ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬದಲಾವಣೆ ಇಲ್ಲ. ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ, ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ಕಾಂಗ್ರೆಸ್ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ವಿಷಯದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದಲ್ಲಿನ ಗೊಂದಲವನ್ನು ಮರೆಮಾಚಲು ಕಾಂಗ್ರೆಸ್ ಈ ರೀತಿಯ ಟ್ವೀಟ್ ಮಾಡಿ ಸುದ್ದಿ ಹಬ್ಬಿಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಹುಟ್ಟು ಹಬ್ಬದ ನಂತರ ಕಾಂಗ್ರೆಸ್ ಒಡೆದಮನೆಯಾಗಿದೆ. ಸ್ವತಃ ಕೋಳಿವಾಡರಂತಹ ಹಿರಿಯ ನಾಯಕರೇ ಸಿದ್ದರಾಮಯ್ಯನವರನ್ನು ಬೈಯುತ್ತಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯದಲ್ಲಿ ಪಕ್ಷ ಗೊಂದಲದ ಗೂಡಾಗಿದ್ದು, ಪಕ್ಷದ ಆಂತರಿಕ ವಿಚಾರ ಮುಚ್ಚಿಡುವುದಕ್ಕೋಸ್ಕರ ಮೂರನೇ ಸಿಎಂ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಅಶೋಕ್ ಆಕ್ರೋಶ
ಬೆಂಗಳೂರು: ಕಾಂಗ್ರೆಸ್ ಬಿಜೆಪಿಯಲ್ಲಿ ಮೂರನೇ ಸಿಎಂ ಬರಲಿದ್ದಾರೆ ಎಂದು ಟ್ವೀಟ್ ಮಾಡಿರುವುದು ಹಾಸ್ಯಾಸ್ಪದ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಗಲೂ ಸಿಎಂ ಮುಂದೇನೂ ಸಿಎಂ ಆಗಿರಲಿದ್ದಾರೆ. ಮುಂದಿನ ಚುನಾವಣೆ ನಂತರವೂ ಕೂಡ ಅವರೇ ಸಿಎಂ ಆಗಿರುತ್ತಾರೆ. ಪಕ್ಷದ ನಾಯಕ ಅಮಿತ್ ಶಾ ಇತ್ತೀಚಿಗೆ ರಾಜ್ಯಕ್ಕೆ ಬಂದಾಗ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಕ್ಷದಲ್ಲಿನ ಒಳಜಗಳ ಮುಚ್ಚಿಕೊಳ್ಳಲು ಕಾಂಗ್ರೆಸ್ ಈ ರೀತಿಯ ಟ್ವೀಟ್ ಮಾಡುತ್ತಿದೆ. ಈ ತರಹದ ಸುಳ್ಳು ಸುದ್ದಿ ಹಬ್ಬಿಸುವುದು ಕಾಂಗ್ರೆಸ್ ಅಭ್ಯಾಸವಾಗಿದೆ. ಮೋದಿ ಹಾಗೂ ಅಮಿತ್ ಶಾ ಇರುವವರಿಗೂ ದೇಶದಲ್ಲಿ ಕಾಂಗ್ರೆಸ್ ಮೂಲೆ ಗುಂಪಾಗಿರಲಿದೆ ಎಂದು ಆಶೋಕ್ ಹೇಳಿದ್ದಾರೆ.
ನಮ್ಮ ಮುಖ್ಯಮಂತ್ರಿಗಳು ಸರಳ ಮುಖ್ಯಮಂತ್ರಿ, ಜನಸಾಮಾನ್ಯರ ಮುಖ್ಯಮಂತ್ರಿ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ| ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿ ಪ್ರತಿಷ್ಠಾಪನೆ ಕಸರತ್ತು ನಡೆದಿದೆ: ಕಾಂಗ್ರೆಸ್