ಬೆಂಗಳೂರು/ರಾಮನಗರ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರ ಗೆಲ್ಲದಿದ್ದರೆ ಐದು ಗ್ಯಾರಂಟಿ ರದ್ದು (Congress Guarantee) ಎಂದು ಮಾಗಡಿ ಶಾಸಕರು ಹೇಳಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ಇದು ಬ್ಲಾಕ್ ಮೇಲ್ ರಾಜಕಾರಣ. ಈ ಗ್ಯಾರಂಟಿಗಳು ಲೋಕಸಭೆ ಚುನಾವಣೆವರೆಗೆ ಮಾತ್ರ ಇರುತ್ತವೆ. ಪಕ್ಷದ ಮಟ್ಟದಲ್ಲಿ ಅಗಿರುವ ಚರ್ಚೆ ಬಗ್ಗೆ ಈ ವ್ಯಕ್ತಿ ಜನರ ಎದುರು ಹೇಳಿದ್ದಾರೆ. ಇವರೆಲ್ಲ ಇದನ್ನೇ ಚರ್ಚೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಮಾಗಡಿ ಶಾಸಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಈ ಹೇಳಿಕೆಯನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಇದು ಬ್ಲಾಕ್ ಮೇಲ್ ರಾಜರಾರಣ ಎಂಬುದರಲ್ಲಿ ಸಂಶಯವಿಲ್ಲ. ಅವರ ಮಾತಿಗೆ ಪ್ರಾಶಸ್ತ್ಯ ಕೊಡುವುದು ಅನಾವಶ್ಯಕ ಎಂದು ಹೇಳಿದರು.
ಚುನಾವಣೆ ವೇಳೆ 3 ಸಾವಿರ, 5 ಸಾವಿರ ಬೆಲೆಯ ಉಡುಗೊರೆ ಕೊಡುತ್ತೇವೆ ಎಂದು ಹೇಳಿ ಗಿಫ್ಟ್ ಕೂಪನ್ ಹಂಚಿ ಚುನಾವಣೆಯಲ್ಲಿ ಗೆದ್ದರು. ಅಮಾಯಕ ಹೆಣ್ಣುಮಕ್ಕಳನ್ನು ನಂಬಿಸಿ ಮೋಸ ಮಾಡಿದರು. ಆ ಗಿಫ್ಟ್ ಕಾರ್ಡ್ ಕೊಟ್ಟು ಜನರನ್ನು ವಂಚಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳೂ ಹಾಗೆಯೇ ಎಂದು ಆರೋಪ ಮಾಡಿದರು.
ಇದನ್ನೂ ಓದಿ | Budget 2024: ಲೋಕಸಭೆ ಚುನಾವಣೆ ಪ್ರೇರಿತ ಅಲ್ಲ; ಅಭಿವೃದ್ಧಿಪರ ಅಭೂತಪೂರ್ವ ಬಜೆಟ್ ಎಂದ ಜೋಶಿ
ಪಾರ್ಲಿಮೆಂಟ್ ಚುನಾವಣೆವರೆಗೂ ಗ್ಯಾರಂಟಿ ಕೊಡೋಣ, ಬಳಿಕ ನಿಲ್ಲಿಸೋಣ ಎಂಬ ಚರ್ಚೆ ಆಗಿದೆ. ಅವರ ಒಳಗಡೆಯ ಚರ್ಚೆ ಇಲ್ಲಿ ಬಯಲಾಗಿದೆ. ಪಕ್ಷದ ರಹಸ್ಯ ರಿವೀಲ್ ಆಗಿದೆ ಎಂದ ಅವರು, ಸಮರ್ಪಕವಾಗಿ ಗ್ಯಾರಂಟಿ ಕೊಡಲು ಅವಕಾಶ ಇದೆ. ಅದೇನು ಅಂತಹ ದೊಡ್ಡ ಕಾರ್ಯಕ್ರಮ ಅಲ್ಲ, ಕೊಡಲು ಸಮಸ್ಯೆಯೂ ಇಲ್ಲ. ಸರಿಯಾದ ಮಾರ್ಗದಲ್ಲಿ ಹೋಗಿದ್ದಿದ್ದರೆ ಈ ಐದು ಗ್ಯಾರಂಟಿ ಕೊಟ್ಟು, ರಾಜ್ಯದ ಅಭಿವೃದ್ಧಿ ಸಹ ಮಾಡಬಹುದಿತ್ತು. ಅದು ಇವರ ತಪ್ಪುಗಳಿಂದ ಹೀಗೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಬಿಜೆಪಿಯ ಅಕ್ಷತೆಗೆ ಜನರು ಮತ ಹಾಕುವುದಾದರೆ ಅದನ್ನು ಕಾಂಗ್ರೆಸ್ನವರೂ ಮಾಡಲಿ. ಬೇಡ ಎಂದವರು ಯಾರು ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ ಮಾಜಿ ಸಿಎಂ, ಅವರ ಅಕ್ಷತೆಗೆ ಜನ ಓಟ್ ಹಾಕಿದರೆ ನಿಮ್ಮ ಅಕ್ಷತೆಗೆ ಜನ ಓಟ್ ಹಾಕಲ್ವಾ? ನೀವೂ ಒಂದು ಪ್ರಯೋಗ ಮಾಡಿ ಎಂದರು.
ಇಡೀ ಬೆಟ್ಟವನ್ನೆ ಅಭಿವೃದ್ಧಿ ಮಾಡಲಿ
ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗೆ ಸ್ವಾಗತ. 20 ಎಕರೆಯಲ್ಲಿ ಅಲ್ಲ 100 ಎಕರೆಯಲ್ಲಿ ರಾಮಮಂದಿರ ಕಟ್ಟಿ, ನಿಮಗೆ ನನ್ನ ಬೆಂಬಲ ಇದೆ. ಇಡೀ ಬೆಟ್ಟವನ್ನೆಲ್ಲಾ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಿ ಎಂದು ರಾಮದೇವರ ಬೆಟ್ಟ ಅಭಿವೃದ್ಧಿ ಬಗ್ಗೆ ಹೇಳಿದರು.
ಲೋಕಸಭೆ ಚುನಾವಣೆವರೆಗೂ ಇದನ್ನು ಹೇಳ್ತಾರೆ ಅಷ್ಟೇ ಇವರು. ಹಾರೋಬೆಲೆಯಲ್ಲಿ ಇವರು ಕಟ್ಟಿರೋದು ಏನು? ಯೇಸುಕ್ರಿಸ್ತ ಪ್ರತಿಮೆಯನ್ನು ಯಾಕೆ ಕಟ್ಟಿದ್ದಾರೆ ಅಲ್ಲಿ? ಅಲ್ಲಿ ಚರ್ಚ್ ಒಳಗೆ ಬಹಳ ವರ್ಷ ಏನಿಟ್ಟಿದ್ದರು? ಇದೆಲ್ಲಾ ಗೊತ್ತಿಲ್ಲದೇ ಇರೋದಾ? ಚರ್ಚ್ ಕಟ್ಟಿದ್ದು ಯೇಸು ಮೇಲಿನ ಭಕ್ತಿಗಲ್ಲ. ಇದೆಲ್ಲಾ ನಾನು ಕಾಣದೇ ಇರೋದಾ? ಎಂದು ಅವರು ವ್ಯಂಗ್ಯವಾಡಿದರು.
ಇದನ್ನೂ ಓದಿ | Budget 2024: ಕೃಷಿ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಇದು ಬೆಸ್ಟ್ ಬಜೆಟ್: ಎಚ್.ಡಿ. ಕುಮಾರಸ್ವಾಮಿ
ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರಿಗೆ ಭಯ ತಂದಿದೆ. ಇವರು ಏನೇ ತಿಪ್ಪರಲಾಗ ಹಾಕಿದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲ ಎನ್ಡಿಎ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.