಘು ಆಚಾರ್ ಗುಡುಗು
ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷದ ವಿರುದ್ಧ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಗುಡುಗಿದ್ದಾರೆ. ನಾನು ದುರ್ಗದಿಂದ ಸ್ಪರ್ಧೆ ಮಾಡೋದು ಖಚಿತ. ನಾನು ಏಪ್ರಿಲ್ 17ಕ್ಕೆ ನಾಮಪತ್ರ ಸಲ್ಲಿಸುವುದು ಪಕ್ಕಾ ಎಂದು ಹೇಳುವ ಮೂಲಕ ಚಿತ್ರದುರ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆಯನ್ನು ನೀಡಿದ್ದಾರೆ. ಯಾರೂ ಸೋಲುತ್ತಾರೆ ಎಂದು ಫಲಿತಾಂಶದ ದಿನ ಗೊತ್ತಾಗಲಿದೆ. ವೀರೇಂದ್ರ ಪಪ್ಪಿಗೆ ಒಳ್ಳೇದು ಆಗಲಿ. ನಡು ದಾರಿಯಲ್ಲಿ ನನಗೆ ಕತ್ತು ಕೊಯ್ದು ಬಿಟ್ಟರು ಎಂದು ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: IT Notice: ತಿಂಗಳಿಗೆ 58 ಸಾವಿರ ಸ್ಯಾಲರಿ ಇರುವ ಯುವಕನಿಗೆ 113 ಕೋಟಿ ರೂ. ತೆರಿಗೆ ಕಟ್ಟುವಂತೆ ಐಟಿ ನೋಟಿಸ್!
ಸಿದ್ದರಾಮಯ್ಯ ಅವರು ಎರಡು ಬಾರಿಗೆ ವಿಧಾನ ಪರಿಷತ್ ಸದಸ್ಯ ಆಗೋದು ಬೇಡ. ವಿಧಾನಸಭೆ ಸ್ಪರ್ಧೆ ಮಾಡಿ ಎಂದು ಹೇಳಿದ್ದರು. ಹೀಗೆ ಹೇಳಿಕೊಂಡು ಬಂದು ಅರ್ಧ ದಾರಿಯಲ್ಲಿ ನನ್ನ ಕತ್ತು ಕೊಯ್ದಿದ್ದಾರೆ. ನನಗೆ ಜಾತಿ ಇಲ್ಲವೆಂಬ ಸಣ್ಣ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಈ ಜಿಲ್ಲೆಯ ಜನ ಇದಕ್ಕೆ ಉತ್ತರಿಸುತ್ತಾರೆ. ನನಗೊಬ್ಬನಿಗೆ ಅಲ್ಲ, ಗೋಪಿಕೃಷ್ಣನಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. 197 ಸಣ್ಣ ಸಮುದಾಯಗಳಿಗೆ ಕಾಂಗ್ರೆಸ್ ಒಂದು ಸ್ಥಾನವನ್ನೂ ನೀಡಿಲ್ಲ. ಆ ಸಮುದಾಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗೌರವ ಇದೆಯೋ ಇಲ್ಲವೊ ಗೊತ್ತಿಲ್ಲ. ಸಾಮಾಜಿಕ ನ್ಯಾಯ ಮರೆತು ಕಾಂಗ್ರೆಸ್ ತೀರ್ಮಾನ ತೆಗೆದುಕೊಂಡಿದೆ. ಇಡೀ ರಾಜ್ಯ ಸುತ್ತುತ್ತೇನೆ. ವಿಶ್ವಕರ್ಮ ಸಮಾಜದವರು ಕಾಂಗ್ರೆಸ್‌ಗೆ ಮತ ಹಾಕದಂತೆ ಹೋರಾಟ ಮಾಡುತ್ತೇನೆ. ಮಾರ್ಚ್ 17ರಂದು ಚಿತ್ರದುರ್ಗದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ರಘು ಆಚಾರ್ ತಿಳಿಸಿದರು.
