ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪೀಠಾಧ್ಯಕ್ಷ ಮುರುಘಾ ಶರಣರ (Murugha Seer) ವಿರುದ್ಧ ಪಿತೂರಿ ಪ್ರಕರಣದಲ್ಲಿ ಬಂಧಿತರಾಗಿದ್ದ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮಂಗಳವಾರ (ಡಿ. ೨೭) ಬಿಡುಗಡೆಯಾಗಿದ್ದು, ಕಾರಾಗೃಹದ ಬಳಿ ಜಮಾಯಿಸಿದ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಹಾರ ಹಾಕಿ ಬಸವರಾಜನ್ ಅವರು ಬೆಂಬಲಿಗರು ಸ್ವಾಗತಿಸಿದರು. ಅಲ್ಲದೆ, ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದರು.
ನವೆಂಬರ್ ೧೦ರಂದು ಬಂಧನ
ಮುರುಘಾ ಶರಣರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುವಂತೆ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಬಾಲಕಿಯರ ಮೇಲೆ ಒತ್ತಡ ತರುವ ಮೂಲಕ ಬಂಧನಕ್ಕೆ ಪಿತೂರಿ ಮಾಡಿದ್ದರು ಎಂಬ ಆರೋಪದ ಮೇಲೆ ಬಸವರಾಜನ್ ಅವರ ಮೇಲೆ ನವೆಂಬರ್ 9ರಂದು ಪಿತೂರಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಬಸವರಾಜನ್ ಬಂಧನವಾಗಿತ್ತು.
ಇದನ್ನೂ ಓದಿ | Karnataka Election | ಆಪರೇಷನ್‌ಗೆ ಇಳಿಯಲಿದ್ದಾರೆ ಅಮಿತ್ ಶಾ; ಡಿಸೆಂಬರ್ 30ರಂದು ಯಾರ‍್ಯಾರು ಬರಲಿದ್ದಾರೆ ಪಕ್ಷಕ್ಕೆ?
ಬಳಿಕ ಬಸವರಾಜನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಬಸವರಾಜನ್ ಅವರು ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ.22ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಈಗ ಹೈಕೋರ್ಟ್‌ನಿಂದ ಆದೇಶ ಪ್ರತಿ ತಂದ ಬಳಿಕ ಬಿಡುಗಡೆ ಮಾಡಲಾಗಿದೆ.
ಮುರುಘಾ ಮಠಕ್ಕೆ ಭೇಟಿ
ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಂಡ ಬಸವರಾಜನ್ ಬಳಿಕ ಮುರುಘಾಮಠಕ್ಕೆ ಭೇಟಿ ನೀಡಿ ಮಠದ ಕರ್ತೃ ಗದ್ದುಗೆಯ ದರ್ಶನ ಪಡೆದರು. ಈ ವೇಳೆ ಬೆಂಬಲಿಗರು ಜತೆಗಿದ್ದರು. ಮಾರ್ಗ ಮಧ್ಯೆ ಮದಕರಿ ವೃತ್ತದಲ್ಲಿ ಪಟಾಕಿ ಸಿಡಿಸಿದ ಬೆಂಬಲಿಗರು ಸಂಭ್ರಮಿಸಿದರು.
