ಮಂಗಳೂರು: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ (Puttur News) ಪುರುಷಕಟ್ಟೆಯಲ್ಲಿ ಮಂಗಳವಾರ ನಡೆದಿದೆ.
ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಹಲ್ಲೆಗೊಳಗಾದ ಕೈ ಕಾರ್ಯಕರ್ತ. ಪ್ರವೀಣ್ ಹಲ್ಲೆ ಮಾಡಿದ ಹಿಂದು ಕಾರ್ಯಕರ್ತ. ಹಲ್ಲೆಗೊಳಗಾಗಿರುವ ಪ್ರವೀಣ್ ಆಚಾರ್ಯ, ಚುನಾವಣೆಗೂ ಮೊದಲೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಮಾಡಿದ್ದ. ಆದರೆ, ಮನೆಗೆ ನುಗ್ಗಿ ಪ್ರವೀಣ್ ಆಚಾರ್ಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಹಿಂದು ಕಾರ್ಯಕರ್ತ ಪ್ರವೀಣ್ ವಿರುದ್ಧ ಆರೋಪ ಕೇಳಿಬಂದಿದೆ.
ಹಲ್ಲೆಗೀಡಾದ ಪ್ರವೀಣ್ ಆಚಾರ್ಯಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಇದನ್ನೂ ಓದಿ | Haliyal News: ಶಾಲೆ ಆವರಣದಲ್ಲಿ ವಿಷಕಾರಿ ಬೀಜ ತಿಂದು 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಕೋಲಾರ: ಕೌಟುಂಬಿಕ ಕಲಹದಿಂದ ಮನನೊಂದು ಇಬ್ಬರು ಮಕ್ಕಳನ್ನು ಕೊಂದ ತಾಯಿ, ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಾಲೂಕಿನ ಉಪ್ಪಗುಂಟೆ ಗ್ರಾಮದಲ್ಲಿ ನಡೆದಿದೆ. ಸುಗುಣ (32) ಮೃತ ತಾಯಿ. ಪ್ರೀತಂಗೌಡ (12) ನಿಶ್ಚಿತ (5) ಮೃತ ಮಕ್ಕಳು.
ಮನೆಯಲ್ಲಿ ಮೊದಲಿಗೆ ಇಬ್ಬರು ಮಕ್ಕಳ ಬಾಯಿಗೆ ಬಿಗಿಯಾಗಿ ಟೇಪ್ ಸುತ್ತಿದ್ದಾಳೆ. ಇದರಿಂದ ಮಕ್ಕಳು ಉಸಿರಾಡಲು ಸಾಧ್ಯವಾಗದೆ ಕೊನೆಯುಸಿರೆಳೆದಿವೆ. ನಂತರ ತಾಯಿ ನೇಣಿಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಳ ಗಂಡ ಮುರುಳಿ ಎಂಬುವವರು ಆಗಿದ್ದು, ಇಬ್ಬರು ಕೂಡ ಸಾರಿಗೆ ಇಲಾಖೆಯಲ್ಲಿ ನೌಕರರಾಗಿದ್ದರು. ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದ್ದು, ಪೊಲೀಸರ ತನಿಖೆಯ ನಂತರ ಮತ್ತಷ್ಟು ಮಾಹಿತಿ ತಿಳಿದುಬರಲಿದೆ.