ಚನ್ನಗಿರಿಯಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಗರಂ
ದಾವಣಗೆರೆ: ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಸವರಾಜ್ ಶಿವಗಂಗಾ ಅವರಿಗೆ ಘೋಷಣೆಯಾಗುತ್ತಿದ್ದಂತೆ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಕುಟುಂಬದವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಡ್ನಾಳ್ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಡ್ನಾಳ್ ರಾಜಣ್ಣಗೆ ಟಿಕೆಟ್ ಘೋಷಣೆ ಮಾಡಿ ಹೋಗಿದ್ದರು. ಈ ಬಾರಿ ವಡ್ನಾಳ್ ರಾಜಣ್ಣ ಸಹೋದರನ ಪುತ್ರ ವಡ್ನಾಳ್ ಆಶೋಕ್‌ಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಆದರೆ, ಟಿಕೆಟ್ ಬೇರೆಯವರ ಪಾಲಾಗಿರುವುದು ಈಗ ಕಾಂಗ್ರೆಸ್ ಪಾಳೆಯದಲ್ಲಿ ಆಕ್ರೋಶ ಮಡುಗಟ್ಟಿದೆ.
ಇದನ್ನೂ ಓದಿ: Murder Case: ವೃದ್ಧೆಯನ್ನೂ ಬಿಡದ ಕಾಮ ಪಿಶಾಚಿ; ಕಲ್ಲು ಎತ್ತಿ ಹಾಕಿ ಕೊಂದು ಅತ್ಯಾಚಾರ: ಪಾಪಿ ಸೆರೆ
ಕಿತ್ತೂರಲ್ಲಿ ಹಬೀಬ್ ಶಿಲೇದಾರ್ ಬಂಡಾಯ?
ಬೆಳಗಾವಿ: ಕಿತ್ತೂರು ಕ್ಷೇತ್ರಕ್ಕೆ ಬಾಬಾಸಾಹೇಬ್ ಪಾಟೀಲ್‌ಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಹಬೀಬ್ ಶಿಲೇದಾರ್ ಆಕ್ರೋಶಗೊಂಡಿದ್ದಾರೆ. ಹೈಕಮಾಂಡ್ ಮಾಡಿದ ಎಡವಟ್ಟಿನಿಂದ ಕ್ಷೇತ್ರದಲ್ಲಿ ಪಕ್ಷವು ಸೋಲನ್ನು ಅನುಭವಿಸುತ್ತದೆ ಎಂದ ಹಬೀಬ್ ಹೇಳಿದ್ದಾರೆ. ಈ ಮೂಲಕ ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ. ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿನಯ ಕುಲಕರ್ಣಿ ಮೇಲೆ ಹರಿಹಾಯ್ದಿದ್ದಾರೆ.
ಕುಂದಾಪುರದಲ್ಲಿ ಕೊಳ್ಕಬೈಲು ಕಿಶನ್ ಹೆಗ್ಡೆ ಕೆಂಡ
ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಆ ಪಕ್ಷದ ಹಿರಿಯ ನಾಯಕ, ಸಹಕಾರಿ ಧುರೀಣ ಕೊಳ್ಕಬೈಲು ಕಿಶನ್ ಹೆಗ್ಡೆ ಈಗ ಮುನಿಸಿಕೊಂಡಿದ್ದು, ಪಕ್ಷೇತರವಾಗಿ ಕಣಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ. ಸದ್ಯ ಕಿಶನ್ ಹೆಗ್ಡೆ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.
