ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಅಧಿಕಾರಿಗಳ ತನಿಖೆ ಹಿಂದೆ ಷಡ್ಯಂತ್ರವಿದೆ. ಗೃಹ ಇಲಾಖೆ ಅಧಿಕಾರಿಗಳ ನಡೆ, ದೂರು ನೀಡಿರುವ ಗುತ್ತಿಗೆದಾರರ ಸಂಘವನ್ನು ಬೆದರಿಸುವ ಹಾಗೂ ಭ್ರಷ್ಟ ಸಚಿವರನ್ನು ರಕ್ಷಣೆ ಮಾಡುವ ಪ್ರಯತ್ನದಂತಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40% ಕಮಿಷನ್ ವಿಚಾರಣೆ ಮಾಡಲು ಬಂದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ದಾಖಲೆ ಸಲ್ಲಿಸುವಂತೆ ಕೇವಲ ಮೌಖಿಕ ರೂಪದಲ್ಲಿ ಸೂಚನೆ ನೀಡಿರುವುದು ಏಕೆ? ಲಿಖಿತ ರೂಪದಲ್ಲಿ ನೊಟೀಸ್ ನೀಡಿಲ್ಲ ಏಕೆ? ಕೆಂಪಣ್ಣ ದೂರು ನೀಡಿದ್ದು, ಪ್ರಧಾನಿ ಕಾರ್ಯಾಲಯಕ್ಕೆ, ಆದರೆ ಗೃಹ ಇಲಾಖೆ ತನಿಖೆಗೆ ಮುಂದಾಗಿದೆ.
ಪ್ರಧಾನಿ ಕಾರ್ಯಾಲಯದಿಂದ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಸೂಚನೆ ರವಾನೆಯಾಗಿದೆಯೇ? ಈ ಬಗ್ಗೆ ಪ್ರಧಾನಿ ಕಾರ್ಯಾಲಯವಾಗಲಿ, ಗೃಹ ಇಲಾಖೆಯಾಗಲಿ ಏಕೆ ಸ್ಪಷ್ಟನೆ ನೀಡಿಲ್ಲ? ಎಂದು ಪ್ರಶ್ನಿಸಿದರು.
ಗೃಹ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಯದಂತೆ ಈ ಪ್ರಕರಣದ ಸಾಕ್ಷ್ಯಗಳನ್ನು ಕಲೆಹಾಕಲು ಪ್ರಯತ್ನಿಸಿದ್ದು ಏಕೆ ಎಂದು ರಮೇಶ್ ಬಾಬು ಪ್ರಶ್ನಿಸಿದರು. ಕೆಂಪಣ್ಣ ಅವರ ದೂರಿನ ಅನ್ವಯ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಕಳೆದ ವರ್ಷ ನವೆಂಬರ್ 25ರಂದು ಪತ್ರ ಬರೆದು, 2 ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವುದು, 50 ಕೋಟಿಗೂ ಮೇಲ್ಪಟ್ಟ ಕಾಮಗಾರಿಗಳನ್ನು ನೀಡಲು ಮಾನದಂಡ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ನಡೆದಿರುವ ಎಲ್ಲ ಕಾಮಗಾರಿಗಳ ಪರಿಶೀಲಿಸಿ ಅಕ್ರಮ ನಡೆದಿದ್ದರೆ ತನಿಖೆ ನಡೆಸಬೇಕು ಎಂದು ಸೂಚಿಸಿರುತ್ತಾರೆ. ಆದರೆ ಮುಖ್ಯಮಂತ್ರಿಗಳು ಗುತ್ತಿಗೆದಾರರ ಸಂಘದ ಜತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ | ವಿಧಾನಸಭೆ ಚುನಾವಣೆ ತಯಾರಿ ಆರಂಭಿಸಿದ ಕಾಂಗ್ರೆಸ್: ನವ ದೆಹಲಿಯಲ್ಲಿ ರಾಹುಲ್ ʼಸಂಧಾನʼ ಸಭೆ
ಪ್ರಧಾನಿ ಬೆಂಗಳೂರು ಹಾಗೂ ಮೈಸೂರು ಕಾರ್ಯಕ್ರಮಗಳಿಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದರು. ಬೆಂಗಳೂರಿನಲ್ಲಿ ಅವರ ಭೇಟಿಗೆ ನಗರ ಶೃಂಗಾರಕ್ಕೆ 24 ಕೋಟಿ ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಒಬ್ಬ ಗುತ್ತಿಗೆದಾರರಿಗೆ 11.5 ಕೋಟಿ ರೂ. ಪಾವತಿಸಿ ಕಳಪೆ ಕಾಮಗಾರಿ ನಡೆದಿದೆ. ಈ ವಿಚಾರವಾಗಿ ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ಕೇಳಿದ ನಂತರ ಅವರಿಗೆ 3 ಲಕ್ಷ ರೂ. ದಂಡವನ್ನು ವಿಧಿಸಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಬೆಂಗಳೂರಿನ ಸಂಪುಟ ಸಚಿವರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಳ್ಳಲು ಈ ಸರ್ಕಾರಕ್ಕೆ ಯಾಕೆ ಶಕ್ತಿ ಇಲ್ಲ? ಎಂದು ಕಿಡಿಕಾರಿದರು.
ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಸರ್ಕಾರದ ಮೇಲೆ ಬಿಟ್ ಕಾಯಿನ್, ಪಿಎಸ್ ಐ ನೇಮಕಾತಿ, ನೀರಾವರಿ ಯೋಜನೆ, ಈಶ್ವರಪ್ಪನವರ 40% ಕಮಿಷನ್, ಬೇರೆ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಇದ್ಯಾವುದರ ಮೇಲೆ ಸಮಗ್ರವಾದ ತನಿಖೆಯಾಗಿಲ್ಲ. ಪಿಎಸ್‌ಐ ಹಗರಣದಲ್ಲಿ ಸಣ್ಣ ಪುಟ್ಟ ಅಧಿಕಾರಿಗಳ ಬಂಧನವಾಗಿದೆಯೇ ಹೊರತು ದೊಡ್ಡ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲ ವಿಚಾರದಲ್ಲಿ ಬೊಮ್ಮಾಯಿ ಅವರು ಪಲಾಯನ ವಾದ ಮಾಡುತ್ತಿರುವುದೇಕೆ? ಎಂದರು.
ಮೆಟ್ರೋದಲ್ಲಿ ಸಾರ್ವಕರ್ ಜಾಹೀರಾತು ಬೇಡ
ಮೆಟ್ರೋ ರೈಲುಗಳಲ್ಲಿ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಪ್ರಯಾಣ ಮಾಡುವ ಅವಧಿಯಲ್ಲಿ ಸಾರ್ವಕರ್ ಅವರ ವಿಚಾರದ ಬಗ್ಗೆ ಜಾಹೀರಾತು ನೀಡಲಾಗುತ್ತಿದೆ. ಈ ಹಿಂದೆ ಮೆಟ್ರೋದವರು ನಾಮಫಲಕದಲ್ಲಿ ಹಿಂದಿ ಹೇರಿಕೆ ಮಾಡಲು ಮುಂದಾದಾಗ ಕನ್ನಡಿಗರು ಹೋರಾಟದ ನಂತರ ಕನ್ನಡ ಅಳವಡಿಸಿದ್ದರು. ಈಗ ಮತ್ತೆ ಅದೇ ರೀತಿಯ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ರಾಷ್ಟ್ರಪಿತ ಮಹಾತ್ಮ ಗಾಂಧಿ, ನೆಹರೂ, ಅಂಬೇಡ್ಕರ್, ಬಸವಣ್ಣ ಅವರ ವಿಚಾರವನ್ನು ತಿಳಿಸದೇ ಸಾರ್ವಕರ್ ಅವರ ಕುರಿತು ಜಾಹೀರಾತು ನೀಡುತ್ತಿರುವುದು ಸರಿಯಲ್ಲ. ಕೂಡಲೇ ಮೆಟ್ರೋ ಅಧಿಕಾರಿಗಳು ಈ ಜಾಹೀರಾತನ್ನು ತೆಗೆಯಬೇಕು ಎಂದರು. ಕಾನೂನು ವಿಭಾಗದ ಉಪಾಧ್ಯಕ್ಷರಾದ ದಿವಾಕರ್, ಮಾಧ್ಯಮ ವಿಭಾಗದ ಸಂಯೋಜಕರಾದ ರಾಮಚಂದ್ರಪ್ಪ, ಜಿ.ಸಿ ರಾಜುಗೌಡ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ | ನವ ದೆಹಲಿಯಲ್ಲಿ 2ನೇ ದಿನವೂ ಮುಂದುವರಿದ ಕಾಂಗ್ರೆಸ್ ʼಕಾರ್ಯತಂತ್ರʼ ಸಭೆ