ಶಿವಮೊಗ್ಗ: ನಗರದಲ್ಲಿ ಮಾ.4 ರಂದು ಪಕ್ಷದ ಪ್ರಮುಖರ ಸಭೆ (Congress Sabhe) ನಡೆಯಲಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗಮಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ (ಮಾ.2) ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಲಗಾನ್ ಕಲ್ಯಾಣ ಮಂದಿರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಕಾರ್ಯಕರ್ತರ ಸಭೆಯಲ್ಲ. ಪ್ರಮುಖರ ಸಭೆ ಮಾತ್ರವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಜಿಲ್ಲಾ ಕಾಂಗ್ರೆಸ್ ಪ್ರಮುಖರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆಗೂ ಅಂದು ಸುರ್ಜೇವಾಲ ಚಾಲನೆ ನೀಡಲಿದ್ದಾರೆ. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಪ್ರತಿ ಮಹಿಳೆಯ ಖಾತೆಗೆ ತಿಂಗಳಿಗೆ 2000 ರೂಪಾಯಿ ಕೊಡುವ ಘೋಷಣೆಯನ್ನು ಪಕ್ಷ ಈಗಾಗಲೇ ಮಾಡಿದೆ. ಅದನ್ನೇ ಗ್ಯಾರಂಟಿ ಕಾರ್ಡ್‌ನಲ್ಲಿ ತಿಳಿಸಲಾಗಿದೆ. ಪ್ರತಿ ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ಕೊಡಲಾಗುವುದು ಎಂದರು.
ಇದನ್ನೂ ಓದಿ: Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ಈಗ ಮಾ.10 ಕೊನೆಯ ದಿನ
ಬೆಲೆ ಏರಿಕೆಯಿಂದಾಗಿ ಜನರು ಜೀವನ ಮಾಡುವುದೇ ಕಷ್ಟವಾಗಿದೆ. ಕೇಂದ್ರದಿಂದ ದಿನನಿತ್ಯ ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್‌ಟಿ ಸಂಗ್ರಹ ಮಾಡಿರುವುದೇ ಇವರ ಸಾಧನೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ನಿಂದ 77 ಡಾಲರ್‌ಗೆ ಇಳಿದಿದೆ. ಆದರೂ ಇಲ್ಲಿ ಗ್ಯಾಸ್ ಬೆಲೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಮಾಡುತ್ತಿಲ್ಲ ಎಂದು ಸುಂದರೇಶ್ ದೂರಿದ್ದಾರೆ.