Site icon Vistara News

Congress- SDPI link : 2018ರಲ್ಲಿ ಕಾಂಗ್ರೆಸ್‌, ಎಸ್‌ಡಿಪಿಐ ಒಳ ಒಪ್ಪಂದ: SDPI ನಾಯಕನ ಸ್ಫೋಟಕ ಹೇಳಿಕೆ

Elyas tumbe

#image_title

ಬಂಟ್ವಾಳ: 2018ರ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಹಿರಿಯ ಕಾಂಗ್ರೆಸ್‌ ನಾಯಕ ಬೇಡಿಕೆ ಮೇರೆಗೆ ಎಸ್‌ಡಿಪಿಐ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದುಕೊಂಡಿತ್ತು ಎಂದು ಎಸ್‌ಡಿಪಿಐ ಮುಖಂಡರೊಬ್ಬರು ಬಹಿರಂಗವಾಗಿ ಹೇಳಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ನಡುವೆ ಒಳಒಪ್ಪಂದವಿದೆ (Congress- SDPI link) ಎಂಬ ಬಿಜೆಪಿ ಆಪಾದನೆಗೆ ಪುಷ್ಟಿ ಸಿಕ್ಕಂತಾಗಿದೆ. ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ತಾವೂ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದಿದ್ದು ನಿಜ ಎಂದಿದ್ದಾರೆ ಈ ನಾಯಕ.

ಎಸ್‌ಡಿಪಿಐ ನಾಯಕರೂ, ಈ ಬಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಇಲ್ಯಾಸ್‌ ತುಂಬೆ ಅವರು ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್‌ ನಾಯಕರು ಆಂತರಿಕ ಮೈತ್ರಿಗೆ ಮುಂದಾಗಿದ್ದರು ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ʻʻಈ ಹಿಂದೆ ನಾವು ರಾಜಕೀಯವಾದ ಪ್ರೌಢತೆ ಇಲ್ಲದೆ ತಪ್ಪಾಗಿ ಕಾಂಗ್ರೆಸ್‌ ಜತೆ ಆಂತರಿಕ ಒಪ್ಪಂದ ಮಾಡಿಕೊಂಡಿದ್ದೆವು. ಹಾಕಿದ ನಾಮಪತ್ರಗಳನ್ನು ಹಿಂದೆ ಪಡೆದವು. ಇದೊಂದು ಪ್ರಮಾದವಾಗಿತ್ತುʼʼ ಎಂದಿದ್ದಾರೆ ಇಲ್ಯಾಸ್‌ ತುಂಬೆ.

ಈ ಬಾರಿ ಆ ರೀತಿ ಆಗುವುದಿಲ್ಲ. ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಸ್‌ಡಿಪಿಐ ಈಗ ಘೋಷಿಸಿರುವ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಯಾವ ಕ್ಷೇತ್ರದಿಂದಲೂ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು.

25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಬಯಸಿದ್ದೆವು

2018ರ ವಿಧಾನಸಭಾ ಚುನಾವಣೆಯಲ್ಲಿ ನಾವು 25 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಬಯಸಿದ್ದೆವು. ಆದರೆ, ಕೊನೆಯ ಹಂತದಲ್ಲಿ ಹಿರಿಯ ಕಾಂಗ್ರೆಸ್‌ ನಾಯಕರು ನಮ್ಮನ್ನು ಭೇಟಿಯಾಗಿ, ಬಿಜೆಪಿಯನ್ನು ಸೋಲಿಸುವುದಕ್ಕಾಗಿ ನಾವೊಂದು ಒಪ್ಪಂದ ಮಾಡಿಕೊಳ್ಳೋಣ ಎಂದು ಅಂಗಲಾಚಿದರು. ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡುವಂತೆಯೂ ಅಲ್ಲಿ ಕಾಂಗ್ರೆಸ್‌ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ ಹೇಳಿದ್ದರು ಎಂದು ಇಲ್ಯಾಸ್‌ ತುಂಬೆ ಹೇಳಿದ್ದಾರೆ.

ಈ ಬಾರಿ ದಕ್ಷಿಣ ಕನ್ನಡದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇವುಗಳ ಪೈಕಿ ತ್ರಿಕೋನ ಸ್ಪರ್ಧೆ ನಡೆಯಲಿರುವ ಬಂಟ್ವಾಳ, ಬೆಳ್ತಂಗಡಿ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಪಕ್ಷವೇ ಗೆಲ್ಲಲಿದೆ ಎಂದು ಇಲ್ಯಾಸ್‌ ಹೇಳಿದರು.

ಕಾಂಗ್ರೆಸ್‌ ಏನು ಹೇಳುತ್ತದೆ?

ಇಲ್ಯಾಸ್‌ ತುಂಬೆ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಸಾರಾಸಗಟಾಗಿ ತಳ್ಳಿಹಾಕಿದೆ. ಕಾಂಗ್ರೆಸ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಕೆ. ಹರೀಶ್‌ ಕುಮಾರ್‌ ಅವರು, ʻʻ2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಯಾವುದೇ ರಾಜಕೀಯ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿರಲಿಲ್ಲ. ನಿಜವೆಂದರೆ ಎಸ್‌ಡಿಪಿಐಯನ್ನು ಬೆಂಬಲಿಸುತ್ತಿರುವುದು ಬಿಜೆಪಿ. ಮತ ವಿಭಜನೆಗಾಗಿ ಬಿಜೆಪಿ ಈ ತಂತ್ರವನ್ನು ಅನುಸರಿಸುತ್ತಿದೆ. ಎಸ್‌ಡಿಪಿಐ ಮತ್ತು ಬಿಜೆಪಿ ಎರಡೂ ಕೋಮುವಾದಿ ಪಕ್ಷಗಳಾಗಿದ್ದು, ಸಮಾನ ಮನಸ್ಕ ಪಕ್ಷಗಳಾಗಿವೆʼʼ ಎಂದು ಆರೋಪಿಸಿದರು.

ಇದನ್ನೂ ಓದಿ : SDPI office raid : ಎಸ್‌ಡಿಪಿಐ ಕಚೇರಿ ದಾಳಿಗೆ ಕೇಂದ್ರ ಸರ್ಕಾರದ ನಿರ್ದೇಶನವಿತ್ತೇ?: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

Exit mobile version