ವಿಜಯಪುರ: ʻʻಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲ್ಲ, ಅವರನ್ನು ಬಲಿಪಶು ಮಾಡುತ್ತಾರೆʼʼ- ಹೀಗೆಂದು ಹೇಳಿದ್ದಾರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.
ಅವರು ವಿಜಯಪುರದಲ್ಲಿ ಮಾತನಾಡಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ, ಮುಸ್ಲಿಂ ಮೀಸಲಾತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು.
ʻʻಐದು ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತುʼʼ ಎಂದು ಕ್ಷೇತ್ರ ಹುಡುಕಾಟದ ವಿಚಾರದಲ್ಲಿ ತಿವಿದರು. ಸಿದ್ದರಾಮಯ್ಯ ಅವರ ಕುರುಬ ಸಮುದಾಯದವರು ಕಾಂಗ್ರೆಸನ್ನು ಬೆಂಬಲಿಸಬಾರದು. ಯಾಕೆಂದರೆ ಅವರನ್ನು ಕಾಂಗ್ರೆಸ್‌ನವರು ಮುಖ್ಯಮಂತ್ರಿ ಮಾಡಲ್ಲ. ಕೇವಲ ಬಲಿಪಶು ಮಾಡ್ತಾರೆ ಎಂದರು.
ʻʻಅತಿಯಾದ ಮುಸ್ಲಿಂ ತುಷ್ಟೀಕರಣವೇ ಸಿದ್ದರಾಮಯ್ಯ ಅವರ ಈಗಿನ ಈ ಸ್ಥಿತಿಗೆ ಕಾರಣ. ಸಿದ್ದರಾಮಯ್ಯ ಫುಲ್ ಒನ್ ಸೈಡ್ ಹೋಗಿದ್ದಾರೆ, ಎಲ್ಲ ಜನಾಂಗಗಳನ್ನ ಪ್ರೀತಿ ಮಾಡಬೇಕು. ಒಂದೇ ಜನಾಂಗವನ್ನು ತಲೆ ಮೇಲೆ ಕೂರಿಸಿಕೊಂಡರೆ ಉಳಿದವರು ಬುದ್ಧಿ ಕಲಿಸುತ್ತಾರೆʼʼ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದರು!
ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻವರುಣ ಕೂಡಾ ಸಿದ್ದರಾಮಯ್ಯಗೆ ಅಷ್ಟು ಸುಲಭ ಇಲ್ಲ. ವರುಣಾದಲ್ಲೂ ಗೆಲ್ಲೋದು ಕಷ್ಟ. ಸೋಶಿಯಲ್ ಇಂಜಿನಿಯರಿಂಗ್ ಅಷ್ಟು ಸರಿ ಇಲ್ಲ. ಮೊದಲು ಜನ ಮುಗ್ದರಿದ್ದರು. ಓಟು ಹಾಕ್ತಿದ್ರು, ಈಗ ಯಾರು ಏನು ಮಾಡಿದ್ದಾರೆ ಅನ್ನೋ ಲಿಸ್ಟ್ ಜನರ ಬಳಿ ಇದೆʼʼ ಎಂದು ಎಚ್ಚರಿಕೆ ನೀಡಿದರು.
ʻನಾಳೆ ಗೂಂಡಾನನ್ನು ಮುಖ್ಯಮಂತ್ರಿ ಮಾಡಿದರೆ ನಾವು, ನೀವು ಸೇರಿಯೇ ಸಾಯ್ತೇವೆʼʼ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರ ಮೇಲೂ ದಾಳಿ ನಡೆಸಿದರು.
ಮೀಸಲಾತಿ ಏನು ಮುಸ್ಲಿಮರ ಅಪ್ಪಂದಾ?
ಮುಸ್ಲಿಮರ ಮೀಸಲಾತಿ ಕಡಿತ ವಿಚಾರದಲ್ಲೂ ಪ್ರತಿಕ್ರಿಯಿಸಿದ ಯತ್ನಾಳ್, ಮುಸ್ಲಿಮರು ಮೂರು ಕಡೆಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಅವರಿಗೆ ಒಂದೇ ಕಡೆಗೆ ಲಾಭ ಸಿಕ್ಕಿದರೆ ಸಾಕು. ಹಾಗೆ ಮೂರು ಮೂರು ಕಡೆ ಲಾಭ ಪಡೆಯಲು ಮೀಸಲಾತಿ ಇವರಪ್ಪನ ಮನೆಯದಾ ಎಂದು ಖಡಕ್ಕಾಗಿ ಕೇಳಿದರು ಯತ್ನಾಳ್.
ʻʻದಲಿತರಿಗೆ ಇನ್ನೂ 2 ಪರ್ಸೆಂಟ್ ಮೀಸಲಾತಿ ಹೆಚ್ಚು ಮಾಡ್ತೀವಿ. ಈಗ 17 ಶೇಕಡಾ ಇದೆ. ಅದು ಮುಂದೆ 19 ಆಗುತ್ತದೆ. ಮುಂದೆ ನರೇಂದ್ರ ಮೋದಿ ಅವರು 27 ಪರ್ಸೆಂಟ್ ಮಾಡ್ತಾರೆ ಎಂದು ಯತ್ನಾಳ್ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಿಸಲಾತಿ ರದ್ದು ಮಾಡುತ್ತೇವೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಐತಿಹಾಸಿಕ ನಿರ್ಣಯದಿಂದ ಕಾಂಗ್ರೆಸ್ ಕಂಗಾಲಾಗಿದೆ. ಕಾಂಗ್ರೆಸ್ ಥರಥರ ಎಂದು ನಡುಗಿ ಹೋಗಿದೆ ಎಂದರು. ಡಿ.ಕೆ ಶಿವಕುಮಾರ್‌ಗೆ ತಾಕತ್ತಿದ್ದರೆ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಎಂದು ಚುನಾವಣೆಯಲ್ಲಿ ಘೋಷಣೆ ಮಾಡಲಿ ಎಂದು ಯತ್ನಾಳ್ ಸವಾಲು ಹಾಕಿದರು. ಮೀಸಲಾತಿ ರದ್ದು ಮಾಡ್ತೀವಿ ಎಂದ್ರೆ ಕಾಂಗ್ರೆಸ್‌ಗೆ ಠೇವಣಿ ಕೂಡಾ ಸಿಗಲ್ಲ ಎಂದರು!
ಇದನ್ನೂ ಓದಿ Reservation fight : ಯಾವ ಸ್ವಾಮೀಜಿಗಳಿಗೂ ಒತ್ತಡ ಹಾಕಿಲ್ಲ, ಪ್ರಮಾಣ ಮಾಡುತ್ತೇನೆ ಎಂದ ಸಿಎಂ, ಡಿಕೆಶಿಗೆ ತಿರುಗೇಟು