ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಲಾಭ ಪಡೆಯಲು ಬಿಜೆಪಿ ಸರ್ಕಾರ ಮೀಸಲಾತಿ ಪರಿಷ್ಕರಣೆ (Muslim quota issue) ಮಾಡಿದ್ದು, ಮೀಸಲಾತಿ ಹೆಚ್ಚಳದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳಲು ವಿಫಲವಾಗಿದೆ. ಅಷ್ಟೇ ಅಲ್ಲದೆ, ತನ್ನ ಆದೇಶಕ್ಕೆ ತಾನೇ ತಡೆಯಾಜ್ಞೆ ಕೊಟ್ಟಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ (gourav vallabh) ಆರೋಪಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪರವಾಗಿ ಬಿಜೆಪಿ ಸರ್ಕಾರಕ್ಕೆ 9 ಪ್ರಶ್ನೆಗಳನ್ನು ಕೇಳಿ ಉತ್ತರಿಸುವಂತೆ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀಸಲಾತಿ ಹೆಸರಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಮೋಸ ಬಯಲಾಗಿದೆ. ಬೊಮ್ಮಾಯಿ ಸರ್ಕಾರ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒಳ ಮೀಸಲಾತಿ ವಿಚಾರವಾಗಿ ತನ್ನ ಆದೇಶದ ಕುರಿತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಜತೆಗೆ ಶೇ.4 ಮೀಸಲಾತಿ ರದ್ದು ಮಾಡಿ ಅಲ್ಪಸಂಖ್ಯಾತರನ್ನು ಮೋಸ ಮಾಡುವ ಬಿಜೆಪಿ ತಂತ್ರಗಾರಿಕೆ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಮುಸ್ಲಿಮರಿಗಿದ್ದ ಶೇ.4 ಮೀಸಲಾತಿ ತೆಗೆದು ಆರ್ಥಿಕ ದುರ್ಬಲ ವರ್ಗಗಳಿಗೆ ವರ್ಗಾಯಿಸುವ ಆದೇಶವನ್ನು ಮೇ 9ರವರೆಗೆ ಜಾರಿಗೊಳಿಸದಂತೆ ಮಂಗಳವಾರ (ಏ.25) ಸುಪ್ರೀಂ ಕೋರ್ಟ್ ಆದೇಶಿಸಿದೆ. ಹಾಗೆಯೇ ಏಪ್ರಿಲ್ 18 ಹಾಗೂ ಏಪ್ರಿಲ್ 25ರಂದು ನಡೆದ ವಿಚಾರಣೆ ವೇಳೆ ಮೀಸಲಾತಿ ಆದೇಶಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರ ವಿಫಲವಾಗಿತ್ತು. ಆ ಮೂಲಕ ಬಿಜೆಪಿ ಸರ್ಕಾರ ಕ್ಷಮಿಸಲಾರದ ತಪ್ಪು ಮಾಡಿದೆ. ಆಮೂಲಕ ಬಿಜೆಪಿ ಸರ್ಕಾರ ಮೀಸಲಾತಿ ಹೆಸರಿನಲ್ಲಿ ಮಾಡುತ್ತಿರುವ ಮೋಸ ಮುಂದುವರಿದಿದ್ದು, ಕಾಂಗ್ರೆಸ್ ಪಕ್ಷ ಹೇಳಿದ್ದು ನಿಜವಾಗಿದೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ | Muslim Quota Issue : ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರಿಂ ಕೋರ್ಟ್ ತಡೆ
ಮೀಸಲಾತಿ ಆದೇಶವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲಾಗದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿರುವ ಅವರು, 40% ಕಮಿಷನ್ ಹಾಗೂ ವಿಫಲವಾದ ಡಬಲ್ ಇಂಜಿನ್ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ 9 ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುವಂತೆ ಸವಾಲು ಹಾಕಿದ್ದಾರೆ.
- ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ರಾಜ್ಯದ 6.5 ಕೋಟಿ ಜನರಿಗೆ ಮೋಸ ಮಾಡಿರುವುದೇಕೆ?
- ಸುಪ್ರೀಂ ಕೋರ್ಟ್‌ನಲ್ಲಿ ಬಿಜೆಪಿ ಸರ್ಕಾರ ತನ್ನದೇ ಆದೇಶವನ್ನು ಸಮರ್ಥಿಸಿಕೊಳ್ಳದಿರುವುದೇಕೆ?
- ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಸರ್ಕಾರ ಅಫಿಡವಿಟ್ ಸಲ್ಲಿಸುತ್ತಿಲ್ಲ ಏಕೆ?
- ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಮೋದಿ ಸರ್ಕಾರ ಮಾರ್ಚ್ 2023ರ 14ರಂದು ಸಂಸತ್ತಿನಲ್ಲಿ ತಿಳಿಸಿದ್ದು ಯಾಕೆ?
- 40% ಸರ್ಕಾರ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಹೆಸರಿನಲ್ಲಿ ಮೋಸ ಮಾಡುತ್ತಿರುವುದೇಕೆ?
- ಕೆಟ್ಟು ನಿಂತಿರುವ ಡಬಲ್ ಇಂಜಿನ್ ಸರ್ಕಾರಗಳು ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರ ಬೇಡಿಕೆ ಈಡೇರಿಸಲು ಮೀಸಲಾತಿ ಮಿತಿಯನ್ನು ಶೇ.50ರಿಂದ ಹೆಚ್ಚಿಗೆ ವಿಸ್ತರಣೆ ಮಾಡುತ್ತಿಲ್ಲ ಯಾಕೆ?
- 40% ಸರ್ಕಾರ ತನ್ನ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಯಾಕೆ ತಡೆ ಹಿಡಿದಿದೆ?
- ಒಡೆದು ಆಳುವ ರಾಜಕಾರಣಕ್ಕಾಗಿ ಬೊಮ್ಮಾಯಿ ಹಾಗೂ ಮೋದಿ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿರುವುದೇಕೆ?
- ಮೀಸಲಾತಿ ಹೆಸರಿನಲ್ಲಿ ಬಿಜೆಪಿಯ ದ್ರೋಹಕ್ಕೆ ಪ್ರಧಾನಮಂತ್ರಿಗಳು ಒಕ್ಕಲಿಗರು, ಲಿಂಗಾಯತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೆ ಬಹಿರಂಗವಾಗಿ ಕ್ಷಮೆ ಕೇಳುವರೇ?