ದ್ವೇಷದಿಂದ ನನ್ನ ಮೇಲೆ ಕೇಸ್: ಬಸವರಾಜನ್
ಬಳಿಕ ಮಾತನಾಡಿದ ಎಸ್.ಕೆ. ಬಸವರಾಜನ್, ನನ್ನ ಮೇಲೆ ದ್ವೇಷದಿಂದ ಪ್ರಕರಣ ದಾಖಲು ಮಾಡಲಾಗಿದೆ. ಒತ್ತಡಕ್ಕೆ ಮಣಿದು ಪೊಲೀಸರು ಕೇಸ್ ಹಾಕಿದ್ದಾರೆ. ಸತ್ಯಕ್ಕೆ ಜಯ ಸಿಗುತ್ತದೆ ಎಂಬ ಭರವಸೆ ಇದೆ. ಮುರುಘಾಶ್ರೀ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಇನ್ನೂ ಇಬ್ಬರ ಬಂಧನ ಆಗಿಲ್ಲ. ಒಂದೂವರೆ ತಿಂಗಳ ಜೈಲುವಾಸ ಒಂದು ಅನುಭವ. ಜೈಲುವಾಸ ಎಲ್ಲರಿಗೂ ಸಿಗಲ್ಲ, ನನಗೆ ಸಿಕ್ಕಿದೆ. ಮುಂದೆ ಶಾಸಕನಾಗಿ ಬಂದು ಜೈಲಿನ ನ್ಯೂನತೆ ಸರಿಪಡಿಸುತ್ತೇನೆ. ಜೈಲಿನಲ್ಲಿರುವ ಬಂಧಿಗಳಿಗೆ ಭರವಸೆ ನೀಡಿ ಬಂದಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | ನನಗಿನ್ನು ಅಪ್ಪನಾಗಲು ಸಾಧ್ಯವೇ ಇಲ್ಲ, ಪತ್ನಿಯರಿಗೆಲ್ಲ ಮಾತ್ರೆ ತೆಗೆದುಕೊಳ್ಳಲು ಹೇಳಿದ್ದೇನೆ; ಉಗಾಂಡದ 12 ಮಹಿಳೆಯರ ಗಂಡನ ಗೋಳು!
ನಮ್ಮ ಕ್ಷೇತ್ರದ ಜನ ಬೆಂಬಲಿಸಿ ನನ್ನ ಗೆಲ್ಲಿಸುವ ಭರವಸೆಯಿದೆ. ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಭರವಸೆ ಇದೆ. ನಾನು, ನನ್ನ ಪತ್ನಿ ಮತ್ತು ಜತೆಗಿರುವವರು ಆರೋಪ ಮುಕ್ತರಾಗುತ್ತೇವೆ. ಕಾನೂನು ಹೋರಾಟ ಮಾಡಿ ಗೆದ್ದು ಬರುತ್ತೇವೆ. ಜೈಲಿನಲ್ಲಿ ಮುರುಘಾಶ್ರೀ ನನ್ನ ಭೇಟಿಗೆ ಪ್ರಯತ್ನಿಸಿದ್ದರು. ಮುರುಘಾಶ್ರೀ ಸಂಧಾನಕ್ಕಾಗಿ ನನ್ನ ಭೇಟಿಗೆ ಹೇಳಿ ಕಳುಹಿಸಿದ್ದರು. ಅಧಿಕಾರಿಗಳು ಅವಕಾಶ ನೀಡಿಲ್ಲ, ನಾನು ಸಹ ಭೇಟಿಗೆ ಒಪ್ಪಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪೋಕ್ಸೊ ಪ್ರಕರಣದಲ್ಲಿ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿರುವುದರಿಂದ ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ್ದು ಸರಿಯಿದೆ. ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿ ಎಂದು ಪ್ರತಿಭಟಿಸಿದ್ದು ಸರಿಯಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು ತೀರ್ಪು ಬರುವವರೆಗೆ ಕಾಯಬೇಕು. ಈಗಲೇ ಸರ್ಕಾರದ ಮೇಲೆ ಒತ್ತಡ ಹೇರವುದು ಸರಿಯಲ್ಲ ಎಂದು ಬಸವರಾಜನ್ ಹೇಳಿದ್ದಾರೆ.
ಇದನ್ನೂ ಓದಿ | OBC Reservation In UP | ಚುನಾವಣೆಯಲ್ಲಿ ಒಬಿಸಿ ಮೀಸಲಾತಿ ರದ್ದು, ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಭಾರಿ ಹಿನ್ನಡೆ