ಕಾರವಾರ: ಬಾಂಬ್ ಸ್ಫೋಟ ಸಂಚು ಪ್ರಕರಣದಲ್ಲಿ (Bomb Blast Conspiracy) ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ಧಿಬಾಪಾ ಆರೋಪಗಳಿಂದ ಮುಕ್ತವಾಗಿದ್ದು, 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಈತನನ್ನು ಆರೋಪಮುಕ್ತಗೊಳಿಸಿ ದೆಹಲಿಯ ಪಟಿಯಾಲಾ ಹೌಸ್ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ ಅಬ್ದುಲ್ ವಾಹಿದ್ ಸಿದ್ದಿಬಾಪಾ ವಿರುದ್ಧ 2007ರಿಂದ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಸೇರಿ ದೇಶದ ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಈತನನ್ನು ಮೇ 2016ರ 20ರಂದು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಈತ ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸೀನ್ ಭಟ್ಕಳ್ ಸಂಬಂಧಿ ಎನ್ನಲಾಗಿದೆ.
ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಪಟಿಯಾಲಾ ಸೆಷನ್ಸ್ ಕೋರ್ಟ್ ಈತನನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದ ತೀರ್ಪು ನೀಡಿದೆ. ಹೀಗಾಗಿ ಅಬ್ದುಲ್ ವಾಹಿದ್ ಸಿದ್ದಿಬಾಪಾ ಸೋಮವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ.
ಬಸ್‌ನ ಚಕ್ರದಡಿ ಸಿಲುಕಿದರೂ ಬದುಕಿ ಬಂದ ಸವಾರರು
ಗದಗ: ಬಸ್‌ನ ಚಕ್ರದಡಿ ಇಬ್ಬರು ಸವಾರರು ಸಿಲುಕಿ, ಕ್ಷಣಾರ್ಧದಲ್ಲೇ ಸಾವಿನ ದವಡೆಯಿಂದ ಪಾರಾಗಿರುವ ಘಟನೆ ಗದಗ ನಗರದ ಭೀಷ್ಮ ಕೆರೆ ಪಕ್ಕದ ಬನ್ನಿಕಟ್ಟಿ ವೃತ್ತದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ | Road Accident: ಬಂಗಾರಪೇಟೆಯಲ್ಲಿ ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಸವಾರರಿಬ್ಬರ ಸಾವು
ಶಿರಹಟ್ಟಿ ತಾಲೂಕಿನ ಮೆಕಾನಿಕ್‌ಗಳಾದ ಹಜರತ್ ಗೌಸಲಾಜುಮ್ ಮಜ್ಜೂರ (25) ಹಾಗೂ ಅಕ್ಬರಸಾಬ ಅಬ್ದುಲ್ ಸಾಬ ತಹಶೀಲ್ದಾರ (22) ಗಾಯಾಳುಗಳು. ಇವರು ಬೈಕ್ ಸಾಮಗ್ರಿ ಖರೀದಿಗೆ ಗದಗ ನಗರಕ್ಕೆ ಬೈಕ್‌ನಲ್ಲಿ ಬಂದಿದ್ದರು. ಈ ವೇಳೆ ನರಗುಂದ ಪಟ್ಟಣದಿಂದ ಗದಗ ಬಸ್ ನಿಲ್ದಾಣದತ್ತ ಬಸ್ ತೆರಳುತ್ತಿತ್ತು. ಇದೇ ವೇಳೆ ದತ್ತಾತ್ರೆಯ ರಸ್ತೆಯಿಂದ, ಬನ್ನಿಕಟ್ಟಿ ವೃತ್ತದತ್ತ ಸವಾರರು ಏಕಾಏಕಿ ಬಂದಾಗ ಬೈಕ್ ಸಮೇತ ಬಸ್‌ನ ಹಿಂಬದಿ ಚಕ್ರದಡಿಯಲ್ಲಿ ಸಿಲುಕಿದ್ದಾರೆ. ಈ ವೇಳೆ ಬಸ್ ಚಾಲಕ ಸಮಯಪ್ರಜ್ಞೆಯಿಂದ ತಕ್ಷಣ ಬ್ರೇಕ್ ಹಾಕಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಸ್ಥಳೀಯರು ಸವಾರರನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಕ್ಬರಸಾಬ್ ತಹಶೀಲ್ದಾರ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕೆಎಂಸಿಗೆ ದಾಖಲು ಮಾಡಲಾಗಿದೆ.