ಬೆಂಗಳೂರು: ಬಿಜೆಪಿ ಎಂದರೆ ಸಿದ್ಧಾಂತವಿಲ್ಲದ ಆತ್ಮವಂಚಕರ ಕೂಟ. ಮಾಂಸ ತಿಂದು ದೇವಾಲಯಕ್ಕೆ ಹೋಗುವುದು ಅಪರಾಧ ಎನ್ನುವ ಬಿಜೆಪಿ ಸಿ.ಟಿ.ರವಿ ಬಗ್ಗೆ ತುಟಿ ಬಿಚ್ಚುವುದಿಲ್ಲ. ಈ ಡಬಲ್ ಸ್ಟ್ಯಾಂಡರ್ಡ್ ಬಿಜೆಪಿಗೆ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಂಸ ತಿಂದು ದೇವಾಲಯಕ್ಕೆ ಹೋಗಿರುವ ವಿಚಾರಕ್ಕೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಗೋಮಾತೆ ಎನ್ನುವ ಇದೇ ಬಿಜೆಪಿ ಕೇರಳ, ಗೋವಾ, ಮೇಘಾಲಯದ ಅವರದೇ ಪಕ್ಷದವರ ಗೋಮಾಂಸ ಸೇವನೆ ಬಗ್ಗೆ ಮಾತನಾಡುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.
ಬಿಜೆಪಿಯವರು ಹೇಳೋದೊಂದು ಮಾಡೋದೊಂದು: ಆರ್.ಧ್ರುವನಾರಾಯಣ್
ಕೊಡಗು: ಸಿ.ಟಿ ರವಿ, ನಳಿನ್ ಕುಮಾರ್ ಕಟೀಲ್, ಅಶ್ವತ್ಥನಾರಾಯಣ ಇವರದ್ದು ಎಲುಬಿಲ್ಲದ ನಾಲಿಗೆ. ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ಭಾರತೀಯ ಜನತಾ ಪಾರ್ಟಿಯ ನಾಯಕರಿಗೆ ಯಾವುದೇ ನೈತಿಕತೆ ಇಲ್ಲ. ಅವರು ಮಾತನ್ನು ಕೃತಿಯಲ್ಲಿ ತೋರಿಸಬೇಕು, ಅವರು ಹೇಳುವುದೊಂದು ಮಾಡುವುದೊಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಕಿಡಿಕಾರಿದ್ದಾರೆ.
ಇದನ್ನೂ ಓದಿ | Prajadwani Yatra: ಬಿಜೆಪಿಯವರು ಹೇಡಿಗಳು, ಸೈದ್ಧಾಂತಿಕ, ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ: ಸಿದ್ದರಾಮಯ್ಯ
ಮಾಂಸ ತಿಂದು ದೇವಸ್ಥಾನ ಪ್ರವೇಶಿಸಿದ ಸಿ.ಟಿ. ರವಿ ವಿಚಾರಕ್ಕೆ ವಿರಾಜಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರ ಸಂಸ್ಕೃತಿ ಸಿ.ಟಿ.ರವಿ ವಿಚಾರದಲ್ಲಿ ತೋರಿಸುತ್ತದೆ. ಸಿದ್ದರಾಮಯ್ಯ ದೇವಾಲಯಕ್ಕೆ ಹೋದಾಗ ಟೀಕಿಸುವ ಇವರು ಈಗ ಮಾಡಿರುವುದು ಏನು? ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ಉತ್ತರ ಕೊಡುತ್ತಾರೆ. ಸಿ.ಟಿ.ರವಿ ಆಪ್ತರೆ ಇದೀಗ ಪಕ್ಷದಿಂದ ದೂರಹೋಗಿದ್ದಾರೆ. ಮುಂದಿನ ಚುನವಣೆಯಲ್ಲಿ ಜನರೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.