ಇದನ್ನೂ ಓದಿ: IPL 2023: ಆರ್ಸಿಬಿ ಈ ಬಾರಿಯೂ ಕಪ್ ಗೆಲ್ಲಲ್ಲ; ಎಬಿಡಿ ವಿಲಿಯರ್ಸ್ ಅಚ್ಚರಿಯ ಹೇಳಿಕೆ
ಗಂಗಾವತಿಯಲ್ಲಿ ಎಚ್.ಆರ್. ಶ್ರೀನಾಥ್ ಅಸಮಾಧಾನ
ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದ್ದರಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ್ ತೀವ್ರ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿದೆ. ಮುಂದೆ ಬೆಂಬಲಿಗರ ಸಭೆ ಕರೆದು ತೀರ್ಮಾನ ಮಾಡುತ್ತೇನೆ. ಹೈಕಮಾಂಡ್‌ಗೆ ಇನ್ನೂ ಸಮಯಾವಕಾಶವಿದೆ. ಅಭ್ಯರ್ಥಿ ಹೆಸರನ್ನು ಬದಲಾವಣೆ ಮಾಡಬೇಕು. ಗಂಗಾವತಿ ಬದಲಿಗೆ ರಾಯಚೂರು ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿ ಘೋಷಣೆ ಮಾಡಲಿ. ರಾಯಚೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯ ಮತಗಳು ಸಾಕಷ್ಟಿವೆ. ಹೀಗಾಗಿ ಇಲ್ಲಿ ಇಕ್ಬಾಲ್ ಅನ್ಸಾರಿ ಬದಲಿಗೆ ನನಗೆ ಟಿಕೆಟ್ ಕೊಡಿ ಎಂದು ಶ್ರೀನಾಥ್ ಕೇಳಿದ್ದಾರೆ.
ನಾವು ಮೂಲ ಕಾಂಗ್ರೆಸ್ಸಿಗರು, ನಮ್ಮ ಕಣ ಕಣದಲ್ಲೂ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಕ್ಕೆ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೆ. ಆದರೆ ಎಲ್ಲೋ ಒಂದು ಕಡೆ ತಪ್ಪಾಗಿದೆ. ಇದನ್ನು ಹೈಕಮಾಂಡ್ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಧಾರವಾಡ ಗ್ರಾಮೀಣದಲ್ಲೂ ಬಂಡಾಯ?
ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಇಸ್ಮಾಯಿಲ್ ತಮಟಗಾರ ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿದೆ. ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಅವರು ಶುಕ್ರವಾರ ಧಾರವಾಡಕ್ಕೆ ವಾಪಸ್ ಬರುವ ಸಾಧ್ಯತೆ ಇದೆ. ಧಾರವಾಡ ಜಿಲ್ಲೆಯಲ್ಲಿ ಓರ್ವ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಲು ಅವರು ಒತ್ತಾಯ ಮಾಡಿದ್ದರು. ತನಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈಗ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರು ಶುಕ್ರವಾರ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Karnataka Elections : ಯಾದಗಿರಿಯಲ್ಲಿ ಕಾಂಗ್ರೆಸ್- ಬಿಜೆಪಿ ಸಂಘರ್ಷ; ಕಾರ್ಯಕರ್ತರ ನಡುವೆ ಕಲ್ಲು ತೂರಾಟ, ವಾಹನಗಳು ಜಖಂ
ಶಿರಹಟ್ಟಿಯಲ್ಲಿ ಘೋಷಣೆಗೆ ಮೊದಲೇ ಅಸಮಾಧಾನ
ಗದಗ: ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಆಗುವ ಮೊದಲೇ ಅಲ್ಲಿ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ಘೋಷಣೆ ಮುನ್ನವೇ ಕ್ಷೇತ್ರದಲ್ಲಿ ವಿರೋಧಿ ಅಲೆ ಶುರುವಾಗಿದೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿರುವುದರಿಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ರಾಯಚೂರು ಮೂಲದ ದಲಿತ ಹೋರಾಟಗಾರ ಅಂಬಣ್ಣ ಎಂಬುವರಿಗೆ ಟಿಕೆಟ್ ಕೊಡಲಾಗುವುದು ಎಂಬ ಸುದ್ದಿ ಹರಡಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದ್ದು, “ಗೋ ಬ್ಯಾಕ್ ಅಂಬಣ್ಣ” ಎಂದು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದೆ.